ಮಂಗಳವಾರ, ಸೆಪ್ಟೆಂಬರ್ 21, 2021
25 °C
ವೈದ್ಯರ ಕ್ಷೇಮಕ್ಕಾಗಿ ಸಾಮಾಜಿಕ ಭದ್ರತಾ ಯೋಜನೆ: ಡಾ.ವೆಂಕಟಾಚಲಪತಿ

ಯುವ ವೈದ್ಯರು ಐಎಂಎ ನೋಂದಣಿ ಪಡೆಯಿರಿ: ಡಾ.ಎಂ.ವೆಂಕಟಾಚಲಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕವು, ವೈದ್ಯರ ವೃತ್ತಿಪರ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕ್ಷೇಮಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಯುವ ವೈದ್ಯರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ವೆಂಕಟಾಚಲಪತಿ ಹೇಳಿದರು.

ಮಂಗಳೂರು ಐಎಂಎ ವತಿಯಿಂದ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಸಾಮಾಜಿಕ ಭದ್ರತಾ ಯೋಜನೆಯಡಿ ವೃತ್ತಿನಿರತ ವೈದ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ₹ 50-60 ಲಕ್ಷ ಪರಿಹಾರ ಧನ ವಿತರಿಸಲಾಗುತ್ತಿದೆ. ಕೋವಿಡ್‌ನಿಂದ ವೈದ್ಯರು ಮೃತಪಟ್ಟರೆ ಒಂದೂವರೆ ಪಟ್ಟು ಪರಿಹಾರ ಮೊತ್ತವನ್ನು ನೀಡಲಾಗುತ್ತದೆ. ಇತ್ತೀಚೆಗೆ ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯ ವೇಳೆ ಮೃತಪಟ್ಟ ಇಬ್ಬರು ವೈದ್ಯರಿಗೆ ತಲಾ ₹ 95 ಲಕ್ಷಕ್ಕಿಂತಲೂ ಹೆಚ್ಚು ಪರಿಹಾರ ನೀಡಲಾಗಿದೆ. ಕುಟುಂಬದ ಭದ್ರ ಭವಿಷ್ಯಕ್ಕೆ ಪೂರಕವಾಗುವ ಈ ಯೋಜನೆಗೆ ವೈದ್ಯರು ಹೆಚ್ಚು ಹೆಚ್ಚಾಗಿ ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ವೈದ್ಯರಿಗೆ ವೃತ್ತಿ ಸಮಸ್ಯೆಗಳು ಎದುರಾಗಿ ನಷ್ಟ ಪರಿಹಾರ ತುಂಬಿಕೊಡುವ ಪರಿಸ್ಥಿತಿ ಬಂದಾಗ, ನಷ್ಟ ಪರಿಹಾರ ಯೋಜನೆಯಡಿ ₹1 ಕೋಟಿವರೆಗೆ ಐಎಂಎ ಭರ್ತಿ ಮಾಡಿಕೊಡುತ್ತದೆ. ವೈದ್ಯರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ವಾರ್ಷಿಕ ₹ 2 ಲಕ್ಷವರೆಗೆ ವೈದ್ಯಕೀಯ ವೆಚ್ಚ ಮರುಪಾವತಿಯ ಆರೋಗ್ಯ ಯೋಜನೆ ಇದ್ದು, ಇಂಥ ಯೋಜನೆಗಳಿಗೆ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಮೂಲಕ ಇಡೀ ವೈದ್ಯಸಮುದಾಯಕ್ಕೆ ಇದರ ವಿಸ್ತೃತ ಪ್ರಯೋಜನ ಲಭ್ಯವಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ವಿಶೇಷ ಆಹ್ವಾನಿತರಾಗಿದ್ದರು. ಮಂಗಳೂರು ಐಎಂಎ ಅಧ್ಯಕ್ಷ ಡಾ.ಎಂ.ಎ.ಆರ್. ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಹಿರಿಯ ರೇಡಿಯಾಲಜಿಸ್ಟ್ ಡಾ.ಮುರಳೀಧರ ಕೃಷ್ಣ ಕೆ.ಎನ್., ಕುಟುಂಬ ವೈದ್ಯರಾದ ಡಾ.ಅರೋರ ಪಿಂಟೊ ಮತ್ತು ಡಾ.ವಿವೇಕಾನಂದ ಎಂ.ಭಟ್ ಅವರನ್ನು ಸನ್ಮಾನಿಸಲಾಯಿತು.

ಪದಾಧಿಕಾರಿಗಳಾದ ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ಡಾ.ಅಣ್ಣಯ್ಯ ಕುಲಾಲ್, ಡಾ.ಕೆ.ಆರ್.ಕಾಮತ್, ಡಾ.ಕುಮಾರ ಸ್ವಾಮಿ, ಡಾ.ಗೀತಾ ದೊಪ್ಪ, ಡಾ.ರವೀಂದ್ರ ಇದ್ದರು. ಕಾರ್ಯದರ್ಶಿ ಡಾ.ಅನಿಮೇಶ್ ಜೈನ್ ನಿರೂಪಿಸಿದರು.

‘ಸಂಘಟನೆ ಬಲಗೊಳ್ಳಲಿ’

ವೈದ್ಯವೃತ್ತಿ ಇಂದು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದು, ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ನೀತಿ ನಿಯಮ ರೂಪಿಸುವ ವೇಳೆ ನಮ್ಮ ಧ್ವನಿಯನ್ನು ಆಡಳಿತ ವರ್ಗ ಕೇಳುವಂತಾಗಬೇಕಾದರೆ, ಸಂಘಟನೆ ಬಲಗೊಳ್ಳಬೇಕು ಎಂದು ಡಾ.ವೆಂಕಟಾಚಲಪತಿ ಅಭಿಪ್ರಾಯಪಟ್ಟರು.

ದೇಶದಲ್ಲಿ 10 ಲಕ್ಷ ವೃತ್ತಿನಿರತ ವೈದ್ಯರಿದ್ದರೆ, ಐಎಂಎ ಸದಸ್ಯತ್ವ ಹೊಂದಿರುವವರು 3.5 ಲಕ್ಷ ಮಾತ್ರ. ರಾಜ್ಯದಲ್ಲಿ 1.5 ಲಕ್ಷ ಮಂದಿಯ ಪೈಕಿ, 40 ಸಾವಿರ ವೈದ್ಯರಷ್ಟೇ ಸದಸ್ಯತ್ವ ಹೊಂದಿದ್ದಾರೆ. ಪ್ರತಿ ವರ್ಷ ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ವೈದ್ಯ ಪದವೀಧರರು ಹೊರಬರುತ್ತಿದ್ದರೆ, ವೈದ್ಯರ ಪ್ರಾತಿನಿಧಿಕ ಸಂಸ್ಥೆಯಾದ ಐಎಂಎ ಸದಸ್ಯತ್ವ ಪಡೆಯುತ್ತಿರುವವರ ಸಂಖ್ಯೆ 400ಕ್ಕಿಂತ ಕಡಿಮೆ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.