ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗುವ ಬಳ್ಳಿಗೆ ಬುಟ್ಟಿಯ ರೂಪ

ಬಾಳ ಮುಸ್ಸಂಜೆಯಲ್ಲಿ ಕಾಯಕ ಪ್ರೀತಿ
Last Updated 8 ಫೆಬ್ರುವರಿ 2013, 11:52 IST
ಅಕ್ಷರ ಗಾತ್ರ

ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಸುಬಿನ ಹಾದಿ ಬದಲಾಗುತ್ತದೆ. ಹುಟ್ಟಿನಿಂದ ಸಾಯುವವರೆಗೆ ಯಾರಿಗೂ ಒಂದೇ ಕೆಲಸವನ್ನು ನೆಚ್ಚಿಕೊಂಡಿರುವುದು ಕಷ್ಟದ ಮಾತು. ಬದುಕಿನ ಹರೆಯದ ಏರಿಳಿತಗಳಿಗನುಗುಣವಾಗಿ ಕಸುಬಿನ ಗತಿಯನ್ನು, ಸ್ಥಿತಿಯನ್ನು ಮಾರ್ಪಾಡು ಮಾಡಬೇಕಾದ ಅನಿವಾರ್ಯತೆ, ಅಗತ್ಯತೆ ಬಹಳ. ನಿನ್ನೆ ಮಾಡುತ್ತಿದ್ದ ಕಾರ್ಯ ನಾಳೆ ಮಾಡುತ್ತೇನೆ ಎಂಬ ಖಾತ್ರಿ ಖಂಡಿತಾ ಇಲ್ಲ.

ಬದುಕು ಚಲನಶೀಲ. ಅಂತೆಯೆ ಕಸುಬು ಕೂಡ. 13 ವರ್ಷಗಳ ಹಿಂದೆ ಎಲ್ಲರಂತೆ ಮಣ್ಣು ಹೊರಲೋ, ತೋಟಕ್ಕೆ ಗೊಬ್ಬರ ಹಾಕಲೋ ಅಥವಾ ಇನ್ನೇನೋ ಕೆಲಸಕ್ಕೆ ಊರಲ್ಲೇ ಹೋಗುತಿದ್ದ ಬುಡೆಂಗಜ್ಜನಿಗೆ  ಕಳೆದ 13 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಾಯಿಲೆ ಅಪ್ಪಳಿಸಿ ನಂತರ ಬಹಳ ಶ್ರಮ ಬೇಡುವ ಕೆಲದ ಮಾಡಲಾಗಲಿಲ್ಲ.

ಆಗ ಅವರ ಕೈ ಹಿಡಿದದ್ದು ಬುಟ್ಟಿ ಹೆಣೆಯುವ ಕಾಯಕ. ಬಂಟ್ವಾಳ ತಾಲ್ಲೂಕಿನ ಇರ್ವತ್ತೂರಿನಲ್ಲಿ ಬಸ್ಸಿಂದಿಳಿದು ಕೊಡಂಬೆಟ್ಟು ಶಾಲೆಯ ಮಾರ್ಗದಲ್ಲಿ ಬರುವ ಯಾರಿಗಾದರೂ ಮಾರ್ಗದ ಏರುತಗ್ಗುಗಳನ್ನು ಬಿಟ್ಟು ಮೊದಲ ತಿರುವಿನಲ್ಲೇ  ಕಾಣುವ ಮತ್ತೊಂದು ಸಾಮಾನ್ಯ ದೃಶ್ಯವೆಂದರೆ ರಸ್ತೆಯ ಬದಿಯಲ್ಲಿ ಬಳ್ಳಿಯ ಚಿತ್ತಾರ ಬಿಡಿಸುತ್ತಿರುವಂತೆ ಕಾಣುವ ಬುಡೆಂಗ ಅಜ್ಜ ಸುತ್ತಲೊಂದಷ್ಟು ಬಳ್ಳಿಯನ್ನು ಹರವಿಕೊಂಡು, ಬುಟ್ಟಿಯೋ ಅಥವಾ ಇನ್ನೇನೋ ಹಳ್ಳಿ ಬದುಕಿನ ಸೊಗಡಿನೊಂದಿಗೆ ಥಳುಕು ಹಾಕಿರುವ ಪ್ರಕೃತಿಯಿಂದ ತಯಾರಿಸಿದ ವಸ್ತುಗಳನ್ನು ಹೆಣೆಯುವ ಕಾಯಕದಲ್ಲಿ ತೊಡಗಿರುತ್ತಾರೆ.

ಮಾರ್ಗ ಬದಿಯ ಹಲಸಿನ ಮರದ ಬುಡದಲ್ಲಿ ಅಗತ್ಯದ ಆಗಂತುಕನೊಬ್ಬನನಿಗೆ ಕಾಯುತ್ತಿರುವಂತೆ ಕೆಂಪಾದ ಕುರ್ಚಿಯೊಂದು ಕಾಯುತ್ತಿರುತ್ತದೆ. ಕೆಲವೊಮ್ಮೆ ಅದರ ಮೇಲೆ ಬಿಳಿಗಡ್ಡದ ಗಿಡ್ಡ ದೇಹದ ಮೇಲೆ ಹರೆಯದ ಹೆಜ್ಜೆಗಳು ಸ್ಪಷ್ಟವಾಗಿ ಕಾಣುವ 80 ವರ್ಷ ಸುಮಾರಿನ ಬುಡೆಂಗ ಅಜ್ಜ ಕುಳಿತಿರುತ್ತಾರೆ. ಅವರು ಸುಮ್ಮನೆ ಕೂರುತ್ತಾರೆ ಎಂದುಕೊಳ್ಳಬೇಡಿ.

ಹತ್ತಿರದ ಗುಡ್ಡದಿಂದ ಮಾದೆರು, ಕರಿಯ ಮಾದೆರು ಬಳ್ಳಿಗಳನ್ನು ಆರಿಸಿ ಅದರ ರೆಕ್ಕೆಗಳನ್ನು ಕತ್ತರಿಸಿ ಬುಟ್ಟಿ ಹೆಣೆಯಲು ಯೋಗ್ಯವಾಗುವಂತೆ ಒಪ್ಪ ಮಾಡುತ್ತಾರೆ.

ನಂತರರ ತನ್ನ ಮನೆಯ ಎದುರುಗಡೆಯ ಮಾರ್ಗಕ್ಕೆ ಹೊಂದಿಕೊಂಡಿರುವ ಹಲಸಿನ ಮರದ ಬುಡದೆಡೆಗೆ ತಂದು ಕುರ್ಚಿಯಲ್ಲಿ ಕುಳಿತು ಜೇಡನೊಂದು ಹೊಟ್ಟೆ ಹೊರೆಯುವಿಕೆಗೆ ಬಲೆಯ ನೇಯ್ದಂತೆ, ಬುಡೆಂಗಜ್ಜ ಪ್ರಕೃತಿಯ ಬಳ್ಳಿಗಳಿಂದ ಬದುಕ ಹೆಣೆಯುತ್ತಾರೆ.

ಬುಟ್ಟಿಯೊಂದನ್ನು ಕವುಚಿ ಹಾಕಿ ಬಳ್ಳಿ ಹೇಗೆ ಹೇಣೆಯಲ್ಪಟ್ಟಿದೆ ಎಂದು ನೋಡಿಯೇ ಕಲಿತ ಇವರು ಪ್ರಥಮ ದಿನಗಳಲ್ಲಿ ದಿನವೊಂದಕ್ಕೆ ಮೂರರಿಂದ ನಾಲ್ಕು ಬುಟ್ಟಿಗಳನ್ನು ಹೆಣೆಯುತ್ತಿದ್ದರಂತೆ.

`ಆಗ ಬಳ್ಳಿಗಳು ಕಾಡಿನಲ್ಲಿ ಹೇರಳವಾಗಿತ್ತು, ಬುಟ್ಟಿ ಹೆಣೆಯುವಷ್ಟು ತ್ರಾಣವೂ ಇತ್ತು...' ಎನ್ನುವ ಬುಡೆಂಗ ಅಜ್ಜ, `ಈಗ ಕಾಡು ನಾಶವಾಗಿ ಬುಟ್ಟಿಗೆ ಬೇಕಾದಷ್ಟು ಬಳ್ಳಿಗಳು ಸಿಗುವುದು ಅಪರೂಪ, ಅಲ್ಲದೆ ಎರಡು ದಿನಕ್ಕೆ ಒಂದು ಬಟ್ಟಿ ಹೆಣೆಯಲು ಮಾತ್ರ ಸಾಧ್ಯವಾಗುತ್ತದೆ.  ಒಂದು ಬುಟ್ಟಿಗೆ 60 ರೂಪಾಯಿಯಂತೆ ಮಾರುತ್ತೇನೆ' ಎನ್ನುತ್ತಾರೆ.

ಇರ್ವತ್ತೂರು ಕೃಷಿ ಪ್ರಧಾನವಾದ ಪ್ರದೇಶವಾಗಿರುವುದರಿಂದ ಇವರಲ್ಲಿ ತರಗೆಲೆ ತುಂಬಿಸುವ ಬುಟ್ಟಿ , ಮಣ್ಣು ಹೊರುವ ಬುಟ್ಟಿಗೆ ಬೇಡಿಕೆ ಇದೆ. ಕೃಷಿಕರು ತಮ್ಮ ಅಗತ್ಯಕ್ಕೆ ಅನುಗುಣವಾದ ಬುಟ್ಟಿ ತಯಾರಿಸುವಂತೆ ಕೇಳಿಕೊಳ್ಳುತ್ತಾರೆ. ಆದರೆ, ಅವರು ಹೇಳಿದಷ್ಟು ಬುಟ್ಟಿ ತಯಾರಿಸಲು ವಯಸ್ಸು ಕೈಕೊಡುತ್ತಿದೆ ಎಂಬುದು ಅಜ್ಜನ ಅಳಲು.ಬಳುಕೋ, ಬಾಗೋ ಲಕ್ಷಣ ಹೊಂದಿರುವ ಬಳ್ಳಿಗಳನ್ನು ತಮಗೆ ಬೇಕಾದಂತೆ ಬಾಗಿಸಿ ಬುಟ್ಟಿಯ ರೂಪ ಕೊಡುವಲ್ಲಿ ಬುಡೆಂಗಜ್ಜರ ಶ್ರಮ, ತನ್ಮಯತೆ ಎದ್ದು ಕಾಣುತ್ತದೆ. ಇವರು ತಯಾರಿಸಿದ ಬುಟ್ಟಿಗಳು ಎಲ್ಲಿಯ ಮಣ್ಣನ್ನು ಇನ್ನೆಲ್ಲೋ ಸಾಗಿಸಿವೆ.

ಹಟ್ಟಿಯ ಗೊಬ್ಬರವನ್ನು ಗದ್ದೆಗೋ, ತೋಟಕ್ಕೋ ಹಾಕಿ ಸಾರ್ಥಕತೆ ಕಂಡಿವೆ, ಬಟ್ಟಲಿನಂತಹ ಅವರು ಸಪೂರ ಬಳ್ಳಿಯಲ್ಲಿ ಮಾಡಿದ ರಚನೆಗಳು ಹಳ್ಳಿಯ ಮನೆಗಳಲ್ಲಿ ಕವಳದ ಬಟ್ಟಲುಗಳಾಗಿ ನೆಂಟರೆದುರು ತಣ್ಣಗೆ ಕೂತಿವೆ. ಸ್ವತಃ ಬಾಗಿದ ಬಳ್ಳಿಯಂತಾಗಿದ್ದರೂ ಬದುಕಿನ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳದ ಬುಡೆಂಗಜ್ಜ ಬಳ್ಳಿಯನ್ನು ಮೆಟ್ಟುತ್ತಾ, ಕಟ್ಟುತ್ತಾ ಸ್ವಾಭಿಮಾನದ ಬದುಕಿಗೆ ಮಾದರಿಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT