ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನಲ್ಲಿ ಬೇಯಬೇಕು ಮಳೆಯಲ್ಲಿ ನೆನೆಯಬೇಕು..ಇದು ಬಸ್‌ ಪ್ರಯಾಣಿಕರ ಗೋಳು

Last Updated 16 ಜೂನ್ 2019, 19:45 IST
ಅಕ್ಷರ ಗಾತ್ರ

ಮಂಗಳೂರು: ಮಳೆ ಸುರಿದರೆ ನೆನೆಯಬೇಕು, ಬಿಸಲು ಹೆಚ್ಚಾದರೆ ಬೇಯಬೇಕು. ಕುಳಿತುಕೊಳ್ಳಲು ಜಾಗವಿಲ್ಲ, ಶೌಚಾಲಯ, ಕುಡಿಯುವ ನೀರಿನ ಸೌಕರ್ಯ ಕೇಳಲೇಬೇಡಿ. ಕೆಲವೊಮ್ಮೆ ರಸ್ತೆಯ ಮಧ್ಯದಲ್ಲೇ ನಿಂತು ಬಸ್ಸಿಗಾಗಿ ಕಾಯಬೇಕು. ಬಸ್‌ ಏರುವ, ಇಳಿಯುವ ಸಮಯದಲ್ಲಿ ತುಸು ವ್ಯತ್ಯಾಸ ಆದರೂ ಪ್ರಾಣಕ್ಕೇ ಸಂಚಕಾರ...

ಇದು ಸ್ಮಾರ್ಟ್‌ ಸಿಟಿಯಾಗಿ ಪರಿವರ್ತನೆ ಹೊಂದುವ ಧಾವಂತದಲ್ಲಿರುವ ಮಂಗಳೂರು ನಗರದ ಬಸ್‌ ಪ್ರಯಾಣಿಕರ ಪಾಡು. ಸಮೂಹ ಸಾರಿಗೆಯಲ್ಲಿ ಖಾಸಗಿ ಪ್ರಾಬಲ್ಯ ಮೆರೆಯುವುದರಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಮಂಗಳೂರಿನಲ್ಲಿ ಬಸ್‌ ಪ್ರಯಾಣಿಕರನ್ನು ಕೇಳುವವರೇ ಇಲ್ಲ. ಸರಾಸರಿ ದಿನವೊಂದಕ್ಕೆ ಮೂರೂವರೆ ಲಕ್ಷದಷ್ಟು ಜನರು ಬಸ್‌ನಲ್ಲೇ ಪ್ರಯಾಣಿಸುವ ಈ ನಗರದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಸಂಪೂರ್ಣವಾಗಿ ಸುಸಜ್ಜಿತವಾದ ಒಂದು ಬಸ್‌ ನಿಲ್ದಾಣ, ಬಸ್‌ ಪ್ರಯಾಣಿಕರ ತಂಗುದಾಣ ಸಿಗುವುದು ಕಷ್ಟ.

134 ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿರುವ ಮಂಗಳೂರು ನಗರದ ಮೂಲೆ ಮೂಲೆಗೂ ನಗರ ಸಾರಿಗೆ ಬಸ್‌ಗಳ ಸೌಲಭ್ಯವಿದೆ. 350 ನಗರ ಸಾರಿಗೆ ಬಸ್‌ಗಳು ದಿನಕ್ಕೆ ಸರಾಸರಿ 15 ಟ್ರಿಪ್ ಓಡುತ್ತಿವೆ. ಜಿಲ್ಲೆಯ ವಿವಿಧ ಭಾಗಗಳು, ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರ ಮತ್ತಿತರ ಕಡೆಗೆ ಸಂಚರಿಸುವ 420 ಬಸ್‌ಗಳಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 100 ಬಸ್‌ಗಳು ನಿತ್ಯವೂ ಮಂಗಳೂರಿನಿಂದ ಓಡುತ್ತವೆ. ಒಟ್ಟು 870 ಬಸ್‌ಗಳು ಮಂಗಳೂರು ನಗರದ ಒಳಭಾಗದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾಗೂ ಮಂಗಳೂರಿನಿಂದ ಹೊರಗಿನ ಸ್ಥಳಗಳಿಗೆ ಸಂಚರಿಸುತ್ತವೆ. ಇಷ್ಟೊಂದು ದೊಡ್ಡಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸುವ ನಗರದಲ್ಲಿ ಬಸ್‌ಪ್ರಯಾಣಿಕರ ಅನುಕೂಲಕ್ಕಾಗಿ ಇರುವ ಸೌಕರ್ಯಗಳನ್ನು ಹುಡುಕಿ ಹೊರಟರೆ ನಿರಾಶೆ ಮೂಡುತ್ತದೆ.

ನಿಲ್ದಾಣವೇ ಇಲ್ಲ: 350 ನಗರ ಸಾರಿಗೆ ಬಸ್‌ಗಳು ಓಡುವ ಮಂಗಳೂರಿನಲ್ಲಿ ನಗರ ಸಾರಿಗೆ ಬಸ್‌ ಬಳಕೆದಾರರ ಅನುಕೂಲ
ಕ್ಕಾಗಿ ಒಂದು ಸುಸಜ್ಜಿತ ಬಸ್‌ ನಿಲ್ದಾಣವೇ ಇಲ್ಲ. ಹೆಚ್ಚಿನ ಬಸ್‌ಗಳು ಸ್ಟೇಟ್‌ ಬ್ಯಾಂಕ್‌ನಿಂದ ನಗರದ ವಿವಿಧೆಡೆಗೆ ಸಂಚರಿಸುತ್ತವೆ. ಸ್ಟೇಟ್‌ ಬ್ಯಾಂಕ್‌ ಬಳಿಯ ರಸ್ತೆಯನ್ನೇ ನಗರ ಸಾರಿಗೆ ಬಸ್‌ ನಿಲ್ದಾಣವಾಗಿ ಹಲವು ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ. ಅಲ್ಲಿ ಪ್ರಯಾಣಿಕರಿಗಾಗಿ ಯಾವ ಸೌಲಭ್ಯವೂ ಇಲ್ಲ.

‘ದೇಶದಲ್ಲಿ ಅತ್ಯುತ್ತಮ ನಗರ ಸಾರಿಗೆ ವ್ಯವಸ್ಥೆ ಇರುವ ನಗರಗಳಲ್ಲಿ ಮಂಗಳೂರು ಮುಂಚೂಣಿಯಲ್ಲಿದೆ. ಆದರೆ, ನಗರ ಸಾರಿಗೆ ಬಸ್‌ಗಳಿಗಾಗಿ ಒಂದು ಸುವ್ಯವಸ್ಥಿತ ನಿಲ್ದಾಣ ಇಲ್ಲದಿರುವ ನಗರ ಮಂಗಳೂರು ಮಾತ್ರವೇ ಇರಬಹುದು ಅನಿಸುತ್ತದೆ. ಬಸ್‌ ನಿಲ್ದಾಣವೂ ಇಲ್ಲ, ಬಸ್‌ ಶೆಲ್ಟರ್‌ಗಳೂ ಇಲ್ಲ. ಆದರೂ, ಈ ವ್ಯವಸ್ಥೆ ಸಾಗಿಕೊಂಡು ಹೋಗುತ್ತಿರುವುದು ಅಚ್ಚರಿಯೇ ಸರಿ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ.

ಸುಸಜ್ಜಿತವಾದ ಬಸ್‌ ಶೆಲ್ಟರ್‌ಗಳನ್ನು ನಿರ್ಮಿಸಬೇಕು. ಶೆಲ್ಟರ್‌ ಒಳಗಡೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸುವ ಶೆಲ್ಟರ್‌ಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಇದೆಲ್ಲವನ್ನೂ ಮಾಡಲು ಸಾಧ್ಯವಿದೆ. ಆದರೆ, ಸಮನ್ವಯ ಮತ್ತು ಬದ್ಧತೆ ಮುಖ್ಯ ಎನ್ನುತ್ತಾರೆ ಅವರು.

ಬಸ್‌ ಮಾಲೀಕರ ಸಂಘದ ಬಳಿ ಇರುವ ಅಧಿಕೃತ ಮಾಹಿತಿ ಪ್ರಕಾರ, ನಗರದಲ್ಲಿ 779 ಸ್ಥಳಗಳಲ್ಲಿ ಬಸ್‌ಗಳಿಗೆ ನಿಲುಗಡೆ ನೀಡಲಾಗುತ್ತಿದೆ. ಕಂಕನಾಡಿಯಲ್ಲಿ ಸ್ವಲ್ಪ ವಿಸ್ತಾರವಾಗಿದ್ದ ಬಸ್‌ ನಿಲ್ದಾಣವನ್ನು ಬಹುಮಹಡಿ ಮಾರುಕಟ್ಟೆ ನಿರ್ಮಾಣಕ್ಕಾಗಿ ಮುಚ್ಚಲಾಗಿದೆ. ಲೇಡಿಗೋಶನ್‌ ಆಸ್ಪತ್ರೆ, ಬಾವುಟಗುಡ್ಡೆ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ, ಕರಾವಳಿ ವೃತ್ತ, ಲಾಲ್‌ಬಾಗ್‌ ಸೇರಿದಂತೆ ಕೆಲವೇ ಸ್ಥಳಗಳಲ್ಲಿ ಬಸ್‌ ಶೆಲ್ಟರ್‌ಗಳು ಉತ್ತಮ ಸ್ಥಿತಿಯಲ್ಲಿವೆ.

ಹಂಪನಕಟ್ಟೆಯಲ್ಲಿ ಇದ್ದ ಬಸ್‌ ಶೆಲ್ಟರ್‌ ಎತ್ತಂಗಡಿಯಾಗಿ ವರ್ಷಗಳೇ ಕಳೆದವು. ಕಾಂಕ್ರೀಟ್‌ ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ನೆಲಸಮ ಮಾಡಲಾದ ಬಸ್‌ ಶೆಲ್ಟರ್‌ಗಳನ್ನು ಮತ್ತೆ ನಿರ್ಮಿಸುವ ಕುರಿತು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಯೋಚನೆ ಕೂಡ ಮಾಡುತ್ತಿಲ್ಲ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಚ್ಚಿನ ಸಂಖ್ಯೆಯ ಬಸ್‌ಗಳು ಸಂಚರಿಸುತ್ತವೆ. ಮಾರ್ಗದುದ್ದಕ್ಕೂ ಜನರು ಬಸ್‌ ಏರಿ, ಇಳಿಯುತ್ತಾರೆ. ನಿಗದಿತ ದೂರದಲ್ಲಿ ಸುಸಜ್ಜಿತವಾದ ಬಸ್‌ ಶೆಲ್ಟರ್‌ ನಿರ್ಮಿಸುವುದು ಹೆದ್ದಾರಿ ನಿರ್ಮಾಣದ ಒಪ್ಪಂದದಲ್ಲಿ ಸೇರಿದೆ. ನವಯುಗ ಕಂಪನಿ ಬಸ್‌ ಶೆಲ್ಟರ್‌ ನಿರ್ಮಿಸದೇ ಕಾಲಹರಣ ಮಾಡುತ್ತಿದೆ. ಪರಿಣಾಮವಾಗಿ ಈ ಮಾರ್ಗದ ಪ್ರಯಾಣಿಕರಿಗೆ ಪ್ರಯಾಣದ ಜೊತೆ ಉಡುಗೊರೆಯಂತೆ ಸಮಸ್ಯೆಗಳೂ ದೊರಕುತ್ತವೆ. ಸುರತ್ಕಲ್‌, ಮೂಲ್ಕಿ, ಕಾವೂರು, ಉಳ್ಳಾಲ ಸುತ್ತಮುತ್ತಲಿನಲ್ಲಿ ಬಸ್‌ ಶೆಲ್ಟರ್‌ಗಳ ಸ್ಥಿತಿಯನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.

ಸ್ಥಳಾವಕಾಶದ ಕೊರತೆ:

‘ನಗರದ ಯಾವ ಭಾಗದಲ್ಲೂ ಬಸ್‌ಗಳ ನಿಲುಗಡೆಗಾಗಿ ಸ್ಥಳಾವಕಾಶವೇ ಇಲ್ಲ. ನಡುರಸ್ತೆಯಲ್ಲೇ ಬಸ್‌ಗಳ ನಿಲುಗಡೆ ನಡೆಯುತ್ತಿದೆ. ಬಸ್‌ ನಿಲ್ದಾಣ ಮತ್ತು ಬಸ್‌ ಶೆಲ್ಟರ್‌ಗಳ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಆಡಳಿತಕ್ಕೆ ಆಗಾಗ ಸಲಹೆಗಳನ್ನು ನೀಡುತ್ತಲೇ ಇದ್ದೇವೆ. ಆದರೆ, ಸ್ಥಳದ ಕೊರತೆಯಿಂದ ಅವುಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ನಗರ ಸಾರಿಗೆ ಬಸ್‌ ನಿಲ್ದಾಣವನ್ನು ಪಂಪ್‌ವೆಲ್‌ಗೆ ಸ್ಥಳಾಂತರಿಸುವ ಯೋಜನೆ ಅನುಷ್ಠಾನಕ್ಕೆ ಬಂದರೆ ಸಮಸ್ಯೆಗೆ ತುಸು ಪರಿಹಾರ ದೊರಕಬಹುದು’ ಎಂದು ಮಂಗಳೂರು ನಗರ ಸಂಚಾರ ಪೊಲೀಸ್‌ ಉಪ ವಿಭಾಗದ ಎಸಿಪಿ ಕೆ.ಮಂಜುನಾಥ ಶೆಟ್ಟಿ.

ಸ್ಥಳಾಂತರಕ್ಕೆ ಪರ– ವಿರೋಧ

ನಗರ ಸಾರಿಗೆ ಬಸ್‌ ನಿಲ್ದಾಣವನ್ನು ಪಂಪ್‌ವೆಲ್‌ಗೆ ಸ್ಥಳಾಂತರಿಸುವ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಕೆಲವರು ಈ ಯೋಜನೆಯ ಪರವಾಗಿದ್ದರೆ, ಬಸ್‌ ಮಾಲೀಕರು ಸೇರಿದಂತೆ ಹಲವರು ಬಸ್‌ ನಿಲ್ದಾಣದ ಸ್ಥಳಾಂತರವನ್ನು ವಿರೋಧಿಸುತ್ತಿದ್ದಾರೆ. ಈಗ ಬಸ್‌ ನಿಲ್ದಾಣ ಸ್ಥಳಾಂತರಕ್ಕೆ ಗುರುತಿಸಿರುವ ಜಮೀನು ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲೇ ಇದೆ. ಅಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಿಸಿದರೆ, ನೂರಾರು ಬಸ್‌ಗಳು ಏಕಕಾಲಕ್ಕೆ ಹೆದ್ದಾರಿ ಪ್ರವೇಶಿಸುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿ ಎದುರಾಗಬಹುದು ಎಂಬ ಆತಂಕವನ್ನೂ ಕೆಲವರು ಹೊರಹಾಕುತ್ತಾರೆ.

ವಿನ್ಯಾಸತಂದ ತೊಡಕು

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ 46 ಸುಸಜ್ಜಿತವಾದ ಬಸ್‌ ನಿಲ್ದಾಣಗಳನ್ನು ನಿರ್ಮಿಸಲು ಪ್ರಕ್ರಿಯೆ ಆರಂಭಿಸಲಾಗಿತ್ತು. ಬೆಂದೂರ್‌ನ ಸೇಂಟ್‌ ಆಗ್ನೆಸ್‌ ಸೇರಿದಂತೆ ಕೆಲವು ಕಡೆಗಳಲ್ಲಿ ಕಾಮಗಾರಿಯೂ ಆರಂಭವಾಗಿತ್ತು. ಆದರೆ, ‘ಸ್ಮಾರ್ಟ್‌ ಬಸ್‌ ಶೆಲ್ಟರ್‌’ ವಿನ್ಯಾಸದ ಕುರಿತು ತೀವ್ರವಾದ ತಕರಾರುಗಳು ಬಂದವು. ದಿಢೀರನೆ ಕಾಮಗಾರಿ ಸ್ಥಗಿತಗೊಳಿಸಿದ ಸ್ಮಾರ್ಟ್‌ ಸಿಟಿ ಆಡಳಿತ ಮಂಡಳಿ, ವಿನ್ಯಾಸ ಬದಲಾವಣೆಗೆ ಪ್ರಕ್ರಿಯೆ ಆರಂಭಿಸಿತ್ತು. ತಿಂಗಳುಗಳೇ ಕಳೆದರೂ ಹೊಸ ವಿನ್ಯಾಸವನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ಸಮಸ್ಯೆ– ಪರಿಹಾರ

ಸ್ಟೇಟ್‌ ಬ್ಯಾಂಕ್‌ ಬಸ್‌ ನಿಲ್ದಾಣದಿಂದ ಸಂಚಾರ ದಟ್ಟಣೆ– ಬಸ್‌ ನಿಲ್ದಾಣ ಸ್ಥಳಾಂತರಿಸಬೇಕು ಅಥವಾ ಬಹುಮಹಡಿ ನಿಲ್ದಾಣ ನಿರ್ಮಿಸಬೇಕು.

ಬಸ್‌ ಶೆಲ್ಟರ್‌ಗಳೇ ಇಲ್ಲ– ಈಗ ಬಸ್‌ಗಳ ನಿಲುಗಡೆ ನೀಡುವ ಸ್ಥಳಗಳಲ್ಲಿ ಸುಸಜ್ಜಿತವಾದ ಶೆಲ್ಟರ್‌ ನಿರ್ಮಿಸಬೇಕು.

ಸ್ಥಳಾವಕಾಶದ ಕೊರೆತ– ಬಸ್‌ ಶೆಲ್ಟರ್‌ಗಳಿಗಾಗಿ ಭೂಸ್ವಾಧೀನ ನಡೆಸಬೇಕು ಅಥವಾ ಇರುವ ಜಾಗಕ್ಕೆ ಸರಿಯಾಗಿ ಹೊಸ ವಿನ್ಯಾಸ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT