ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತು ಮೀರಿದರೆ ಕಠಿಣ ಕ್ರಮ: ಸಿಬ್ಬಂದಿಗೆ ಐಜಿಪಿ ಅರುಣ್‌ ಚಕ್ರವರ್ತಿ ಎಚ್ಚರಿಕೆ

ಪೊಲೀಸ್‌ ಧ್ವಜ ದಿನಾಚರಣೆ
Last Updated 2 ಏಪ್ರಿಲ್ 2019, 14:06 IST
ಅಕ್ಷರ ಗಾತ್ರ

ಮಂಗಳೂರು: ಪೊಲೀಸ್‌ ಇಲಾಖೆಯ ಒಳಗಿರುವವರು ಯಾವತ್ತೂ ಶಿಸ್ತು ಮೀರಬಾರದು. ಇಲಾಖೆಯ ಮೇಲೆ ಬದ್ಧತೆ ಹೊಂದಿದ್ದು, ಶಿಸ್ತಿನಿಂದ ಇರುವವರನ್ನು ಮಾತ್ರ ಇಲಾಖೆ ಸಹಿಸುತ್ತದೆ. ಶಿಸ್ತು ಮೀರುವವರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಎಚ್ಚರಿಕೆ ನೀಡಿದರು.

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಮಂಗಳೂರು ಘಟಕಗಳ ವತಿಯಿಂದ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪೊಲೀಸ್‌ ಇಲಾಖೆಯ ಒಳಗಿನವರೇ ಕೆಲವರು ಕಳೆದ ವರ್ಷ ಸರ್ಕಾರದ ವಿರುದ್ಧ ಮುಷ್ಕರ ಹೂಡಲು ಯತ್ನಿಸಿದರು. ಅವರ ಪ್ರಯತ್ನ ವಿಫಲವಾಯಿತು. ಪೊಲೀಸರಲ್ಲಿ ಬಹುಸಂಖ್ಯಾತರು ಸದಾ ಸಮಾಜದಲ್ಲಿನ ದುಷ್ಟ ವ್ಯಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಲೇ ಇರುತ್ತಾರೆ. ಆದರೆ, ಕೆಲವರು ಮಾತ್ರ ಕಚೇರಿಯಲ್ಲಿ ಕುಳಿತು ಸರ್ಕಾರ, ಇಲಾಖೆಯ ವಿರುದ್ಧವೇ ಷಡ್ಯಂತ್ರ ಮಾಡುತ್ತಿರುತ್ತಾರೆ. ಸರ್ಕಾರವನ್ನು ತಮ್ಮ ಇಚ್ಛೆಗೆ ತಕ್ಕಂತೆ ಮಣಿಸಲು ಯತ್ನಿಸುತ್ತಾರೆ. ಹಿಂದೆ ಇಂತಹ ಹಲವರನ್ನು ಕಂಡಿದ್ದೇನೆ. ಈಗ ಆ ಸಂಖ್ಯೆ ಹೆಚ್ಚುತ್ತಿದೆ’ ಎಂದರು.

ಇಂತಹ ನಡವಳಿಕೆಯನ್ನು ಇಲಾಖೆ ಹೆಚ್ಚು ಕಾಲ ಸಹಿಸುವುದಿಲ್ಲ. ಇಲಾಖೆಯ ಒಳಗಿದ್ದೇ ಶಿಸ್ತು ಮೀರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಪೊಲೀಸ್‌ ಇಲಾಖೆಗೆ ಸೇರುವ ಎಲ್ಲರಿಗೂ ಇಲಾಖೆಗೆ ನಿಷ್ಠರಾಗಿರುವುದು ಮತ್ತು ಶಿಸ್ತಿನಿಂದ ವರ್ತಿಸುವ ಕುರಿತು ಆರಂಭಿಕ ಹಂತದಲ್ಲೇ ತರಬೇತಿ ನೀಡಲಾಗುತ್ತದೆ. ನಿವೃತ್ತಿಯಾದ ಬಳಿಕವೂ ಶಿಸ್ತಿನ ಜೀವನ ಮುಂದುವರಿಯಬೇಕು ಎಂದು ಸಲಹೆ ನೀಡಿದರು.

2016ರಲ್ಲಿ ಪೊಲೀಸ್‌ ಒಳಗಿದ್ದವರೇ ಕೆಲವರು ಇಲಾಖೆ ಮತ್ತು ಸರ್ಕಾರದ ವಿರುದ್ಧ ಮುಷ್ಕರ ಹೂಡಲು ಯತ್ನಿಸಿದಾಗ ನಿವೃತ್ತ ಪೊಲೀಸ್‌ ಅಧಿಕಾರಿಗಳು ಸರ್ಕಾರಕ್ಕೆ ಬೆಂಬಲವಾಗಿ ನಿಂತರು. ನಿವೃತ್ತಿಯ ಬಳಿಕವೂ ಶಿಸ್ತಿನಿಂದ ವರ್ತಿಸುವ ಈ ಅಧಿಕಾರಿಗಳ ವರ್ತನೆ ಅನುಕರಣೀಯವಾದುದು ಎಂದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಎಸ್‌ಪಿ ಉದಯ ಎಂ. ನಾಯಕ್‌, ‘ಇಲಾಖೆಯಲ್ಲಿ ಸೇವೆಯಲ್ಲಿರುವವರು ನಿವೃತ್ತರನ್ನು ಗೌರವದಿಂದ ಕಾಣಬೇಕು. ನಾವು ನಿಮ್ಮ ಬಳಿಗೆ ಬಂದಾಗ ತಿರಸ್ಕೃತ ಭಾವನೆಯಿಂದ ವರ್ತಿಸಬೇಡಿ. ಮುಂದೆ ಒಂದು ದಿನ ನೀವು ಕೂಡ ನಿವೃತ್ತರಾಗಿ ನಮ್ಮ ಸಾಲಿಗೆ ಸೇರುತ್ತೀರಿ ಎಂಬುದನ್ನು ನೆನಪಿನಲ್ಲಿ ಇರಿಸಿಕೊಂಡು ಸ್ಪಂದಿಸಿ’ ಎಂದು ಮನವಿ ಮಾಡಿದರು.

‘ನಾನು ಇಲಾಖೆಗೆ ಸೇರಿದ ದಿನಗಳಿಗೆ ಹೋಲಿಸಿದರೆ ಇಲಾಖೆಯಲ್ಲಿ ಈಗ ಗಣನೀಯ ಸುಧಾರಣೆ ಆಗಿದೆ. ಪೊಲೀಸರ ಕೆಲಸದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಆಗ ನಮ್ಮ ಬಳಿ ತಂತ್ರಜ್ಞಾನವೇ ಇರಲಿಲ್ಲ. ಈಗ ತನಿಖೆ ನಡೆಸುವುದಕ್ಕೆ ನೆರವಾಗಬಲ್ಲ ಸಾಕಷ್ಟು ತಂತ್ರಜ್ಞಾನಗಳನ್ನು ಇಲಾಖೆ ಅಳವಡಿಸಿಕೊಂಡಿದೆ’ ಎಂದರು.

ಪೊಲೀಸರು ಯಾವುದೇ ರೀತಿಯ ಪ್ರಕರಣಗಳನ್ನು ಸುಲಭವಾಗಿ ಎದುರಿಸುವ ಶಕ್ತಿ ಹೊಂದಿದ್ದಾರೆ. ಕೆಲವು ಪ್ರಕರಣಗಳಲ್ಲಿ ದುಷ್ಟ ಶಕ್ತಿಗಳು ತೆರೆಯ ಹಿಂದೆ ಕುಳಿತು ಆಟವಾಡುತ್ತಿರುತ್ತವೆ. ಆಗ ಸಮಸ್ಯೆಯನ್ನು ಪೊಲೀಸರಿಗೆ ಕಷ್ಟವಾಗುತ್ತದೆ. ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಿಲ್ಲೆಯ ಪೊಲೀಸರು ಉತ್ತಮ ರೀತಿಯಲ್ಲಿ ಈ ಸನ್ನಿವೇಶವನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್‌, ಕೆಎಸ್‌ಆರ್‌ಪಿ ಕಮಾಂಡೆಂಟ್‌ ಆರ್‌.ಜನಾರ್ದನ, ಮಂಗಳೂರು ಉತ್ತರ ಉಪ ವಿಭಾಗ ಎಸಿಪಿ ಶ್ರೀನಿವಾಸಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT