ಮಂಗಳವಾರ, ಅಕ್ಟೋಬರ್ 27, 2020
24 °C
ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು: ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ

ಮೃತನ ಕುಟುಂಬಕ್ಕೆ ₹4.12 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ತಾಲ್ಲೂಕಿನ ಮಾಯಕೊಂಡ ಠಾಣೆಯ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಮರುಳಸಿದ್ದಪ್ಪ ಅವರ ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಡೆಸಲಾಯಿತು. ಪ್ರಕರಣ ಸಂಬಂಧ ಎಸ್‌ಐ ಸೇರಿ ಮೂವರನ್ನು ಅಮಾನತು ಮಾಡಿ ಬಂಧಿಸಲಾಗಿದೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ಮೃತ ಮರುಳಸಿದ್ದಪ್ಪ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ₹4.12.500 ಪರಿಹಾರವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮೃತನ ಪತ್ನಿ ವೃಂದಮ್ಮ ಅವರಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದ ಆವರಣದಲ್ಲಿ ವಿತರಿಸಿದರು. 

‘ಇಲಾಖೆಯಿಂದ ಮೃತನ ಕುಟುಂಬಕ್ಕೆ ₹8.25 ಲಕ್ಷ ಪರಿಹಾರ ನೀಡಲು ಅವಕಾಶವಿದ್ದು, ಆರಂಭಿಕ ಹಂತದಲ್ಲಿ ಪರಿಹಾರದ ಶೇ 50ರಷ್ಟು ಪರಿಹಾರ ಧನ ನೀಡದ್ದೇವೆ ಉಳಿದ ಶೇ 50ರಷ್ಟನ್ನು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ನಂತರ ಮತ್ತೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಮತ್ತೊಬ್ಬ ಕಾನ್‌ಸ್ಟೆಬಲ್ ಅಮಾನತು: ಪ್ರಕರಣ ಸಂಬಂಧ ಕಾನ್‌ಸ್ಟೆಬಲ್ ರಂಗಸ್ವಾಮಿ ಎಂಬವರನ್ನು ಅಮಾನತು ಮಾಡಿ ಬಂಧಿಸಲಾಗಿದೆ. ಬುಧವಾರ ಎಸ್‌ಪಿ ಹನುಮಂತರಾಯ ಈ ವಿಷಯ ತಿಳಿಸಿದರು.

ಠಾಣೆಯ ಪಿಎಸ್‌ಐ ಪ್ರಕಾಶ್, ಹೆಡ್‌ ಕಾನ್‌ಸ್ಟೆಬಲ್‌ ನಾಗರಾಜ್ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ ಶೇರ್ ಅಲಿ ಅವರನ್ನು ಮಂಗಳವಾರ ಅಮಾನತುಗೊಳಿಸಲಾಗಿತ್ತು.

ಮರಣೋತ್ತರ ಪರೀಕ್ಷೆ: ಮರುಳಸಿದ್ದಪ್ಪ ಅವರ ಶವವನ್ನು ರಾತ್ರಿಯೇ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ತಂದಿರಿಸಲಾಗಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ.ಎನ್‌. ನಂದಿನಿ ಅವರ ಸಮ್ಮುಖದಲ್ಲಿ ಬುಧವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ವರದಿಯ ಸಂಪೂರ್ಣ ಚಿತ್ರಣವನ್ನು ವಿಡಿಯೊ ಮಾಡಲಾಗಿದೆ.

‘ಯಾವುದೇ ವೇಳೆಯಲ್ಲಿ ತನಿಖೆಗಾಗಿ ಸಿಐಡಿ ಅಧಿಕಾರಿಗಳು ಬರುವ ನಿರೀಕ್ಷೆ ಇದ್ದು, ತನಿಖೆಗಾಗಿ  ಮರಣೋತ್ತರ ಸಮೀಕ್ಷೆ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಅಲ್ಲದೇ ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ವರದಿ ಸಲ್ಲಿಸಲಾಗುವುದು’ ಎಸ್‌ಪಿ ಹನುಮಂತರಾಯ ಮಾಧ್ಯಮದವರಿಗೆ ತಿಳಿಸಿದರು.

ಆಸ್ಪತ್ರೆ ಮುಂದೆ ಆಕ್ರೋಶ: ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಶವಾಗಾರದ ಮುಂದೆ ಸೇರಿದ ಮೃತನ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು. ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿ ಮೃತನ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.