ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮಠಕ್ಕೆ ₹ 10 ಕೋಟಿ ಮಂಜೂರು, ನಾಲ್ಕೈದು ದಿನಗಳಲ್ಲಿ ಖಾತೆಗೆ: ಬಿಎಸ್‌ವೈ

ಹರಜಾತ್ರಾ ಮಹೋತ್ಸವದ ಸ್ವಾವಲಂಬಿ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ
Last Updated 15 ಜನವರಿ 2021, 1:37 IST
ಅಕ್ಷರ ಗಾತ್ರ

ದಾವಣಗೆರೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಅಭಿವೃದ್ಧಿಗಾಗಿ ₹ 10 ಕೋಟಿ ಅನುದಾನ ಮಂಜೂರು ಮಾಡಿದ್ದೇನೆ. ನಾಲ್ಕೈದು ದಿನಗಳಲ್ಲಿ ಮಠದ ಖಾತೆಗೆ ವರ್ಗಾವಣೆಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಹರಿಹರದಲ್ಲಿ ಆಯೋಜಿಸಿದ್ದ ಹರಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸನ್ಮಾನಿಸಿದರು. ಸಿದ್ದಗಂಗಾಮಠದ ಸಿದ್ದಲಿಂಗಸ್ವಾಮಿ ಅವರೂ ಇದ್ದರು.
ಹರಿಹರದಲ್ಲಿ ಆಯೋಜಿಸಿದ್ದ ಹರಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸನ್ಮಾನಿಸಿದರು. ಸಿದ್ದಗಂಗಾಮಠದ ಸಿದ್ದಲಿಂಗಸ್ವಾಮಿ ಅವರೂ ಇದ್ದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಗುರುವಾರ ನಡೆದ ಹರಜಾತ್ರಾ ಮಹೋತ್ಸವದ ಸ್ವಾವಲಂಬಿ ಸಮಾವೇಶದಲ್ಲಿ ಸಂಕ್ರಾಂತಿ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೀಠದಲ್ಲಿ ವಿವಿಧ ಕಾರ್ಯಗಳನ್ನು, ಕಾಮಗಾರಿಗಳನ್ನು ನಡೆಸಲು ಸ್ವಾಮೀಜಿ ಮತ್ತು ಸಮಿತಿ ಸದಸ್ಯರು ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದರು. ಈಗ ಹಣ ಮಂಜೂರಾಗಿದೆ. ಅದನ್ನು ಅಭಿವೃದ್ಧಿ ಕಾರ್ಯಕ್ಕೆ ಸದುಪಯೋಗಿಸಬೇಕು ಎಂದು ತಿಳಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎಸ್‌. ಅಶ್ವತ್ಥನಾರಾಯಣ, ‘ಭೂಮಿಯನ್ನು ತನ್ನ ಸ್ವಂತ ತಾಯಿ ಎಂದು ತಿಳಿದುಕೊಂಡು ಆರಾಧಿಸಿ, ಬೆವರು ಸುರಿಸಿ ದುಡಿಯುವ ಜನರೇ ಪಂಚಮಸಾಲಿಗಳು. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿರುವ ಸಾರ್ವಕಾಲಿಕ ತತ್ವವನ್ನು ಅಳವಡಿಸಿಕೊಂಡಿರುವ ಸಮಾಜ ಇದು. ಪ್ರಗತಿ ಸಾಧಿಸಲು, ಸದೃಢರಾಗಲು ನಾವು ಮಾಡುವ ವೃತ್ತಿಯನ್ನು ಬದ್ಧತೆಯಿಂದ, ಪರಿಶ್ರಮದಿಂದ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಸಂಕ್ರಾಂತಿ ಎಂದರೆ ಸೂರ್ಯ ಪಥ ಬದಲಿಸುವ ಕಾಲ. ನಾವು ಹೊಸ ಚಿಂತನೆಯ ಕಡೆಗೆ ಹೋಗಬೇಕಿರುವ ಕಾಲ. ನಮ್ಮ ಸಮಾಜಕ್ಕೆ ಬೇಕಾದ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಚಿಂತನ–ಮಂಥನ ನಡೆಯಬೇಕು. ಜತೆಗೆ ನಮ್ಮ ಅಧ್ಯಾತ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಕೂಡ ಆಗಬೇಕು’ ಎಂದರು.

‘ಕೃಷಿಗೂ ಗೋವಿಗೂ ವಿಶೇಷ ಸಂಬಂಧವಿದೆ. ಗೋವುಗಳನ್ನು ರಕ್ಷಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲಬೇಕು. ನಮ್ಮ ದೇಶದಲ್ಲಿ ಕೃಷಿ ಏನಾದರೂ ಉಳಿದಿದ್ದರೆ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಇನ್ನೂ ಭೂಮಿಯ ಉಷ್ಣಾಂಶ ಕಡಿಮೆ ಇದ್ದರೆ ಅದಕ್ಕೆ ಕಾರಣ ಗೋವುಗಳು ಮತ್ತು ಅವುಗಳನ್ನು ಬಳಸುವ ಸಮುದಾಯಗಳು. ಈ ಕೃಷಿ ಸಮುದಾಯದ ಉತ್ಪನ್ನ ದುಪ್ಪಟ್ಟುಗೊಳ್ಳಲು ಮೋದಿ ಸರ್ಕಾರ ಕ್ರಮ ಕೈಗೊಂಡಿದೆ. ಮೋದಿ ಪ್ರತಿ ರೈತನ ಖಾತೆಗೆ ₹ 6000 ಹಾಕುತ್ತಿದ್ದರೆ, ಅದಕ್ಕೆ ಯಡಿಯೂರಪ್ಪ ಅವರು ₹ ₹ 4,000 ನೀಡುತ್ತಿದ್ದಾರೆ’ ಎಂದರು.

ನೂತನ ಸಚಿವ ಮುರುಗೇಶ ನಿರಾಣಿ, ‘ಸಮಾಜದ ಎಲ್ಲರೂ ಮೊದಲು ಶಿಕ್ಷಣವನ್ನು ಪಡೆಯಬೇಕು. ಬಳಿಕ ಕೃಷಿ ಸಹಿತ ಯಾವ ಉದ್ಯೋಗವನ್ನಾದರೂ ಮಾಡಬಹುದು’ ಎಂದು ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಬಹುತೇಕ ಸಮಾಜಗಳು ತಮ್ಮ ವೃತ್ತಿಯನ್ನು ಬದಲಾಯಿಸಿ ಬದುಕನ್ನು ಬದಲಾಯಿಸಿಕೊಂಡಿದ್ದಾರೆ. ಪಂಚಮಸಾಲಿಗಳು ತಮ್ಮ ವೃತ್ತಿಯನ್ನು ಪ್ರೀತಿಯಿಂದ ಮಾಡುತ್ತಾ, ಮಣ್ಣಿನ ಸಂಬಂಧವನ್ನು ಉಳಿಸಿಕೊಂಡಿದ್ದಾರೆ’ ಎಂದು ಹೇಳಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ‘ಸಂಕ್ರಾಂತಿ ಅಂದರೆ ಹರಕ್ರಾಂತಿ. 2020 ಜಗತ್ತನ್ನು ಸಣ್ಣ ಒಂದು ವೈರಸ್‌ ತಲ್ಲಣಗೊಳಿಸಿತು. ಮೋದಿ ಅವರಿಂದಾಗಿ ಭಾರತ ಸುಭದ್ರವಾಗಿ ಉಳಿಯಿತು’ ಎಂದು ತಿಳಿಸಿದರು.

ಸ್ವಾಭಿಮಾನ, ಸಹಕಾರ, ಸಂಘಟನೆ, ಸ್ವಾವಲಂಬನೆ, ಸಹಬಾಳ್ವೆ ಐದು ತತ್ವಗಳೊಂದಿಗೆ ಕೆಲಸ ಮಾಡುವ ಪಂಚಮಸಾಲಿ ಸಮುದಾಯದಲ್ಲಿ ಶೇ 10ರಷ್ಟು ಮಂದಿಗೆ ಮನೆ ಇಲ್ಲ. ಶೇ 15 ಮಂದಿಗೆ ಭೂಮಿ ಇಲ್ಲ. ಇಂಥ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮುದಾಯದ ಅಭಿವೃದ್ಧಿಗೆ ಸೂಕ್ತ ಸಮಯದಲ್ಲಿ ನ್ಯಾಯವನ್ನು ಸರ್ಕಾರ ಒದಗಿಸಿಕೊಡಬೇಕು ಎಂದರು.

ತುಮಕೂರು ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಹರದ್ವಾರವನ್ನು ಉದ್ಘಾಟಿಸಿದರು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌.ವಿ. ರಾಮಚಂದ್ರ, ಎಸ್‌.ಎ. ರವೀಂದ್ರನಾಥ್, ಮುಖಂಡರಾದ ಶಂಕರಗೌಡ ಪಾಟೀಲ, ಬಿ.ನಾಗಣ್ಣಗೌಡ, ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು ಅವರೂ ಇದ್ದರು.

ಧರ್ಮದರ್ಶಿ ಚಂದ್ರಶೇಖರ ಪೂಜಾರ ಸ್ವಾಗತಿಸಿದರು. ನಗರ ಮೂಲಭೂತ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯಮಂತ್ರಿ ಬಾಯಿಗೆ ಎಳ್ಳುಬೆಲ್ಲ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಾಯಿಗೆ ವಚನಾನಂದ ಸ್ವಾಮೀಜಿ ಎಳ್ಳುಬೆಲ್ಲ ಹಾಕಿದರು. ಅದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಅವರು ಸ್ವಾಮೀಜಿಗೆ ಎಳ್ಳುಬೆಲ್ಲ ತಿನ್ನಿಸಿದರು. ಬಳಿಕ ಸ್ವಾಮೀಜಿ ಎಲ್ಲ ಅತಿಥಿಗಳ ಬಾಯಿಗೆ ಎಳ್ಳುಬೆಲ್ಲ ತಿನ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT