ಶನಿವಾರ, ಮೇ 8, 2021
19 °C
40 ಟ್ರೈನಿ ನೌಕರರಿಗೆ ನೋಟಿಸ್ | 15 ಮಂದಿ ಕರ್ತವ್ಯಕ್ಕೆ ಹಾಜರು

ದಾವಣಗೆರೆ: 18 ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಮೂರನೇ ದಿನವೂ ಮುಂದುವರಿದಿದ್ದು, ಪೊಲೀಸ್ ಭದ್ರತೆಯಲ್ಲಿ 18 ಬಸ್‌ಗಳು ಶುಕ್ರವಾರ ಸಂಚರಿಸಿದವು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳಿಗೆ ಹೆಚ್ಚಾಗಿ ಅವಕಾಶ ಕಲ್ಪಿಸಿದ್ದರಿಂದ ಗ್ರಾಮೀಣ ಪ್ರದೇಶ ಹಾಗೂ ನಗರದಲ್ಲಿ ಹೆಚ್ಚಿನ ಸಮಸ್ಯೆ ಆಗಲಿಲ್ಲ. ಬೆಂಗಳೂರು, ಹುಬ್ಬಳ್ಳಿ, ಹೊಸಪೇಟೆ ಹಾಗೂ ಹರಪನಹಳ್ಳಿ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳು ಸಂಚರಿಸಿದವು. ದೂರದ ಊರುಗಳಿಗಾಗಿ ನಿಯೋಜನೆ ಮೇಲೆ ನಿಲ್ಲಿಸಿದ್ದರೂ ಹೆಚ್ಚಿನ ಜನರು ಬರಲಿಲ್ಲ.

ತರಬೇತಿ ಸಿಬ್ಬಂದಿ ಮನವೊಲಿಸಿದ್ದರಿಂದ 18 ಬಸ್‌ಗಳು ದಾವಣಗೆರೆ–ರಾಣೇಬೆನ್ನೂರು ಹಾಗೂ ದಾವಣಗೆರೆ– ಹರಪನಹಳ್ಳಿ  ಮಾರ್ಗಗಳಲ್ಲಿ ಸಂಚರಿಸಿದವು. ಭದ್ರತಾ ಸಿಬ್ಬಂದಿ ಜೊತೆಯಲ್ಲಿದ್ದರು.

3 ದಿನಕ್ಕೆ ₹1 ಕೋಟಿ ನಷ್ಟ:

‘ಮೂರು ದಿನಗಳ ಮುಷ್ಕರದಿಂದಾಗಿ ₹1 ಕೋಟಿ ನಷ್ಟವಾಗಿದೆ. ಬಸ್‌ ಓಡಿಸಿರುವ ಚಾಲಕರೆಲ್ಲರೂ ಡ್ರೈವಿಂಗ್ ಲೈಸೆನ್ಸ್ ಇರುವವರು. ಚಾಲನಾ ತರಬೇತಿ ಪರೀಕ್ಷೆಯಲ್ಲಿ ಪಾಸಾಗಿರುವವರನ್ನು ಕಳುಹಿಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್.ಹೆಬ್ಬಾಳ್ ತಿಳಿಸಿದರು.

‘ನಮ್ಮಲ್ಲಿ 40 ಟ್ರೈನಿ ನೌಕರರಿದ್ದು, ಎಲ್ಲರಿಗೂ ನೋಟಿಸ್‌ ಜಾರಿ ಮಾಡಿದ್ದೇವೆ. ಅವರಲ್ಲಿ 15 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರಿಗೆ 2–3 ದಿನಗಳ ಕಾಲಾವಕಾಶ ನೀಡಲಿದ್ದು, ಅಷ್ಟರೊಳಗೆ ಹಾಜರಾಗದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು  ಸಿದ್ದೇಶ್ವರ ಹೆಬ್ಬಾಳ್ ಎಚ್ಚರಿಸಿದರು.

‘ಸರ್ಕಾರವೇ ನಿಂತು ಖಾಸಗಿಯವರೇ ಅನುವು ಮಾಡಿಕೊಡುತ್ತಿದೆ. 30 ವರ್ಷಗಳಿಂದ ದುಡಿದ ನಮ್ಮನ್ನು ಕಡೆಗಣಿಸಿದ್ದು, ನಮಗೆಲ್ಲಾ ಅನ್ಯಾಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಖಾಸಗೀಕರಣ ಮಾಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ನಮ್ಮ ಕುಟುಂಬಗಳು ಬೀದಿ ಪಾಲಾದರೆ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರೇ ಹೊಣೆ’ ಎಂದು ಸಾರಿಗೆ ನೌಕರರ ಒಕ್ಕೂಟದ ಮುಖಂಡ
ಅಂಜಿನಪ್ಪ ಆರೋಪಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು