ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಮಂದಿಗೆ ಕೊರೊನಾ: ಇಬ್ಬರು ಸಾವು

66 ಮಂದಿ ಒಂದೇ ದಿನ ಬಿಡುಗಡೆ * ದಿನೇ ದಿನೇ ಏರುತ್ತಿರುವ ಸೋಂಕಿತರ ಸಂಖ್ಯೆ
Last Updated 12 ಜುಲೈ 2020, 16:12 IST
ಅಕ್ಷರ ಗಾತ್ರ

ದಾವಣಗೆರೆ: ಒಂದು ಕಡೆ ಕೊರೊನಾ ಸೋಂಕು ತಗುಲುವವರ ಸಂಖ್ಯೆ ಏರುತ್ತಿದೆ. ಇನ್ನೊಂದು ಕಡೆ ಅಷ್ಟೇ ವೇಗದಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಭಾನುವಾರ ಒಂದೇ ದಿನ 66 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯ 20 ಮಂದಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 20ಕ್ಕೇರಿದೆ.

ಹರಿಹರ ಗೌಸಿಯಾ ಕಾಲೊನಿಯ 55 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 10ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಕನವಳ್ಳಿಯ 60 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಮತ್ತು ಶ್ವಾಸಕೋಶದ ಸಮಸ್ಯೆ ಇದ್ದಿದ್ದರಿಂದ ಜುಲೈ 2ರಂದು ಇಲ್ಲಿನ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 11ರಂದು ಮೃತಪಟ್ಟಿದ್ದಾರೆ. ಇಬ್ಬರಿಗೂ ಅಧಿಕ ರಕ್ತದೊತ್ತಡ, ಮಧುಮೇಹ ಇತ್ತು.

ಜಗಳೂರು ನಳಂದ ಪಿಯು ಕಾಲೇಜು ಬಳಿಯ 51 ವರ್ಷದ ಪುರುಷ ಮತ್ತು 43 ವರ್ಷದ ಮಹಿಳೆಗೆ ಸೋಂಕು ಬಂದಿದ್ದು, ಇಬ್ಬರಿಗೂ ಶೀತಜ್ವರ ಎಂದು ಗುರುತಿಸಲಾಗಿದೆ.

ಹರಿಹರ ಗೌಸಿಯ ಕಾಲೊನಿಯ 22 ವರ್ಷದ ಯುವತಿಗೆ ಅದೇ ಕಂಟೈನ್‌ಮೆಂಟ್‌ನಲ್ಲಿ ಸೋಂಕು ಬಂದಿರುವವರಿಂದ ವೈರಸ್‌ ತಗುಲಿದೆ.

ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ 51 ವರ್ಷ ಪುರುಷ ಮತ್ತು ಬಿದಿರಹಳ್ಳಿಯ 17 ವರ್ಷದ ಬಾಲಕಿಗೆ ಸೋಂಕು ಬಂದಿದೆ. ಅವರಿಬ್ಬರೂ ಬೆಂಗಳೂರಿನಿಂದ ಹಿಂತಿರುಗಿದವರಾಗಿದ್ದಾರೆ.

ದೊಡ್ಡಬಾತಿಯ 54 ವರ್ಷದ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 22 ವರ್ಷದ ಯುವತಿಗೂ ಸೋಂಕು ಬಂದಿದ್ದು, ಈ ಇಬ್ಬರು ಕೂಡ ಬೆಂಗಳೂರಿನಿಂದ ಹಿಂತಿರುಗಿದವರು.

ದಾವಣಗೆರೆ ಮಿಲ್ಲತ್‌ ಕಾಲೊನಿಯ 60 ವೃದ್ಧ, ಎನ್‌ಆರ್‌. ರಸ್ತೆಯ 36 ವರ್ಷದ ಪುರುಷ, 59 ವರ್ಷದ ಮಹಿಳೆಗೆ ಶೀತಜ್ವರ ಎಂದು ಗುರುತಿಸಲಾಗಿದೆ. ಶೀತಜ್ವರ ಇದ್ದ ದಾವಣಗೆರೆ ಜ್ಞಾನಶಂಕರದ (ದಾವಣಗೆರೆ ವಿವಿ) 35 ವರ್ಷದ ಪುರುಷನಿಗೂ ಸೋಂಕು ಬಂದಿದೆ.

ನಿಟುವಳ್ಳಿಯ 55 ವರ್ಷದ ಮಹಿಳೆ, ಭಗತ್‌ಸಿಂಗ್‌ ನಗರದ 27 ವರ್ಷದ ಮಹಿಳೆ, ಎಂಸಿಸಿ ಬಿ ಬ್ಲಾಕ್‌ನ 64 ವರ್ಷದ ವೃದ್ಧ, ಕೆ.ಬಿ. ಬಡಾವಣೆಯ 36 ಮತ್ತು 49 ವರ್ಷದ ಪುರುಷರು, ಅಹಮದನಗರದ 33 ವರ್ಷದ ಮಹಿಳೆ, ಕುವೆಂಪುನಗರದ 40 ವರ್ಷದ ಪುರುಷ, ಭಾರತ್‌ ಮಿಲ್‌ ಕಾಂಪೌಂಡ್‌ನ 26 ವರ್ಷ ಮಹಿಳೆಗೆ ಸೋಂಕು ಬಂದಿದ್ದು, ಇವರೆಲ್ಲರನ್ನೂ ಶೀತಜ್ವರ ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 536 ಮಂದಿಗೆ ಸೋಂಕು ಬಂದಿದೆ. ಅದರಲ್ಲಿ ಭಾನುವಾರ ಬಿಡುಗಡೆಗೊಂಡ 66 ಮಂದಿ ಸೇರಿ 410 ಜನ ಗುಣಮುಖರಾಗಿದ್ದಾರೆ. 106 ಸಕ್ರಿಯ ಪ್ರಕರಣಗಳಿವೆ.

ಸೋಂಕು ಪತ್ತೆಯಾದ ಒಂದೇ ದಿನಕ್ಕೆ ಬಿಡುಗಡೆ !

ಕೊರೊನಾ ವೈರಸ್‌ ಸೋಂಕು ಇದೆ ಎಂದು ಶನಿವಾರವಷ್ಟೇ ಘೋಷಣೆಯಾಗಿದ್ದವರಲ್ಲಿ 11 ಮಂದಿ ಭಾನುವಾರ ಬಿಡುಗಡೆಗೊಂಡಿರುವುದು ಅಚ್ಚರಿ ಮೂಡಿಸಿದೆ.

ಶನಿವಾರ 70 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅದರಲ್ಲಿ ಹರಿಹರ ಹರ್ಲಾಪುರದ 65 ವರ್ಷದ ವೃದ್ಧೆ, ಜಗಳೂರು ರಾಮಾಲಯ ರಸ್ತೆಯ 63 ವರ್ಷದ ವೃದ್ಧ, ದಾವಣಗೆರೆ ಮಹಮ್ಮದ್‌ ನಗರದ 19 ವರ್ಷದ ಯುವಕ, ಆವರಗೆರೆಯ 48 ವರ್ಷದ ಪುರುಷ, ಎಂಸಿಸಿ ಬಿ ಬ್ಲಾಕ್‌ನ 32 ವರ್ಷದ ಪುರುಷ, ಚೌಕಿಪೇಟೆಯ 55 ವರ್ಷದ ಮಹಿಳೆ, ಜಗಳೂರು ಸರ್ಕಾರಿ ಶಾಲೆ ಬಳಿಯ 25 ವರ್ಷದ ಮಹಿಳೆ, ಚನ್ನಗಿರಿ ಮಠದ ಬೀದಿಯ 57 ವರ್ಷದ ಮಹಿಳೆ, 2 ವರ್ಷದ ಬಾಲಕಿ, ದಾವಣಗೆರೆಯ 3 ವರ್ಷದ ಬಾಲಕಿ, ಚನ್ನಗಿರಿ ಹೊದಿಗೆರೆಯ 41 ವರ್ಷದ ಪುರುಷ ಸೇರಿದ್ದರು. ಈ 11 ಮಂದಿಯೂ ಭಾನುವಾರ ಬಿಡುಗಡೆಗೊಂಡವರ ಪಟ್ಟಿಯಲ್ಲಿದ್ದಾರೆ.

‘ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕ ಹೊಂದಿದವರ ಗಂಟಲು ದ್ರವ ಮಾದರಿ ಸಂಗ್ರಹವನ್ನು ಮೊದಲು ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಬೇರೆ ಊರಿನಿಂದ ಬಂದವರು, ರ‍್ಯಾಂಡಂ ಪರೀಕ್ಷೆಯಲ್ಲಿ ಗುರುತಿಸಿದವರ ಮಾದರಿಯ ಪರೀಕ್ಷೆ ತಡವಾಗಿ ಆಗುತ್ತದೆ. ಹಾಗಾಗಿ ಅದರ ಫಲಿತಾಂಶ ಲ್ಯಾಬ್‌ನಿಂದ ಬರುವ ಹೊತ್ತಿಗೆ ಸೋಂಕಿತರು ಗುಣಮುಖರಾಗಿರುತ್ತಾರೆ. ಗಂಟಲು ದ್ರವ ಮಾದರಿ ಸಂಗ್ರಹಿಸಿದಲ್ಲಿಂದ 10 ದಿನಗಳವರೆಗೆ ಇಟ್ಟುಕೊಂಡು ಅವರಿಗೆ ಯಾವುದೇ ಸಮಸ್ಯೆ ಇಲ್ಲದೇ ಇದ್ದಾಗ ಸರ್ಕಾರದ ನಿಯಮ ಪ್ರಕಾರ ಬಿಡುಗಡೆಗೊಳ್ಳುತ್ತಾರೆ. ಹಾಗಾಗಿ ಫಲಿತಾಂಶ ಶನಿವಾರ ಬಂದಿದ್ದರೂ ಮಾದರಿ ಸಂಗ್ರಹ ಹಿಂದೆಯೇ ಆಗಿರುತ್ತದೆ. ಹಾಗಾಗಿ ಬಿಡುಗಡೆಗೊಂಡಿದ್ದಾರೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ಸ್ಪಷ್ಟಪಡಿಸಿದ್ದಾರೆ.

ಜಗಳೂರಿನಲ್ಲಿ ಕೊರೊನಾ ತಲ್ಲಣ: ಮತ್ತೆ 19 ಪಾಸಿಟಿವ್?

ಜಗಳೂರು ತಾಲ್ಲೂಕಿನಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಭಾನುವಾರ ಒಂದೇ ದಿನದಲ್ಲಿ 19 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬುಲೆಟಿನ್‌ನಲ್ಲಿ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಪಟ್ಟಣದ ಹಳೇ ಪರಿಶಿಷ್ಟ ಕಾಲೊನಿಯಲ್ಲಿ 10 ಹಾಗೂ ಹಳೇ ಅಂಚೆ ಕಚೇರಿ ಸಮೀಪ 1 ಹಾಗೂ ಮೆದಿಕೆರೇನಹಳ್ಳಿಯಲ್ಲಿ 3 , ಚಿಕ್ಕಅರಕೆರೆ ಗ್ರಾಮದಲ್ಲಿ 2 ಮೂಡಲಮಾಚಿಕೆರೆ, ರಸ್ತೆಮಾಚಿಕೆರೆ, ಗುಡ್ಡದಲಿಂಗನಹಳ್ಳಿ ಗ್ರಾಮದಲ್ಲಿ ತಲಾ ಒಂದು ಪ್ರಕರಣ ಸೇರಿ ಒಟ್ಟು 19 ಪಾಸಿಟಿವ್ ಪ್ರಕರಣಗಳು ತಾಲ್ಲೂಕಿನಲ್ಲಿ ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ತಾಲ್ಲೂಕಿನಲ್ಲಿ ಈ ಹಿಂದೆ ತೋರಣಗಟ್ಟೆ, ಚಿಕ್ಕ ಉಜ್ಜಿನಿ, ಸಾಗಲಗಟ್ಟೆ ಹಾಗೂ ಪಟ್ಟಣ ಸೇರಿದಂತೆ ವಿವಿಧೆಡೆ 11 ಕೊರೊನಾ ಪಾಸಿಟಿವ್ ಸೋಂಕಿತರು ಪತ್ತೆಯಾಗಿದ್ದರು.

ಸೋಂಕು ಮತ್ತಷ್ಟು ಹರಡದಂತೆ ಕೂಡಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಚಿಕ್ಕ ಪಟ್ಟಣದಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಕನಿಷ್ಠ ನಾಲ್ಕೈದು ದಿನ ಪಟ್ಟಣದಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಬೆಂಗಳೂರು ಮತ್ತು ಹೊರಗಿನಿಂದ ತಾಲ್ಲೂಕಿಗೆ ಬರುವ ವ್ಯಕ್ತಿಗಳ ಬಗ್ಗೆ ನಿಗಾ ಇಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT