ಶನಿವಾರ, ಏಪ್ರಿಲ್ 17, 2021
23 °C

ಬೆಂಗಳೂರು ಚಲೋಗೆ ಪ್ರತಿ ತಾಲ್ಲೂಕಿನಿಂದ 500 ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರೈತ ವಿರೋಧಿ ಕೃಷಿ ಕಾಯ್ದೆಗಳು, ಕಾರ್ಮಿಕ ಸಂಹಿತೆಗಳ ರದ್ಧತಿ ಹಾಗೂ ಭೂಮಿ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ ಮಾರ್ಚ್ 22ರಂದು ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಚಳವಳಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು  ಮಹಿಳೆಯರು ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ತೆರಳಿ ಪ್ರತಿಭಟನೆ ನಡೆಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ‘ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ 500 ಮಂದಿ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

‘ಭದ್ರಾ ಅಚ್ಚುಕಟ್ಟು ಪ್ರದೇಶದ ತ್ಯಾವಣಗಿ ಉಪವಿಭಾಗದ ಕೊನೆಯ ಭಾಗದಲ್ಲಿ ನಾಲೆಗಳನ್ನು ನಿರ್ಮಾಣ ಮಾಡಿದ್ದು, ನಾಲೆಗಳಲ್ಲಿ ನೀರು ಬಂದಿಲ್ಲ. ನಾಲೆಗಳಿಗೆ ನೀರು ಹರಿಸಬೇಕು. ಇಲ್ಲವೇ ನಾಲೆಗಳ ನಿರ್ಮಾಣಕ್ಕೆ ಮಾಡಿದ ಖರ್ಚನ್ನು ಎಂಜಿನಿಯರ್‌ಗಳಿಂದ ವಸೂಲಿ ಮಾಡಬೇಕು. ಆ ಭಾಗದಲ್ಲಿ ರಸ್ತೆಗಳು ಸರಿ ಇಲ್ಲ. ಶಾಸಕ ರೇಣುಕಾಚಾರ್ಯ ಅವರ ಕ್ಷೇತ್ರಕ್ಕಷ್ಟೇ ಹಣ ನೀಡುತ್ತಿದ್ದು, ಬೇರೆ ಕ್ಷೇತ್ರಗಳಿಗೆ ಹಣ ನೀಡುತ್ತಿಲ್ಲ. ಮಾರ್ಚ್ 31ರೊಳಗೆ ಅವ್ಯವಸ್ಥೆ ಸರಿಪಡಿಸದೇ ಇದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದರು.

‘ವಿಧಾನ ಮಂಡಲದ ಅಧಿವೇಶನದಲ್ಲಿ ಗ್ರಾಮೀಣ ಭಾಗಗಳಿಗೆ 7 ಗಂಟೆ ವಿದ್ಯುತ್ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಆದರೆ 5 ತಾಸು ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಎರಡು ತಾಸು ವಿದ್ಯುತ್ ನೀಡದಿದ್ದರೆ ಬೆಳೆಯ ಇಳುವರಿ ಕಡಿಮೆಯಾಗುತ್ತದೆ. ಇದರಿಂದ ಜಿಲ್ಲೆಯಲ್ಲಿ ₹ 1 ಸಾವಿರ ಕೋಟಿ ನಷ್ಟವಾಗಲಿದೆ. ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಆಗ್ರಹಿಸಿದರು. 

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಪ್ರಸಾದ್, ಮುಖಂಡರಾದ ಎನ್‌.ಡಿ. ವಸಂತಕುಮಾರ್, ಇಟಗಿ ಬಸವರಾಜಪ್ಪ, ಗದ್ದಿಗೇಶ್ ಕರೆಕಟ್ಟೆ, ಅಮ್ಜದ್ ಪಾಶ ಇದ್ದರು.

ರೈತರ ಸಭೆ: ‘ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ವಿದ್ಯುತ್ ಕಾಯ್ದೆಯ ಪ್ರಕಾರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಪ್ರಸ್ತಾಪವಿದ್ದು, ಮೊಬೈಲ್ ಕರೆನ್ಸಿಯಂತೆ ರೀಚಾರ್ಜ್ ಮಾಡಿಸಬೇಕು. ಇಲ್ಲದಿದ್ದರೆ ಮೀಟರ್‌ಗಳು ಓಡುವುದಿಲ್ಲ. ಇದರಿಂದಾಗಿ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ’  ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಹೇಳಿದರು.

‘33 ಲಕ್ಷ ರೈತರು ಚಳವಳಿ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರನ್ನು ಭೇಟಿಯಾಗಿ ಮಾತನಾಡಿಲ್ಲ. ರೈತರ ಹೋರಾಟ ನಿರಂತರವಾಗಿ ನಡೆಯಲಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.