ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | 5 ಸಾವಿರ ಎಕರೆ ಅರಣ್ಯ ಒತ್ತುವರಿ ತೆರವು ಬಾಕಿ

4,723 ಪ್ರಕರಣ ದಾಖಲು, ತೆರವು ಕಾರ್ಯಾಚರಣೆ ಚುರುಕು
Published 3 ಸೆಪ್ಟೆಂಬರ್ 2024, 6:27 IST
Last Updated 3 ಸೆಪ್ಟೆಂಬರ್ 2024, 6:27 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 5,000 ಎಕರೆಗೂ ಹೆಚ್ಚು ಅರಣ್ಯ ಪ್ರದೇಶವನ್ನು ಒತ್ತುವರಿ ಎಂಬುದಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ತೆರವು ಕಾರ್ಯಾಚರಣೆ ಚುಕುರುಗೊಳಿಸಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗಿರುವ ಪ್ರಕರಣ ಹಾಗೂ 2015ರ ಬಳಿಕ ಅರಣ್ಯ ಪ್ರದೇಶ ಅತಿಕ್ರಮಣ ಮಾಡಿಕೊಂಡವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ.

ಜಿಲ್ಲೆಯಲ್ಲಿ 29,000 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯವಿದೆ. ಇದರಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿಯೇ ಸುಮಾರು 20,000 ಹೆಕ್ಟೇರ್‌ಗೂ ಅಧಿಕ ಪ್ರಮಾಣದ ಕಾಡು ಇದೆ. ಪರಿಸರ ಸಮತೋಲನಕ್ಕೆ ಶೇ 33ರಷ್ಟು ಕಾಡು ಅಗತ್ಯವಾದರೂ 6 ತಾಲ್ಲೂಕು ವ್ಯಾಪ್ತಿಯಲ್ಲಿರುವುದು ಶೇ 12ರಷ್ಟು ಅರಣ್ಯ ಮಾತ್ರ.

ದಾವಣಗೆರೆ ಕಂದಾಯ ಜಿಲ್ಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವ್ಯಾಪ್ತಿಯ ಎರಡು ವಿಭಾಗಗಳಿವೆ. ದಾವಣಗೆರೆ, ನ್ಯಾಮತಿ, ಹೊನ್ನಾಳಿ, ಜಗಳೂರು ಹಾಗೂ ಹರಿಹರ ತಾಲ್ಲೂಕು ಒಂದು ವಿಭಾಗವಿದ್ದು, ಚನ್ನಗಿರಿ ತಾಲ್ಲೂಕು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವ್ಯಾಪ್ತಿಗೆ ಒಳಪಟ್ಟಿದೆ. ಅರಣ್ಯ ಒತ್ತುವರಿ ಹಾಗೂ ತೆರವಿಗೆ ಬಾಕಿ ಇರುವುದು ಕೂಡ ಚನ್ನಗಿರಿ ತಾಲ್ಲೂಕಿನಲ್ಲಿಯೇ ಹೆಚ್ಚು.

ಪಶ್ಚಿಮಘಟ್ಟದಲ್ಲಿ ಗುಡ್ಡ ಕುಸಿತದ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಅರಣ್ಯ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಆದೇಶಿಸಿದೆ. ಕರ್ನಾಟಕ ಅರಣ್ಯ ಕಾಯ್ದೆ –1964 ಕಾಲಂ 64 ‘ಎ’ ಪ್ರಕಾರ ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳುವಂತೆ ತಾಕೀತು ಮಾಡಿದೆ. 2015ರ ನಂತರದ ಅರಣ್ಯ ಒತ್ತುವರಿಯನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

4,723 ಪ್ರಕರಣ ಬಾಕಿ:

ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ 4,723 ಪ್ರಕರಣಗಳು ದಾಖಲಿಸಿದೆ. ಅರಣ್ಯ ಪ್ರದೇಶ ಸಮೀಕ್ಷೆ ನಡೆಸುವ ಅರಣ್ಯ ಇಲಾಖೆ ಸಿಬ್ಬಂದಿ ಒತ್ತುವರಿ ಎಂಬುದಾಗಿ ಎಸಿಎಫ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಗತ್ಯ ದಾಖಲೆಗಳನ್ನು ಒದಗಿಸುವುದು ವಾರಸುದಾರರ ಕರ್ತವ್ಯ. ವಿಚಾರಣೆ ವೇಳೆ ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲವಾದರೆ ಎಸಿಎಫ್‌ ನ್ಯಾಯಾಲಯದಲ್ಲಿ 64 ‘ಎ’ ಅಡಿ ಆದೇಶ ಪ್ರಕಟಿಸುತ್ತದೆ. ಹೀಗೆ ಆದೇಶವಾಗಿರುವ ಪ್ರಕರಣಗಳಲ್ಲಿಯೂ ತೆರವು ಕಾರ್ಯಾಚರಣೆ ಬಾಕಿ ಇದೆ.

ಮೂರು ಎಕರೆಗಿಂತ ಮೇಲ್ಪಟ್ಟು ಒತ್ತುವರಿ ಮಾಡಿಕೊಂಡ 1,032 ಪ್ರಕರಣಗಳನ್ನು ಗುರುತಿಸಲಾಗಿದೆ. ಬಹುತೇಕರು ಅಡಿಕೆ ತೋಟ ಮಾಡಿಕೊಂಡಿದ್ದು, ಒಂದಷ್ಟು ಜನರು ಮೆಕ್ಕೆಜೋಳ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ. ಚನ್ನಗಿರಿ ಅರಣ್ಯ ವಲಯ ವ್ಯಾಪ್ತಿಯಲ್ಲಿ 172 ಪ್ರಕರಣಗಳಲ್ಲಿ 696 ಎಕರೆ 25 ಗುಂಟೆ ಅರಣ್ಯ ಒತ್ತುವರಿಯಾಗಿದೆ. ದಾವಣಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ 34 ಪ್ರಕರಣಗಳಲ್ಲಿ 151 ಎಕರೆ ಒತ್ತುವರಿಯಾಗಿದೆ.

3 ಎಕರೆ ಒಳಗೆ ವಿನಾಯಿತಿ

ಮೂರು ಎಕರೆಗಿಂತ ಕಡಿಮೆ ಒತ್ತುವರಿಯನ್ನು (ಪಟ್ಟಾ ಭೂಮಿಯೂ ಸೇರಿ) ತೆರವುಗೊಳಿಸದಂತೆ ರಾಜ್ಯ ಸರ್ಕಾರ ಸೂಚಿಸಿದೆ. ಅತಿಕ್ರಮಣ ಎಂಬುದು ಕಾನೂನು ಪ್ರಕಾರ ನಿರೂಪಿತವಾದರೂ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಇಂತಹ 2615 ಚನ್ನಗಿರಿ ವಲಯ ವ್ಯಾಪ್ತಿಯಲ್ಲಿ 760 ಪ್ರಕರಣಗಳನ್ನು ಗುರುತಿಸಲಾಗಿದೆ. ಉಳಿದ ತಾಲ್ಲೂಕುಗಳಲ್ಲಿ 110 ಪ್ರಕರಣಗಳಿವೆ. ಜನರು ಜೀವನೋಪಾಯಕ್ಕಾಗಿ ಮಾಡಿಕೊಂಡ ಒತ್ತುವರಿ ಕುರಿತು ಸರ್ಕಾರ ತಟಸ್ಥ ನಿಲುವು ತಳೆದಿದೆ.

170 ಎಕರೆ ಒತ್ತುವರಿ ತೆರವು

ಜಿಲ್ಲೆಯಲ್ಲಿ ಸಾವಿರಾರು ಎಕರೆ ಅರಣ್ಯ ಒತ್ತುವರಿ ಎಂಬುದಾಗಿ ಪರಿಗಣಿಸಿದ ಪ್ರಕರಣಗಳಲ್ಲಿ ಸುಮಾರು 170 ಎಕರೆಯನ್ನು ಮಾತ್ರ ತೆರವುಗೊಳಿಸಲು ಸಾಧ್ಯವಾಗಿದೆ. ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯ ಚುರುಕಾಗಿ ನಡೆಯುತ್ತದೆ. ಶೃಂಗಾರ ಬಾಗು ಹಾಗೂ ಬುಳ್ಳನಾಯಕನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 52 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅತಿದೊಡ್ಡ ತೆರವು ಕಾರ್ಯಾಚರಣೆ ಇದಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 15 ಎಕರೆ ಹಾಗೂ ಚನ್ನಗಿರಿ ವಲಯ ಅರಣ್ಯ ವ್ಯಾಪ್ತಿಯಲ್ಲಿ 5 ಎಕರೆ ತೆರವುಗೊಳಿಸಲಾಗಿದೆ.

400 ಎಕರೆಗೂ ಹೆಚ್ಚು ಅರಣ್ಯವನ್ನು ಒತ್ತುವರಿ ಎಂಬುದಾಗಿ ಪರಿಗಣಿಸಲಾಗಿದೆ. ಇದರಲ್ಲಿ ಮೂರು ಎಕರೆ ಮೇಲ್ಪಟ್ಟ ಒತ್ತುವರಿಯನ್ನು ಮಾತ್ರ ಕಾನೂನು ಪ್ರಕಾರ ತೆರವುಗೊಳಿಸಲಾಗುತ್ತಿದೆ.
ಶಶಿಧರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ದಾವಣಗೆರೆ
ಈವರೆಗೆ ಆಗಿರುವ ದೊಡ್ಡ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ. ಹೊಸ ಒತ್ತುವರಿ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಸರ್ಕಾರದ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ.
ಆಶಿಶ್‌ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಭದ್ರಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT