ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 5,831 ಅಕ್ರಮ ಪಡಿತರ ಕಾರ್ಡ್ ಪತ್ತೆ

ಸರ್ಕಾರಿ ನೌಕರರು, ಹೆಚ್ಚು ಕೃಷಿ ಭೂಮಿ ಉಳ್ಳವರ ಪಾಲಾಗಿತ್ತು ಬಿಪಿಎಲ್‌ ಕಾರ್ಡ್‌
Last Updated 4 ಜುಲೈ 2021, 8:50 IST
ಅಕ್ಷರ ಗಾತ್ರ

ದಾವಣಗೆರೆ: ಆರ್ಥಿಕವಾಗಿ ಸದೃಢರಾಗಿದ್ದರೂ ಅಂತ್ಯೋದಯ ಮತ್ತು ‌ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿರುವ ಒಟ್ಟು 5,831 ಅಕ್ರಮ ಕಾರ್ಡ್‌ಗಳನ್ನು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪತ್ತೆ ಹಚ್ಚಿದೆ.

2021ರ ಜನವರಿ 1ರಿಂದ ಜೂನ್ 30ರವರೆಗೆ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ಇಷ್ಟು ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿದ್ದು, ಈ ಪೈಕಿ 5,401 ಬಿಪಿಎಲ್‌ ಕಾರ್ಡ್‌ ಹಾಗೂ 430 ಅಂತ್ಯೋದಯ ಕಾರ್ಡ್‌ಗಳನ್ನು ಎಪಿಎಲ್‌ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 4,15,446 ಪಡಿತರ ಚೀಟಿಗಳಿವೆ. ಇವುಗಳ ಪೈಕಿ 45,545 ಅಂತ್ಯೋದಯ ಹಾಗೂ 39,598 ಎಪಿಎಲ್ ಹಾಗೂ 3,30,303 ಬಿಪಿಎಲ್ ಕಾರ್ಡ್‌ಗಳಿವೆ. ಒಟ್ಟು 14,30,536 ಫಲಾನುಭವಿಗಳು ಇದ್ದಾರೆ.

‘ರಾಜ್ಯದಾದ್ಯಂತ ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು. ಜಿಲ್ಲೆಯಲ್ಲೂ ಆರ್ಥಿಕವಾಗಿ ಸದೃಢರಾಗಿರುವವರು ಸುಳ್ಳು ಮಾಹಿತಿ ನೀಡಿ ಅಂತ್ಯೋದಯ ಹಾಗೂ ಬಿಪಿಎಲ್‌ ಪಡಿತರ ಚೀಟಿಗಳನ್ನು ಮಾಡಿಸಿಕೊಂಡಿದ್ದರು. ಸ್ವಯಂ ಪ್ರೇರಿತರಾಗಿ ಪಡಿತರ ಚೀಟಿಗಳನ್ನು ವಾಪಸ್‌ ನೀಡಬೇಕು ಎಂದು ಇಲಾಖೆ ಹೇಳಿತ್ತು.ಜೂನ್ 30ರವರೆಗೆ ಅವಕಾಶವನ್ನೂ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಹಲವು ಮಂದಿ ಸ್ವ–ಇಚ್ಛೆಯಿಂದ ಕಾರ್ಡ್‌ಗಳನ್ನು ಹಿಂತಿರುಗಿಸಿದ್ದಾರೆ’ ಎಂದು ಇಲಾಖೆಯ ಜಿಲ್ಲಾ ತಾಂತ್ರಿಕ ಸಹಾಯಕ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ ಇ–ಗವರ್ನೆನ್ಸ್‌ ವರದಿಯ ಪ್ರಕಾರ 14,618 ಮಂದಿ ನಿಧನರಾಗಿದ್ದು, ‘ಇ–ಜನ್ಮ’ ಯೋಜನೆಯಡಿ 1,711 ಜನರ ಮರಣ ದಾಖಲಾಗಿದೆ. ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡ್‌ ಹೊಂದಿರುವವರ ಪೈಕಿ 3 ಎಕರೆ 2 ಗುಂಟೆಗಿಂತಲೂ ಹೆಚ್ಚು ಜಮೀನು ಹೊಂದಿರುವ ಕುಟುಂಬದ 5,628 ಕಾರ್ಡ್‌ಗಳನ್ನು ಗುರುತಿಸಲಾಗಿದೆ’ ಎಂದು ವಿವರ ನೀಡಿದರು.

‘ಜಿಲ್ಲೆಯಲ್ಲಿ61 ಮಂದಿ ಸರ್ಕಾರಿ ನೌಕರರ ಪಟ್ಟಿ ಸಿಕ್ಕಿದ್ದು, ಅವರಿಗೆ ದಂಡ ವಿಧಿಸಲಾಗಿದೆ. ಅಲ್ಲದೇ ಅವುಗಳನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗಿದೆ. ನಗರದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಮಂದಿ ₹1 ಲಕ್ಷಕ್ಕಿಂತಲೂ ಹೆಚ್ಚಿನ ಸಂಬಳ ಪಡೆಯುತ್ತಿರುವವರೂ ಬಿಪಿಎಲ್ ಕಾರ್ಡ್‌ ಪಡೆದಿರುವುದನ್ನು ಪತ್ತೆ ಹಚ್ಚಲಾಗಿದೆ’ ಎಂದು ನಾಗರಾಜ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT