ಭಾನುವಾರ, ಜೂನ್ 26, 2022
28 °C
ಗ್ರಾಮ ಪಂಚಾಯಿತಿಗೆ ಉತ್ತಮ ಸ್ಪಂದನ, ಪಾಲಿಕೆ ವ್ಯಾಪ್ತಿಯಲ್ಲಿ ನಿಧಾನ ಮತ ಚಲಾವಣೆ

ಭಾರತ್‌ ಕಾಲೊನಿಯಲ್ಲಿ ಶೇ 60.73, ಯಲ್ಲಮ್ಮನಗರದಲ್ಲಿ ಶೇ 52.68 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪಾಲಿಕೆಯ ಎರಡು ಸ್ಥಾನಗಳಿಗೆ ಸೋಮವಾರ ನಡೆದ ಮತದಾನದಲ್ಲಿ ಭಾರತ್‌ ಕಾಲೊನಿಯಲ್ಲಿ (20ನೇ ವಾರ್ಡ್‌) ಶೇ 60.73, ಯಲ್ಲಮ್ಮನಗರದಲ್ಲಿ (22ನೇ ವಾರ್ಡ್‌) ಶೇ 52.68ರಷ್ಟು ಮತದಾನವಾಗಿದೆ.

ಭಾರತ್‌ ಕಾಲೊನಿಯಲ್ಲಿ ಆಯ್ಕೆಯಾಗಿದ್ದ ಯಶೋದಾ ಉಮೇಶ್‌ 2020ರಲ್ಲಿ ಹಾಗೂ ಯಲ್ಲಮ್ಮನಗರದಲ್ಲಿ ಆಯ್ಕೆಯಾಗಿದ್ದ ದೇವರಮನಿ ಶಿವಕುಮಾರ್‌ ಅವರು 2021ರಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಜತೆಗೆ ಕಾಂಗ್ರೆಸ್‌ ಪಕ್ಷದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಹಾಗಾಗಿ ಈ ಎರಡು ವಾರ್ಡ್‌ಗಳಿಗೆ ಚುನಾವಣೆ ಘೋಷಣೆಯಾಗಿತ್ತು.

ಸೋಮವಾರ ಬೆಳಿಗ್ಗೆ 7ಕ್ಕೆ ಮತದಾನ ಆರಂಭಗೊಂಡಿತು. ಜನರಲ್ಲಿ ಅಷ್ಟೊಂದು ಉತ್ಸಾಹ ಕಂಡು ಬರಲಿಲ್ಲ. 9 ಗಂಟೆಯ ವೇಳೆಗೆ ಈ ಎರಡು ವಾರ್ಡ್‌ಗಳಲ್ಲಿ ಶೇ 4.4ರಷ್ಟು ಮಾತ್ರ ಮತದಾನವಾಗಿತ್ತು. ಬಳಿಕ ಚುರುಕುಗೊಂಡಿತು. ಬೆಳಿಗ್ಗೆ 11ಕ್ಕೆ ಶೇ 17.23, ಮಧ್ಯಾಹ್ನ 1ಕ್ಕೆ ಶೇ 31.43, ಮಧ್ಯಾಹ್ನ 3ಕ್ಕೆ ಶೇ 41.91ರಷ್ಟು ಮತ ಚಲಾವಣೆಯಾಗಿತ್ತು.

ಭಾರತ್‌ ಕಾಲೊನಿಯಲ್ಲಿ 3,625 ಪುರುಷ ಮತದಾರರಿದ್ದು, 2,265 ಮಂದಿ (ಶೇ 62.48) ಮತ ಚಲಾಯಿಸಿದ್ದಾರೆ. 3,773 ಮಹಿಳಾ ಮತದಾರರಲ್ಲಿ 2,228 ಮಂದಿ (ಶೇ 59.05) ಮತದಾನ ಮಾಡಿದ್ದಾರೆ. ಒಟ್ಟು 7,398 ಮಂದಿಯಲ್ಲಿ 4,493 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಯಲ್ಲಮ್ಮನಗರದಲ್ಲಿ 4,013 ಪುರುಷ ಮತದಾರರಿದ್ದು, 2,113 ಮಂದಿ (ಶೇ 52.65) ಮತ ಚಲಾಯಿಸಿದ್ದಾರೆ. 4,042 ಮಹಿಳಾ ಮತದಾರರಲ್ಲಿ 2,131 ಮಂದಿ (ಶೇ 52.72) ಮತದಾನ ಮಾಡಿದ್ದಾರೆ. ಒಟ್ಟು 8,056 ಮಂದಿಯಲ್ಲಿ 4,244 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಮತ ಹಾಕಿಸಲು ಸ್ಪರ್ಧೆ: ಮತದಾನ ಕೇಂದ್ರಕ್ಕೆ ಬರುವವರನ್ನು ನಾ ಮುಂದು ತಾ ಮುಂದು ಎಂದು ಕಾಂಗ್ರೆಸ್‌ ಮತ್ತು ಬಿಜೆಪಿಯ ಕಾರ್ಯಕರ್ತರು ಓಲೈಸುವುದು ಎಲ್ಲ ಬೂತುಗಳಲ್ಲಿ ಕಂಡು ಬಂತು. ಗುಂಪು ಗೂಡಿದ್ದ ಕಾರ್ಯಕರ್ತರು ಮಾಸ್ಕ್‌ ಹಾಕಿಕೊಂಡಿರಲಿಲ್ಲ. ಆದರೆ ಮತದಾರರಿಗೆ ಅವರು ಮಾಸ್ಕ್‌ ಹಂಚುವುದೂ ಕಂಡು ಬಂತು.

ಪಾಲಿಕೆ ಸದಸ್ಯ ಸ್ಥಾನಕ್ಕೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿರುವ ದೇವರಮನೆ ಶಿವಕುಮಾರ್‌ ಅವರು ಭಾರತ್‌ ಕಾಲೊನಿಗೆ ಬಂದಾಗ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದ ನಡೆಯಿತು. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಪಕ್ಷಕ್ಕೆ ಜೈಕಾರ ಕೂಗಿದರು. ಪೊಲೀಸರು ಬಂದು ವಾತಾವರಣ ವಿಕೋಪಕ್ಕೆ ಹೋಗದಂತೆ ನೋಡಿಕೊಂಡರು.

ಯಲ್ಲಮ್ಮನಗರದಲ್ಲಿ ಮಹಿಳೆಯೊಬ್ಬರು ಮತ ಚಲಾಯಿಸಿದ ಫೋಟೊ ತೆಗೆದಿದ್ದಾರೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡರು.

ಗ್ರಾ.ಪಂ. ಚುನಾವಣೆ: ಶೇ 86.67 ಮತದಾನ

ದಾವಣಗೆರೆ ತಾಲ್ಲೂಕಿನ ಬೇತೂರು, ಕನಗೊಂಡನಹಳ್ಳಿ, ಕುಕ್ಕುವಾಡ ಗ್ರಾಮ ಪಂಚಾಯಿತಿಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 86.67ರಷ್ಟು ಮತದಾನವಾಗಿದೆ.

ಬೇತೂರು ಗ್ರಾಮ ಪಂಚಾಯಿತಿಯಲ್ಲಿ 5,647 ಮತದಾರರಲ್ಲಿ 4,974 ಮಂದಿ (ಶೇ 88.08) ಮತ ಚಲಾಯಿಸಿದ್ದಾರೆ. ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 3,901 ಮತದಾರರ‌ಲ್ಲಿ 3,422 ಮಂದಿ (ಶೇ 87.72) ಹಕ್ಕು ಚಲಾಯಿಸಿದ್ದಾರೆ. ಕುಕ್ಕುವಾಡ ಗ್ರಾಮ ಪಂಚಾಯಿತಿಯಲ್ಲಿ 4,139 ಮತದಾರರಿದ್ದು, 3,467 ಜನರು (ಶೇ 83.76) ಮತದಾನ ಮಾಡಿದ್ದಾರೆ.

ಅರಬಗಟ್ಟೆಯಲ್ಲಿ ಶೇ 83.79: ಹೊನ್ನಾಳಿ ತಾಲ್ಲೂಕು ಅರಬಗಟ್ಟೆ ಗ್ರಾಮ ಪಂಚಾಯಿತಿಯ ಸುಂಕದಗಟ್ಟೆ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಮತದಾರರಿಂದ ಉತ್ತಮ ಸ್ಪಂದನ ದೊರೆತಿದೆ. ಶೇ 83.79 ಮಂದಿ ಮತ ಚಲಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು