ಮಂಗಳವಾರ, ಅಕ್ಟೋಬರ್ 26, 2021
21 °C
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಡಾ. ಮುರುಗೇಶ್ ಸಲಹೆ

ಮಾನಸಿಕ ರೋಗಕ್ಕೆ ಚಿಕಿತ್ಸೆಗಿಂತ ಆಪ್ತ, ಮುಕ್ತ ಸಮಾಲೋಚನೆ ಪರಿಣಾಮಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಾನಸಿಕ ರೋಗದ ನಿವಾರಣೆಗೆ ಮುಖ್ಯವಾಗಿ ಬೇಕಾಗಿರುವುದು ನರ್ಸ್‌ ಮತ್ತು ಮನೋವೈದ್ಯರು. ಅವರು ನೀಡುವ ಸಲಹೆ, ಸೂಚನೆಗಳು, ಆಪ್ತತೆ, ಮುಕ್ತ ಸಮಾಲೋಚನೆಗಳು ಮಾನಸಿಕ ರೋಗಿಗಳಿಗೆ ಔಷಧೋಪಚಾರಗಳ ಚಿಕಿತ್ಸೆಗಿಂತ ಹೆಚ್ಚು ಪರಿಣಾಮಕಾರಿ ಎಂದು ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಿನ್ಸಿಪಾಲ್‌ ಡಾ. ಮುರುಗೇಶ್ ಎಸ್.ಬಿ. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮನೋವೈದ್ಯಕೀಯ ವಿಭಾಗ, ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯ ಆಶ್ರಯದಲ್ಲಿ ಸೋಮವಾರ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯದ ಸಭಾಂಗಣದಲ್ಲಿ ‘ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ’ ಎಂಬ ಘೋಷ ವಾಕ್ಯದಡಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಾನಸಿಕ ರೋಗವು ವಾಸಿಯಾಗದೇ ಇರುವ ಕಾಯಿಲೆ ಅಲ್ಲ. ನಮ್ಮ ಶರೀರಕ್ಕೆ ಹೇಗೆ ಬೇರೆ-ಬೇರೆ ರೀತಿಯ ಕಾಯಿಲೆಗಳು ಬರುತ್ತವೆಯೋ ಹಾಗೆಯೇ ಮಾನಸಿಕ ಕಾಯಿಲೆಯು ಕೂಡ. ಇದಕ್ಕೆ ಸಂಬಂಧಿಸಿದ ಮನೋತಜ್ಞರ ಸಲಹೆಗಳನ್ನು ಪಡೆದುಕೊಂಡು ಪ್ರಾಥಮಿಕ ಹಂತದಲ್ಲಿಯೇ ಗುಣಪಡಿಸಿಕೊಳ್ಳಬೇಕು ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ, ‘ಮನುಷ್ಯನ ದೈನಂದಿನ ಜೀವನದ ನಡವಳಿಕೆಗಳಲ್ಲಿ ಬದಲಾವಣೆ, ಹಾವ-ಭಾವ, ಮದ್ಯವ್ಯಸನ, ಮಾನಸಿಕ ಖಿನ್ನತೆ, ಇಂತಹ ಹಲವಾರು ಲಕ್ಷಣಗಳನ್ನು ಮಾನಸಿಕ ರೋಗಕ್ಕೆ ಸಂಬಂಧಿಸಿದವು ಆಗಿವೆ. ಇವುಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಇದನ್ನೆ ಮಾನಸಿಕ ರೋಗ ಎಂದು ಕರೆಯುತ್ತೇವೆ. ಅಂತಹ ವ್ಯಕ್ತಿಗಳನ್ನು ಸಮಾಜದಿಂದ ದೂರವಿಡುತ್ತೇವೆ. ದೂರ ಇಡದೇ ಅವರ ಬಗ್ಗೆ ಕಾಳಜಿ ವಹಿಸಬೇಕು. ಚಿಕಿತ್ಸೆ ಕೊಡಿಸಬೇಕು’ ಎಂದು ಸಲಹೆ ನೀಡಿದರು.

198 ರಲ್ಲಿ ಮೆಂಟಲ್ ಹೆಲ್ತ್ ಆ್ಯಕ್ಟ್‍ನ್ನು ಜಾರಿಗೆ ತಂದಿತು. ಈ ಕಾಯ್ದೆಯು ಮಾನಸಿಕ ಅಸ್ವಸ್ಥ ರೋಗಿಯ ಕಾಳಜಿ ಮತ್ತು ಚಿಕಿತ್ಸೆ ನೀಡುವುದರ ಜೊತೆಗೆ ಅವರಿಗೆ ಸಂಬಂಧಿಸಿದ ಆಸ್ತಿಯನ್ನು ರಕ್ಷಿಸುವುದೇ ಮುಖ್ಯ ಉದ್ದೇಶ. ಸಮಾಜದಲ್ಲಿ ಸಾಮನ್ಯರಿಗೆ ನೀಡುವ ಗೌರವವನ್ನು ಅವರಿಗೂ ದೊರೆಯುವಂತೆ ಮಾಡಬೇಕು. ಮಾನಸಿಕ ಆರೋಗ್ಯ ಎಲ್ಲರ ಹಕ್ಕಾಗಿದೆ’ ಎಂದರು.

ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಕೆ. ನಾಗರಾಜರಾವ್ ಉದ್ಘಾಟಿಸಿ ಮಾತನಾಡಿ, ‘ಮಾನಸಿಕ ಆರೋಗ್ಯ ಎಂಬುದು ಕೇವಲ ಮನಸ್ಸಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ದೈಹಿಕವಾಗಿಯೂ ಮನುಷ್ಯನ ಮೇಲೆ ಪರಿಣಾಮ ಬೀರುವಂತಹದ್ದು. ಹುಚ್ಚು ಅಲ್ಲದ ಮಾನಸಿಕ ರೋಗಗಳು ಹುಚ್ಚು ಮಾನಸಿಕ ರೋಗಗಳಿಗಿಂತ ಹೆಚ್ಚಿರುತ್ತವೆ. ಬಹಳಷ್ಟು ಜನರು ಮಾನಸಿಕ ರೋಗಕ್ಕೂ, ಮಾನಸಿಕ ಆರೋಗ್ಯಕ್ಕೂ ಇರುವ ವ್ಯತ್ಯಾಸದ ಬಗ್ಗೆ ತಿಳಿದಿಲ್ಲ’ ಎಂದು ಹೇಳಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯಕ್, ಅಭಿಯೋಜನ ಇಲಾಖೆ ಸಹಾಯಕ ನಿರ್ದೇಶಕಿ ಕಲ್ಪನಾ ಕೆ.ಜೆ., ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಮುರುಳೀಧರ ಪಿ.ಡಿ., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಆರ್‌ಸಿಎಚ್ ಡಾ. ಮೀನಾಕ್ಷಿ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.