ಬುಧವಾರ, ಮಾರ್ಚ್ 29, 2023
32 °C

ಬಿಜೆಪಿಯ ಜನವಿರೋಧಿ ನೀತಿಗೆ ಹಾನಗಲ್‌ನಲ್ಲಿ ಪಾಠ: ಡಿ.ಬಸವರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗೆ ಹಾನಗಲ್‌ನಲ್ಲಿ ತಕ್ಕ ಪಾಠವನ್ನು ಜನ ಕಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ತಿಳಿಸಿದರು.

ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯರ ಬದುಕು ದುಸ್ತರವಾಗಿದೆ. ಹೀಗಾಗಿ, ಜನರು ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಒಂದು ಡಜನ್ ಮಂತ್ರಿಗಳು ವಿಧಾನಸೌಧಕ್ಕೆ ಬೀಗ ಜಡಿದು ಹಾನಗಲ್‍ನಲ್ಲಿ ಭಾರಿ ಪ್ರಚಾರ ಮಾಡಿದರೂ ಪ್ರಜ್ಞಾವಂತ ಮತದಾರರು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆಯವರನ್ನು ಗೆಲ್ಲಿಸಿರುವುದು ಪ್ರಜಾಪ್ರಭುತ್ವದ ಗೆಲುವಾಗಿದೆ. ಆಡಳಿತ ರೂಢ ಬಿಜೆಪಿ ಹಣದ ಹೊಳೆಯನ್ನೇ ಹರಿಸಿದರೂ ಬಿಜೆಪಿಗೆ ಸೋಲಾಗುವ ಮೂಲಕ ಹಣ ಬಲಕ್ಕಿಂತ ಜನಬಲ ಹಾನಗಲ್‍ನಲ್ಲಿ ಗೆಲವು ಸಾಧಿಸಿದೆ ಎಂದು ಹೇಳಿದರು.

ಶತಾಯ ಗತಾಯ ಚುನಾವಣೆ ಗೆಲ್ಲಲು ಒಂದು ತಿಂಗಳ ಕಾಲ ಪ್ರಚಾರದಲ್ಲಿ ತೊಡಗಿಸಿಕೊಂಡರೂ ಮುಖ್ಯಮಂತ್ರಿಗಳು, ಮಂತ್ರಿಗಳು ಮತ್ತು ಬಿಜೆಪಿ ನಾಯಕರು ಜನರ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಆಡಳಿತ ಯಂತ್ರದ ದುರುಪಯೋಗ ಪಡಿಸಿಕೊಂಡು ಮುಖ್ಯಮಂತ್ರಿ ಮತ್ತು ಸಚಿವರು ಹಾನಗಲ್‍ನಲ್ಲಿ ಗೆಲ್ಲಲ್ಲೇಬೇಕೆಂದು ಏನೆಲ್ಲ ತಂತ್ರ ರೂಪಿಸಿದ್ದರು. ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡವಾರು ಮತಗಳಿಕೆಯಲ್ಲಿ ಸಾಧನೆ ತೋರಿದೆ. ಒಟ್ಟಾರೆಯಾಗಿ ಎರಡು ಉಪಚುನಾವಣೆಗಳಲ್ಲಿ ಬಿಜೆಪಿ ಸರ್ಕಾರಕ್ಕೆ ಜನರು ಎಚ್ಚರಿಕೆ ಘಂಟೆ ಬಾರಿಸಿದ್ದಾರೆ ಎಂದು ತಿಳಿಸಿದರು..

ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್, ‘ಕೆಲಸ ಮಾಡಿದವರಿಗೆ ಜನ ಬೆಂಬಲ ನೀಡುತ್ತಾರೆ ಎಂಬುದಕ್ಕೆ ಹಾನಗಲ್ ಉದಾಹರಣೆಯಾಗಿದೆ’ ಎಂದರು.

ಪಾಲಿಕೆ ಸದಸ್ಯ ಕೆ.ಚಮನ್ ಸಾಬ್, ‘ಜಾತಿರಾಜಕಾರಣ ಮಾಡುವ ಪಕ್ಷಗಳಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅಲ್ಪಸಂಖ್ಯಾತರ ಒಲೈಕೆಗೆ ಪ್ರಯತ್ನಿಸಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಲ್ಲ ಜಾತಿಗಳ ಮಠಾಧೀಶರನ್ನು ಕರೆದು ಮತ ಸೆಳೆಯಲು ಪ್ರಯತ್ನಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮತದಾರ ತಿರಸ್ಕರಿಸಿದ್ದಾರೆ ಎಂದು ವಿಶ್ಲೇಷಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಮಹಮ್ಮದ್ ಜಿಕ್ರಿಯಾ, ಆರ್.ಎಚ್ ನಾಗಭೂಷಣ್, ಕೆ .ಮಂಜುನಾಥ್, ಎಂ.ಕೆ. ಲಿಯಾಕತ್ ಅಲಿ, ಆರ್‌ಬಿಝಡ್ ಬಾಷಾ, ಡಿ.ಶಿವಕುಮಾರ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.