ಬುಧವಾರ, ಏಪ್ರಿಲ್ 21, 2021
32 °C
ಓದು ಮುಂದುವರಿಸಿ ಉದ್ಯೋಗ ಪಡೆಯುವ ಕನಸಿನೊಂದಿಗೆ ವಿದ್ಯಾರ್ಥಿಯ ದುಡಿಮೆ

ಶೈಕ್ಷಣಿಕ ಚಟುವಟಿಕೆ ಸ್ಥಗಿತ, ತಂದೆ ಜತೆ ಮೀನು ಬೇಟೆ: ವಿದ್ಯಾರ್ಥಿಯ ದುಡಿಮೆ

ಕೆ.ಎಸ್‌. ವೀರೇಶ್‌ಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಕೋವಿಡ್ ಸಂಕಷ್ಟದಲ್ಲಿ ಶೈಕ್ಷಣಿಕ ಚಟುವಟಿಕೆ ಸ್ಥಗಿತವಾಗಿದ್ದು, ಸ್ಥಿತಿವಂತರ ಮಕ್ಕಳು ಸವಲತ್ತುಗಳೊಂದಿಗೆ ಕಾಲ ಕಳೆಯುತ್ತಿದ್ದರೆ, ಕೆಲ ಮಕ್ಕಳು ಜೀವನೋಪಾಯಕ್ಕಾಗಿ ಪೋಷಕರ ದುಡಿಮೆಗೆ ಸಹಕಾರ ನೀಡುತ್ತಿದ್ದಾರೆ.

ಸೂಳೆಕೆರೆ ಹಿನ್ನೀರಿನ ಅಂಚಿನಲ್ಲಿರುವ ಜಕ್ಕಲಿ ಗ್ರಾಮದ ಗಿರೀಶ್ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಇಂಗ್ಲಿಷ್‌ ಮಾಧ್ಯಮದಲ್ಲಿ ಶೇ 73 ಅಂಕ ಗಳಿಸಿದ್ದ. ಪ್ರಥಮ ಪಿಯುಗೆ ಸಮೀಪದ ಸಂತೇಬೆನ್ನೂರಿನ ಕೆಪಿಎಸ್ ಶಾಲೆಗೆ ಪ್ರವೇಶ ಪಡೆದಿದ್ದ. ಕಾಲೇಜು ಆರಂಭವಾಗದ ಕಾರಣ ಸೂಳೆಕೆರೆಯಲ್ಲಿ ನಿತ್ಯ ತಂದೆಯೊಂದಿಗೆ ಮೀನು ಹಿಡಿಯಲು ತೆರಳುತ್ತಿದ್ದಾನೆ. ಸದ್ಯ ತಂದೆಯ ದುಡಿಮೆಯ ಪಾಲುದಾರ.

‘ಈಗ ಏನು ಮಾಡುತ್ತೀಯಾ’ ಎಂದವರಿಗೆ ‘ಬ್ಯಾಟೆಗೆ ಹೋಕಿನಿ... ಮೀನು ಬ್ಯಾಟೆ’ ಎನ್ನುತ್ತಾನೆ.

ನಿತ್ಯ ಬೆಳಗಿನ ಜಾವ 5ಕ್ಕೆ ತಂದೆಯೊಂದಿಗೆ ದೋಣಿ ಹುಟ್ಟು ಹಾಕುತ್ತ ಸಾಗುವ ಅವರ ಮೀನು ಬೇಟೆ ಬೆಳಿಗ್ಗೆ 9ರ ವರೆಗೆ ನಡೆಯುತ್ತದೆ.

‘ಸದ್ಯ ದಿನಕ್ಕೆ 5ರಿಂದ 10 ಕೆ.ಜಿ. ಮೀನು ಸಿಗುತ್ತಿವೆ. ಗೌರಿ, ರೋವ್, ಜಲೇಬಿ ತಳಿಯ ಮೀನುಗಳು ಸಿಗುತ್ತಿವೆ. ಪ್ರತಿ ಕೆ.ಜಿ. ಗೌರಿ ಮೀನು ₹ 250, ರೋವ್ ₹ 130 ಹಾಗೂ ಜಲೇಬಿ ₹ 100 ರಂತೆ ಮಾರಾಟ ಮಾಡುತ್ತೇವೆ’ ಎನ್ನುತ್ತಾನೆ ಗಿರೀಶ.

‘ಸೂಳೆಕೆರೆಯಲ್ಲಿ 200ರಿಂದ 300 ಮೀನುಗಾರರು ನಿತ್ಯ ಮೀನುಗಾರಿಕೆ ನಡೆಸುತ್ತಾರೆ. ನಮ್ಮ ಗ್ರಾಮದಲ್ಲಿ 8 ಮೀನುಗಾರರಿದ್ದೇವೆ. ಹಿಂದಿನ ದಿನ  2ರಿಂದ 3 ಕಿ.ಮೀ. ನೀರಿನಲ್ಲಿ ಸಾಗಿ ಬಲೆ ಬಿಡುತ್ತೇವೆ. ಮಾರನೆ ದಿನ ಬೆಳಿಗ್ಗೆ ಮೀನು ಸಂಗ್ರಹ ನಡೆಯುತ್ತದೆ. ಮಳೆಗಾಲದಲ್ಲಿ 50 ಕೆ.ಜಿ.ವರೆಗೂ ಮೀನು ಸಿಗುತ್ತವೆ. ಈಗ ವಂಶಾಭಿವೃದ್ಧಿ ಸಮಯ. ಹಾಗಾಗಿ ಮೀನು ಬಲೆಗೆ ಸಿಗುವುದು ಕಡಿಮೆ. ಓದು ಮುಂದುವರಿಸಿ ಪದವಿ ಪಡೆದು ಉದ್ಯೋಗ ಪಡೆಯಲು ಇಚ್ಛಿಸಿದ್ದೇನೆ’ ಎಂದು ತನ್ನ ಅನುಭವ ಹಂಚಿಕೊಂಡ.

‘ಪ್ರತಿ ವರ್ಷ ಮೀನು ಪರವಾನಗಿಗಾಗಿ ₹ 3,500 ಕಟ್ಟಬೇಕು. ಮೀನುಗಾರಿಕೆ ಇಲಾಖೆಯಿಂದ ದೋಣಿ ಹಾಗೂ ಬಲೆ
ಗಳನ್ನು ಕೊಡುತ್ತಿದ್ದರು. ಎರಡು ವರ್ಷ ಗಳಿಂದ ಕೊಡುತ್ತಿಲ್ಲ’ ಎಂದು ಬೇಸರಿಸಿ ದರು ಗಿರೀಶನ ತಂದೆ ಹನುಂತಪ್ಪ ಜಕ್ಕಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು