ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದೊಳಗೆ ಇಲಾಖಾವಾರು ಕ್ರಿಯಾಯೋಜನೆ ಸಿದ್ಧಪಡಿಸಿ: ಉಮಾಶಂಕರ್‌ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
Last Updated 6 ಮೇ 2019, 13:40 IST
ಅಕ್ಷರ ಗಾತ್ರ

ದಾವಣಗೆರೆ: 2019–20ನೇ ಸಾಲಿಗೆ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳಿಗೆ ಮೇ 15ರೊಳಗೆ ಎಲ್ಲಾ ಇಲಾಖೆಗಳೂ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಬರ ಪರಿಸ್ಥಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರತಿ ವರ್ಷವೂ ಕ್ರಿಯಾಯೋಜನೆಗಳನ್ನು ತಡವಾಗಿ ಸಿದ್ಧಪಡಿಸುವುದು ರೂಢಿಯಾಗಿಬಿಟ್ಟಿದೆ. ಈ ಬಾರಿ ತಕ್ಷಣವೇ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ 15ರೊಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು. ಬಳಿಕ ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣವೇ ಅದನ್ನು ಸ್ಥಾಯಿ ಸಮಿತಿಯ ಮುಂದೆ ಇಡಬೇಕು. ಬಳಿಕ ಸಾಮಾನ್ಯ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಪಡೆದು ಜೂನ್‌ನಿಂದಲೇ ಕೆಲಸ ಆರಂಭಿಸಬೇಕು. ಜೊತೆಗೆ ಮುಂದುವರಿದ ಕಾಮಗಾರಿಗಳನ್ನೂ ಕೈಗೊಳ್ಳಬೇಕು’ ಎಂದು ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆದೇಶಿಸಿದರು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌, ‘ಕಾಲುವೆ ವ್ಯಾಪ್ತಿಯ ಸುಮಾರು 3,000 ಹೆಕ್ಟೇರ್‌ ಭತ್ತಕ್ಕೆ ನೀರಿನ ಕೊರತೆ ಉಂಟಾಗಬಹುದು ಎಂದು ಅಂದಾಜು ಮಾಡಲಾಗಿದೆ. ಮೇ 15ರವರೆಗೆ ಕಾಲುವೆಗೆ ನೀರು ಬಿಡಲು ಭದ್ರಾ ಕಾಡಾ ಒಪ್ಪಿಗೆ ಸೂಚಿಸಿದೆ. ಈ ತಿಂಗಳ ಅಂತ್ಯದವರೆಗೂ ನೀರು ಬಿಡುವಂತೆ ರೈತರು ಕೇಳುತ್ತಿದ್ದಾರೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಮಾಶಂಕರ್‌, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಬಗ್ಗೆ ಸಭೆ ನಡೆಸಿ ಭದ್ರಾ ಮಂಡಳಿಗೆ ತಿಂಗಳ ಅಂತ್ಯದವರೆಗೂ ನೀರು ಹರಿಸುವಂತೆ ಪತ್ರ ಬರೆಯಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಶುದ್ಧ ನೀರಿಗೆ ಒತ್ತು ನೀಡಿ: ಜಿಲ್ಲೆಯಲ್ಲಿ 793 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, 768 ಘಟಕಗಳು ಕಾರ್ಯಾರಂಭಗೊಂಡಿವೆ. ಉಳಿದವರನ್ನು ಆರಂಭಿಸಬೇಕಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಎನ್‌. ರಾಜು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಮಾಶಂಕರ್‌, ‘ಶುದ್ಧ ನೀರಿನ ಘಟಕದ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿಗಳೂ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಇದೊಂದು ಉತ್ತಮ ಯೋಜನೆಯಾಗಿದ್ದು, ಇದರ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕು. ಶೇ 50ರಷ್ಟು ಕಾಯಿಲೆಗಳು ಅಶುದ್ಧ ನೀರಿನಿಂದಲೇ ಬರುತ್ತಿವೆ. ಹೀಗಾಗಿ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಉಮಾಶಂಕರ್‌ ಅವರು ಬರಗಾಲ, ಕುಡಿಯುವ ನೀರಿನ ಸಮಸ್ಯೆಗಳ ಅವಲೋಕನ ನಡೆಸಿದ ಬಳಿಕ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್‌. ಬಸವರಾಜೇಂದ್ರ, ಉಪ ಕಾರ್ಯದರ್ಶಿ ಭೀಮಾ ನಾಯ್ಕ, ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬೇಸಿಗೆಯಲ್ಲೇ ಬರಗಾಲದ ಅನುದಾನ ಬಳಸಿ

‘ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಿಆರ್‌ಎಫ್‌ನಿಂದ ಹಣ ನೀಡಲಾಗಿದೆ. ಬೇಸಿಗೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳದೆ ಮಳೆಗಾಲದಲ್ಲಿ ನಡೆಸಿದರೆ ಏನು ಪ್ರಯೋಜನ? ಫೆಬ್ರುವರಿ, ಮಾರ್ಚ್‌ ನೀಡಿದ ಹಣವನ್ನು ಈ ತಿಂಗಳ ಒಳಗೆ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಿ’ ಎಂದು ಉಮಾಶಂಕರ್‌ ಸೂಚಿಸಿದರು.

‘ಐದು ತಾಲ್ಲೂಕುಗಳು ಬರಪೀಡಿತವಾಗಿವೆ. ಹೀಗಿದ್ದರೂ ಹಣ ಖರ್ಚು ಮಾಡಲು ಆಗುತ್ತಿಲ್ಲ ಎಂದರೆ ಹೇಗೆ? ಕೆಲಸ ಮುಗಿಸಿ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಬೇಕಾಗಿತ್ತು’ ಎಂದು ಅವರು ಹೇಳಿದರು.

ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸಿಆರ್‌ಎಫ್‌ ಹಣವನ್ನು ಬಳಸಿಕೊಂಡು ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಳೆ ಹಾನಿ: ₹ 58 ಲಕ್ಷಕ್ಕೆ ಬೇಡಿಕೆ

ಜಿಲ್ಲೆಯಲ್ಲಿ ಈಚೆಗೆ ಬಂದು ಗಾಳಿಮಳೆಗೆ ಒಟ್ಟು 396 ಹೆಕ್ಟೇರ್‌ ಪ್ರದೇಶಗಳಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ರೈತರಿಗೆ ಪರಿಹಾರ ವಿತರಿಸಲು ₹ 58.10 ಲಕ್ಷ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

245 ಹೆಕ್ಟೇರ್‌ ಭತ್ತ ಹಾಗೂ 15 ಹೆಕ್ಟೇರ್‌ ಮೆಕ್ಕೆಜೋಳ ಹಾನಿಯಾಗಿದ್ದು, ಇದಕ್ಕೆ ಪರಿಹಾರ ವಿತರಿಸಲು ₹ 35.1 ಕೋಟಿ ಅಗತ್ಯವಿದೆ. ಹರಿಹರ, ಜಗಳೂರು ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಬಾಳೆ, ದಾಳಿಂಬೆ, ಅಡಿಕೆ, ಪಪ್ಪಾಯಿ, ಎಲೆಬಳ್ಳಿ, ತೆಂಗು ಸೇರಿ ಒಟ್ಟು 135.57 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ. ರೈತರಿಗೆ ಪರಿಹಾರ ವಿತರಿಸಲು ₹ 23 ಲಕ್ಷ ಅಗತ್ಯವಿದೆ ಎಂದು ವಿವರ ನೀಡಿದರು.

ಅಂಕಿ–ಅಂಶ

67 ಟ್ಯಾಂಕರ್‌ ಮೂಲಕ ನೀರು ಸರಬರಾಜು ಆಗುತ್ತಿರುವ ಗ್ರಾಮಗಳು

106 ಗ್ರಾಮಗಳಿಗೆ ನೀರು ಪೂರೈಸುತ್ತಿರುವ ಟ್ಯಾಂಕರ್‌ಗಳು

63 ನೀರು ಪೂರೈಸುತ್ತಿರುವ ಖಾಸಗಿ ಕೊಳವೆಬಾವಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT