ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಕ್ರಮ

ಭದ್ರಾ ಅಚ್ಚುಕಟ್ಟು ರೈತರೊಂದಿಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್
Published 24 ಫೆಬ್ರುವರಿ 2024, 7:05 IST
Last Updated 24 ಫೆಬ್ರುವರಿ 2024, 7:05 IST
ಅಕ್ಷರ ಗಾತ್ರ

ದಾವಣಗೆರೆ: ಈ ಬಾರಿ ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ತೋಟಗಾರಿಕೆ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಸರದಿಯಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಕೊನೆಭಾಗದ ರೈತರಿಗೆ ನೀರು ತಲುಪದೇ ಸಂಕಷ್ಟ ಎದುರಿಸುತ್ತಿದ್ದಾರೆ. ಕೊನೆಯ ಭಾಗದ ರೈತರಿಗೆ ನೀರು ಕೊಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ತ್ಯಾವಣಿಗೆ, ಮೆಳ್ಳೆಕಟ್ಟೆ, ಹಿರೇಮಳಲಿ, ವಲಯ 2ರ ರೈತ ಮುಖಂಡರು, ರೈತರೊಂದಿಗೆ ಸಭೆ ನಡೆಸಿ ಮಾತನಾಡಿದರು.

‘ಜಲಾಶಯದಲ್ಲಿನ ನೀರಿನ ಸಂಗ್ರಹದ ಆಧಾರದ ಮೇಲೆ ನೀರಿನ ಹಂಚಿಕೆಯಾಗಿದ್ದು, ಕಾಲುವೆಗೆ ಅಳವಡಿಸಿರುವ ಅನಧಿಕೃತ ಪಂಪ್‍ಸೆಟ್‍ಗಳನ್ನು ತೆರವು ಮಾಡಿ, ಕಾಲುವೆಗೆ ಹೆಚ್ಚಿನ ನೀರು ಹರಿಸುವ ಮೂಲಕ ಕೊನೆ ಭಾಗಕ್ಕೆ ನೀರು ತೆಗೆದುಕೊಂಡು ಹೋಗಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಈಗಿನ ವೇಳಾಪಟ್ಟಿಯಂತೆ ಫೆ.28ರವರೆಗೆ ನೀರು ಬಿಡಲಾಗುತ್ತಿದ್ದು, ಇದನ್ನು ಕೆಲವು ದಿನ ಮುಂದುವರೆಸಲು ಸಚಿವರ ಗಮನಕ್ಕೆ ತರಲಾಗುತ್ತದೆ. ಕಾಲುವೆಯಲ್ಲಿ ಹೆಚ್ಚಿನ ಕ್ಯುಸೆಕ್‌ ನೀರು ಹರಿಸಲು ಮತ್ತು ಭದ್ರಾವತಿ ಭಾಗದಲ್ಲಿ ಅನಧಿಕೃತವಾಗಿ ಹಾಕಿರುವ ಕೊಳವೆಬಾವಿ ತೆರವಿಗೂ ಮನವಿ ಮಾಡಲಾಗುತ್ತದೆ. ಕಾಲುವೆ ಮೇಲ್ಬಾಗದಲ್ಲಿನ ರೈತರಿಗೆ ಸಾಕಷ್ಟು ನೀರು ಲಭ್ಯವಾಗಿದ್ದು ಕೊನೆ ಭಾಗದ ರೈತರ ಹಿತದೃಷ್ಟಿಯಿಂದ ನೀರನ್ನು ಬಳಕೆ ಮಾಡದಂತೆ ಮನವಿ ಮಾಡಲಾಗುತ್ತದೆ’ ಎಂದರು.

‘ಚನ್ನಗಿರಿ ತಾಲ್ಲೂಕು ಸೇರಿದಂತೆ ಕಾಲುವೆಯ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಪಂಪ್‍ಸೆಟ್ ಅಳವಡಿಸಿರುವುದನ್ನು ಈಗಾಗಲೇ ತೆರವಿಗೆ ಸೂಚನೆ ನೀಡಲಾಗಿದೆ. ವಿದ್ಯುತ್ ಸರಬರಾಜು ನಿಲ್ಲಿಸಲಾಗಿದೆ. ಆದರೂ ನೀರೆತ್ತಿದರೆ ಪಂಪ್‍ಸೆಟ್ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ‘ಕಾಲುವೆಯಲ್ಲಿ  ಹೂಳೆತ್ತಲು ಖಾತರಿಯಡಿ 4 ಲಕ್ಷ ಮಾನವದಿನಗಳ ಸೃಜನೆಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ’ ಎಂದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್, ರೈತ ಮುಖಂಡರಾದ ಕೆ.ಎನ್. ಮಂಜುನಾಥ್, ಹನುಮಂತಪ್ಪ, ಕೋಳೇನಹಳ್ಳಿ ಸತೀಶ್, ಧನಂಜಯ ಕಡ್ಲೆಬಾಳು, ಮಲ್ಲೇಶಪ್ಪ ಈ ರೈತರು ಸಭೆಯಲ್ಲಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ, ಹರ್ಷ, ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಬೆಸ್ಕಾಂ ಇ.ಇ ಪಾಟೀಲ್ ಹಾಗೂ ರೈತರು ಇದ್ದರು.

ರೈತರ ಪ್ರತಿಭಟನೆ

‘ಭದ್ರಾ ನೀರು ಹರಿಸಿ ಒಂದು ವಾರವಾದರೂ ಕೊನೆ ಭಾಗಕ್ಕೆ ನೀರು ತಲುಪಿಲ್ಲ ಕೇವಲ 12 ದಿನ ನೀರು ಬಿಡುವ ಅವೈಜ್ಞಾನಿಕ ವೇಳಾಪಟ್ಟಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕಾರಿಗನೂರು ಕ್ರಾಸ್ ಜೆ.ಎಚ್. ಪಟೇಲ್ ಸರ್ಕಲ್ ನಲ್ಲಿ ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಆರಂಭಿಸಿದ್ದರು.

ಉಪವಿಭಾಗಾಧಿಕಾರಿ ದುರ್ಗಾಶ್ರೀ ಮತ್ತು ತಹಶೀಲ್ದಾರ್‌ ಎಂ.ಬಿ. ಅಶ್ವತ್ಥ್ ಅವರು ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಯವರು ಮಾತುಕತೆಗೆ ಕರೆದಿದ್ದಾರೆ ಎಂದು ಹೇಳಿದ್ದರಿಂದ ರೈತರು ಸಭೆಗೆ ಹಾಜರಾದರು.

ಮತ್ತಿ ವಕೀಲ ಹನುಮಂತಪ್ಪ, ಕುಕ್ಕುವಾಡದ ಕೆ.ಎನ್. ಮಂಜುನಾಥ್, ಡಿ. ಮಲ್ಲೇಶಪ್ಪ, ಡಿ.ಸಿ. ದಿನೇಶ್, ಡಿ. ಬಿ. ಅರವಿಂದ, ಎಸ್. ಎಂ. ಕುಮಾರಸ್ವಾಮಿ, ಚಂದ್ರಪ್ಪ ಮೇಷ್ಟ್ರು ಮುದಹದಡಿ ದಿಳ್ಳೇಪ್ಪ, ಕಾರಿಗನೂರು ಮಂಜುನಾಥ ಪಟೇಲ್, ಬಿ ಎಲ್ ಸತೀಶ್, ಶಿವಣ್ಣ, ಗಂಗಾಧರ ಹೂವಿನಮಡು ಪ್ರಕಾಶ್, ಗೋಣಿವಾಡ ಪಿ. ಎ. ನಾಗರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT