ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಕ್ರಮ: ಸಚಿವ ಮಧು ಬಂಗಾರಪ್ಪ

Published 23 ಜನವರಿ 2024, 16:35 IST
Last Updated 23 ಜನವರಿ 2024, 16:35 IST
ಅಕ್ಷರ ಗಾತ್ರ

ಶ್ರೀರಾಂಪುರ: ‘ಅನುದಾನಿತ ಶಾಲೆಗಳಲ್ಲಿ 8 ವರ್ಷಗಳಿಂದ ಶಿಕ್ಷಕರ ನೇಮಕಾತಿ ಮಾಡಿಕೊಂಡಿಲ್ಲ. ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರಿದ್ದು. ಸದ್ಯದಲ್ಲಿಯೇ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಿಕ್ಷಕರ ಕೊರತೆ ನೀಗಿಸಲು ಕ್ರಮ ವಹಿಸಲಾಗುವುದು’ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.

ಹೋಬಳಿಯ ಬೆಲಗೂರು ಗ್ರಾಮದ ಗಂಗಮ್ಮ ಭೀಮೋಜಪ್ಪ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಅನುದಾನಿತ ಶಾಲೆಗಲ್ಲಿನ ಸಮಸ್ಯೆ ತಿಳಿದಿದೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ. ಶಿಕ್ಷಣ ಇಲಾಖೆಯಲ್ಲಿ ಬಹಳ ಸಮಸ್ಯೆ ಇದೆ. ಇದು ಹಿಂದಿನ ಸರ್ಕಾರದ ಬಳುವಳಿಯಾಗಿದ್ದು ಎಲ್ಲರ ಸಹಕಾರದಿಂದ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ಒಪಿಎಸ್ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕು’ ಎಂದರು.

‘ಮಕ್ಕಳ ಕೈಯಲ್ಲಿ ಪೆನ್ನು ಇರಬೇಕು ಪೊರಕೆ ಇರಬಾರದು. ಹಾಗೆಯೇ ಶಿಕ್ಷಕರ ಕೈಯಲ್ಲೂ ಪೊರಕೆ ಇರಬಾರದು. ಶಾಲೆಗಳಲ್ಲಿನ ಸ್ವಚ್ಛತೆಗೆ ಅನುದಾನ ನೀಡಲಾಗುವುದು. ಮುಂದಿನ 3 ವರ್ಷಗಳಲ್ಲಿ ಪ್ರತಿ 2 ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು’ ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ, ಸಚಿವ ಡಿ.ಸುಧಾಕರ್ ಮಾತನಾಡಿದರು.

ಬೆಲಗೂರು ಮಾರುತಿ ಪೀಠದ ವಿಜಯ ಮಾರುತಿ ಶರ್ಮಾ ಸಾನ್ನಿಧ್ಯ ವಹಿಸಿದ್ದರು. ಕಟ್ಟಡ ದಾನಿಗಳಾದ ಬಿ.ಎಂ.ವಸಂತ ಕುಮಾರ್ ಅವರ ಸಹೋದರ ಸತೀಶ್ ದಂಪತಿಯನ್ನು ಸನ್ಮಾನಿಸಲಾಯಿತು.

ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಬಿಇಒ ಸಯ್ಯದ್ ಮೊಸೀನ್, ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಸದಸ್ಯರಾದ ಎಂ.ಪಿ. ಶಂಕರ್, ಅಲ್ತಾಪ್ ಪಾಷ, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ ತಿಪ್ಪೇಶ್, ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಬಾಬು, ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

3 ಗಂಟೆ ತಡವಾಗಿ ಬಂದ ಸಚಿವರು:

ಸಚಿವರು ಸುಮಾರು 3 ಗಂಟೆ ತಡವಾಗಿ ಬಂದಿದ್ದರಿಂದ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಂಜೆ 5 ಗಂಟೆಗೆ ಶುರುವಾಯಿತು. ಸಚಿವರ ಸ್ವಾಗತಕ್ಕಾಗಿ ಮಕ್ಕಳು 3 ಗಂಟೆಗಳ ಕಾಲ ಕಾಯುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT