ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗೆ ಚಾಚಿದ ಜಾಲಿ ಗಿಡಗಳ ರೆಂಬೆಗಳು: ಭಯ ಹುಟ್ಟಿಸುವ ರಿಂಗ್‌ ರಸ್ತೆ ಸಂಚಾರ

ಹೂವಿನ ಹಾಸಿಗೆಯ ಬದಲು ಮುಳ್ಳಿನ ಹಾದಿಯಾದ ಹರಿಹರದ ರಿಂಗ್‌ ರಸ್ತೆ
Last Updated 16 ಫೆಬ್ರುವರಿ 2023, 4:51 IST
ಅಕ್ಷರ ಗಾತ್ರ

ಹರಿಹರ: ಓಡಾಡುವವರಿಗೆ ತಾಗುವಂತೆ ಹತ್ತಾರು ಅಡಿ ಉದ್ದಕ್ಕೆ ರಸ್ತೆಗೆ ಚಾಚಿದ ಜಾಲಿ ಗಿಡಗಳ ರೆಂಬೆಗಳು, ಒಂದು ಬದಿ ಹಳೆಯ ಕೋಟೆಯಂತಹ ದೈತ್ಯಾಕಾರದ ಹಳತಾದ ಗೋಡೆ, ಇನ್ನೊಂದು ಬದಿ ದಟ್ಟವಾಗಿ ಬೆಳೆದ ಗಿಡ–ಗಂಟಿಗಳು, ಬಲಿಗಾಗಿ ಕಾದಿವೆ ಎಂಬಂತೆ ಬಾಯ್ದೆರೆದ ಯುಜಿಡಿ ಮ್ಯಾನ್‌ಹೋಲ್‌ಗಳು, ನಡುವೆ ಸಿಗುವ ಸ್ಮಶಾನ, ಬೀಸುವ ಸುಳಿ ಗಾಳಿಯ ಶಬ್ದಕ್ಕೆ ಎದೆ ಝಲ್ ಎನ್ನುತ್ತದೆ.

ಇದೇನಿದು, ದೆವ್ವದ ಕಥೆಯಂತಿದೆಯಲ್ಲ ಅಂದುಕೊಳ್ಳದಿರಿ. ಇದು ಜಿಲ್ಲೆಯ 2ನೇ ದೊಡ್ಡ ನಗರವಾದ ಹರಿಹರದ ಪ್ರಮುಖ ರಿಂಗ್ ರಸ್ತೆಯಾದ ಕಿರ್ಲೋಸ್ಕರ್ ಕಂಪನಿಯ ಹಿಂಭಾಗದ ರಸ್ತೆಯ ದುರವಸ್ಥೆ.

ಈ ರಸ್ತೆಯಲ್ಲಿ ಹರಿಹರದ ಖ್ಯಾತಿ ಹೆಚ್ಚಿಸಿದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಆಡ್ವಾನ್ಸ್ಡ್‌ಮ್ಯಾನೇಜ್‌ಮೆಂಟ್ ಸ್ಟಡೀಸ್ (ಕಿಯಾಮ್ಸ್), ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ), ಕೆಎಸ್‌ಆರ್‌ಟಿಸಿ ಡಿಪೊ, ಐಟಿಐ ಕಾಲೇಜು, ಒಳ ಚರಂಡಿ ನೀರು ಶುದ್ಧೀಕರಣ ಘಟಕ, ಪ್ರಸಿದ್ಧ ನಾರಾಯಣ ಆಶ್ರಮ, ಹರಿಜನರ ರುದ್ರಭೂಮಿ ಇವೆ.

ಇಲ್ಲಿರುವ ವಿದ್ಯಾಸಂಸ್ಥೆ, ಡಿಪೊ, ಆಶ್ರಮಕ್ಕೆ ನಿತ್ಯ ನೂರಾರು ಜನರು ಸಂಚರಿಸುತ್ತಾರೆ. ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೂ ಜನ ನಿತ್ಯ ಈ ರಸ್ತೆಯಲ್ಲಿ ಸಾಗುತ್ತಾರೆ. ಈ ಭಾಗದಲ್ಲಿರುವ ಜಮೀನುಗಳಿಗೆ ರೈತರು, ಕೂಲಿಕಾರ್ಮಿಕರು ಹೋಗಿ ಬರುತ್ತಾರೆ.

ಒಳಚರಂಡಿ ಶುದ್ಧೀಕರಣ ಘಟಕ ಇಲ್ಲೇ ಇದ್ದು, ಅಲ್ಲಿಗೆ ತ್ಯಾಜ್ಯ ನೀರು ಸಾಗಿಸುವ ಬೃಹತ್‌ ಮ್ಯಾನ್‌ಹೋಲ್‌ಗಳು ಮಳೆಗಾಲದಲ್ಲಿ ತುಂಬಿ ಈ ರಸ್ತೆಯನ್ನು ಜಲಾವೃತಗೊಳಿಸುತ್ತವೆ. ಆಗ ನಡೆದುಕೊಂಡು ಸಾಗುವುದು ಬಿಡಿ, ವಾಹನಗಳಲ್ಲಿ ಹೋಗಲೂ ಸಾಧ್ಯವಾಗುವುದಿಲ್ಲ. ಆಗ ನೂರಾರು ವಿದ್ಯಾರ್ಥಿಗಳು ಹರಪನಹಳ್ಳಿ ರಸ್ತೆಯ ನಾಲ್ಕೈದು ಕಿ.ಮೀ. ಸುತ್ತು ಹಾಕಿ ಬರುವ ಶಿಕ್ಷೆಗೆ ಈಡಾಗುತ್ತಾರೆ.

ಒಂದು ಬದಿ ರಾಘವೇಂದ್ರ ಮಠದಿಂದ ಬೀರೂರು–ಸಮ್ಮಸಗಿ ಹೆದ್ದಾರಿಯಿಂದ ಆರಂಭವಾಗುವ ಈ ರಸ್ತೆ ಅಂದಾಜು ಎರಡೂವರೆ ಕಿ.ಮೀ. ಸಾಗಿ ಲಕ್ಷ್ಮಿ ಫೌಂಡ್ರಿ ಹತ್ತಿರ ಹೊಸಪೇಟೆ–ಶಿವಮೊಗ್ಗ ಹೆದ್ದಾರಿಯನ್ನು ಕೂಡುತ್ತದೆ.

ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ಮೇಲೆ ಕಾಣಿಸಿದ ವಿದ್ಯಾಸಂಸ್ಥೆ, ಡಿಪೊ, ರುದ್ರಭೂಮಿ, ಜಮೀನುಗಳಿಗೆ ಹೋಗಿ ಬರುವವರಿಗೆ ಮಾತ್ರವಲ್ಲ ರಾಣೆಬೆನ್ನೂರು ಭಾಗದಿಂದ ಹರಿಹರ ಪ್ರವೇಶಿಸಿ ಹರಪನಹಳ್ಳಿ ಕಡೆಗೆ ಸಾಗುವ ಲಘು ಮತ್ತು ಭಾರಿ ವಾಹನಗಳಿಗೂ ರಿಂಗ್ ರಸ್ತೆಯಾಗಿ ಇದು ಬಳಕೆಯಾಗುತ್ತದೆ. ಇದರಿಂದ ನೂರಾರು ವಾಹನಗಳು ನಗರ ಪ್ರವೇಶಿಸದೇ ಸಾಗುತ್ತವೆ. ಈ ಕುರಿತು ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಮನಸ್ಸು ಮಾಡಿದರೆ ಮುಳ್ಳು ಹಾದಿಯು ಹೂವಿನ ಹಾಸಿಗೆಯಂತಾಗುತ್ತದೆ.

₹ 3 ಕೋಟಿ ಅನುದಾನ ಅಗತ್ಯ

ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಉತ್ತಮ ರಸ್ತೆ, ಚರಂಡಿ, ಬೀದಿ ದೀಪದಂತಹ ಸೌಲಭ್ಯ ಕಲ್ಪಿಸಲು ಕನಿಷ್ಠ ₹ 3 ಕೋಟಿ ಅನುದಾನ ಬೇಕಿದೆ. ನಗರಸಭೆಯಲ್ಲಿ ಅಷ್ಟೊಂದು ಅನುದಾನವಿಲ್ಲ. ಇದಕ್ಕಾಗಿಯೇ ಸರ್ಕಾರದಿಂದ ವಿಶೇಷ ಅನುದಾನ ಬಂದರೆ ಈ ಕಾರ್ಯ ಸಾಧ್ಯವಾಗಲಿದೆ.

– ಬಸವರಾಜ್ ಐಗೂರು, ಪೌರಾಯುಕ್ತ, ನಗರಸಭೆ, ಹರಿಹರ

ರಸ್ತೆ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಿ

ಈ ರಸ್ತೆ ಹಲವು ದಶಕಗಳಿಂದ ನಗರಕ್ಕೆ ಕಳಂಕವಾಗಿಯೇ ಇದೆ. ಹಲವು ಶಾಸಕರು, ಸಂಸದರು, ನಗರಸಭೆ ಪುರಪಿತೃರು ಬಂದು ಹೋದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈಗಲಾದರೂ ಈ ರಸ್ತೆ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಬೇಕು.

– ದೇವರಾಜ್ ತೋಟಿಗರ, ಕೊಂಡಜ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT