ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಮಳೆ ಕೊರತೆ: ಎಲ್ಲೆಲ್ಲೂ ಆತಂಕದ ಕಾರ್ಮೋಡ

ಮೊಳಕೆಯೊಡೆದ ಮೆಕ್ಕೆಜೋಳಕ್ಕೆ ಬೇಕಿದೆ ವರುಣನ ಕೃಪೆ; ರೈತರಲ್ಲಿ ಚಿಂತೆ
ಚಂದ್ರಶೇಖರ ಆರ್.
Published 21 ಜೂನ್ 2024, 7:15 IST
Last Updated 21 ಜೂನ್ 2024, 7:15 IST
ಅಕ್ಷರ ಗಾತ್ರ

ದಾವಣಗೆರೆ: ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಆರಂಭದಲ್ಲಿ ಉತ್ತಮವಾಗಿ ಸುರಿದು ರೈತರಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಮಳೆ ಸದ್ಯ ತನ್ನ ಆರ್ಭಟ ಕಡಿಮೆ ಮಾಡಿದೆ. ಜಿಲ್ಲೆಯಲ್ಲಿ ವಾರದಿಂದ ವರುಣನ ಕೃಪೆ ಇಲ್ಲದಿರುವ ಕಾರಣ ರೈತರು ಆತಂಕಗೊಂಡಿದ್ದಾರೆ.

ಕಳೆದ ವರ್ಷ ಆವರಿಸಿದ್ದ ಭೀಕರ ಬರದಿಂದ ನಲುಗಿರುವ ಕೃಷಿಕರು ಈ ಬಾರಿಯಾದರೂ ಬೆಳೆ ಕೈಗೆಟುಕಬಹುದು ಎಂಬ ನಿರೀಕ್ಷೆಯಲ್ಲೇ ನಿತ್ಯವೂ ಆಸೆಗಣ್ಣಿನಿಂದ ಆಕಾಶದತ್ತ ದೃಷ್ಟಿ ನೆಟ್ಟಿದ್ದಾರೆ.

ಮೇ ತಿಂಗಳಲ್ಲಿ ಆಗಾಗ ಸುರಿದ ಮಳೆಯಿಂದ ಹರ್ಷಚಿತ್ತರಾಗಿದ್ದ ರೈತರು ಹುರುಪಿನಲ್ಲೇ ಬಿತ್ತನೆ ಮಾಡಿದ್ದಾರೆ. ಆದರೆ,  ಜೂನ್‌ ಮುಗಿಯುತ್ತ ಬಂದರೂ ಸಮರ್ಪಕ ಮಳೆಯಾಗಿಲ್ಲ. ಆಗಾಗ ತುಂತುರು, ಕೆಲವೆಡೆ ಸಾಧಾರಣ ಮಳೆಯಾಗಿದ್ದು ಹೊರತುಪಡಿಸಿದರೆ ಉತ್ತಮವಾಗಿ ಸುರಿಯುತ್ತಿಲ್ಲ. ಮಳೆ ಕೊರತೆಯಿಂದ ಕೆಲವೆಡೆ ರೈತರು ಬಿತ್ತನೆಗೆ ಭೂಮಿ ಹದ ಮಾಡಿಕೊಂಡು ಮೋಡ ನೋಡುತ್ತ ಕುಳಿತಿದ್ದಾರೆ. ಇನ್ನು ಕೆಲವರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಮೆಕ್ಕೆಜೋಳ ಬಿತ್ತಲಾಗಿದೆ. ಆಗಾದ ಸುರಿದ ಹ‌ದ ಮಳೆಯಿಂದ ಅಲ್ಲಲ್ಲಿ ಮೆಕ್ಕೆಜೋಳ ಮೊಳಕೆಯೊಡೆದಿದೆ. ಕೆಲವೆಡೆ ಮೆಕ್ಕೆಜೋಳದ ಬಿತ್ತನೆ ಮುಗಿದಿದೆ. ಈಗ ಮಳೆ ಬೇಕೇಬೇಕು. ಆದರೆ, ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರಲ್ಲಿ ಆತಂಕ ಮನೆಮಾಡಿದೆ.

ಮೊಳಕೆಯೊಡೆದ ಮೆಕ್ಕೆಜೋಳಕ್ಕೆ ವಾರದೊಳಗೆ ಸಾಧಾರಣವಾದರೂ ಮಳೆಯಾಗಬೇಕು. ಇಲ್ಲದಿದ್ದರೆ ಕಳೆದ ವರ್ಷದ ಪರಿಸ್ಥಿತಿಯೇ ಮರುಕಳಿಸಲಿದೆ. ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಮೊಳಕೆಯೊಡೆದ ಮೆಕ್ಕೆಜೋಳ ಮೇಲಕ್ಕೆ ಬರುವುದಿಲ್ಲ. ಬೆಳೆಯನ್ನು ಮತ್ತೆ ಅಳಿಸಿ ಹಾಕಬೇಕಾಗುತ್ತದೆ. ಹಾಗಾದರೆ ಮತ್ತೆ ನಷ್ಟ ಎಂಬುದು ರೈತರ ಅಳಲು.

ಜಿಲ್ಲೆಯಲ್ಲಿ 90,000 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಈ ಬಾರಿ ಜಿಲ್ಲೆಯಾದ್ದಯಂತ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಆ ಪೈಕಿ 1.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 65,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದೆ.

ಮೆಕ್ಕೆಜೋಳ ಹೊರತುಪಡಿಸಿ ತೊಗರಿ, ಹತ್ತಿ, ಅಲಸಂದೆ, ಸೋಯಾಬೀನ್‌, ಶೇಂಗಾ ಬಿತ್ತನೆಯಾಗಿದೆ. ನ್ಯಾಮತಿ ಭಾಗದಲ್ಲಿ ತರಕಾರಿ ಬೆಳೆಯಲಾಗಿದೆ. ಇನ್ನು ಕೆಲ ಭಾಗದಲ್ಲಿ ರೈತರು ಬಿತ್ತನೆಗೆ ಭೂಮಿ ಹದ ಮಾಡುತ್ತಿದ್ದಾರೆ.

ಚನ್ನಗಿರಿ, ಜಗಳೂರು, ಹರಿಹರ, ಮಲೇಬೆನ್ನೂರು, ಸಂತೇಬೆನ್ನೂರು, ನ್ಯಾಮತಿ, ಹೊನ್ನಾಳಿಯ ಕೆಲ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಜೂನ್‌ 1ರಿಂದ 20ರವರೆಗೆ 368.4 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 344.4 ಮೀ.ಮೀ. ಮಳೆಯಾಗಿದೆ. ಮಳೆ ಕೊರತೆಯಿಂದಾಗಿ ಬಿತ್ತನೆಯೂ ಕುಂಠಿತವಾಗಿದೆ.

‘ಆರಂಭದಲ್ಲಿ ಉತ್ತಮ ಮಳೆಯಾದ ಕಾರಣ ಮೆಕ್ಕೆಜೋಳ ಬೆಳೆದಿದ್ದೆ. ನನ್ನಂತೆ ಜೂನ್‌ನಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲೇ ಈ ಭಾಗದಲ್ಲಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಮಳೆಯೇ ಇಲ್ಲ. ಮೆಕ್ಕೆಜೋಳ ಮೊಳಕೆಯೊಡೆದಿದೆ. ಈಗ ಮಳೆ ಅಗತ್ಯವಾಗಿ ಬೇಕು. ವಾರದಲ್ಲಿ ಮಳೆಯಾಗದಿದ್ದರೆ ಬಿತ್ತನೆ ಮಾಡಿದ ಮೆಕ್ಕೆಜೋಳ ಹಾಳಾಗಲಿದೆ‘ ಎಂದು ಕಂಚಿನಹಳ್ಳಿಯ ರೈತ ಸಂತೋಷ್‌ ಅಳಲು ತೋಡಿಕೊಂಡರು.

‘ನಮ್ಮ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಶೇ 90ರಷ್ಟು ಪ್ರಮಾಣದಲ್ಲಿ ಮುಗಿದಿದೆ. ಕೆಲವರು ಶೇಂಗಾ ಬಿತ್ತಿದ್ದಾರೆ. ತೇವಾಂಶದಿಂದ ಶೇ 50ರಷ್ಟು ಗಿಡಗಳು ಮೇಲಕ್ಕೆ ಬಂದಿವೆ. ಕೆಲವು ಮೊಳೆಕೆಯೊಡೆದಿವೆ. ಈಗಾಗಲೇ ಮಳೆ ಬಂದಿದ್ದರೆ ಬೆಳೆ ನಳನಳಿಸುತ್ತಿತ್ತು. ಎರಡು ದಿನಗಳಲ್ಲಿ ಮಳೆಯಾಗಬೇಕು. ಇಲ್ಲದಿದ್ದರೆ ಕಳೆದ ವರ್ಷದಂತೆ ಈ ಬಾರಿಯೂ ರೈತರಿಗೆ ಕಣ್ಣೀರೇ ಗತಿ’ ಎಂದು ಆರುಂಡಿಯ ರೈತ ಶಿವು ಬೇಸರದಿಂದಲೇ ಹೇಳಿದರು.

‘ಕೂಲಿ ಕಾರ್ಮಿಕರು ಸಿಗದ ಕಾರಣ ಎಲ್ಲದಕ್ಕೂ ಈಗ ಯಂತ್ರಗಳನ್ನು ಅವಲಂಬಿಸಬೇಕಿದೆ. ಎಲ್ಲ ಸೇರಿ ಒಂದು ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲು ₹ 15,000ದಿಂದ ₹ 20,000 ಖರ್ಚು ಆಗುತ್ತದೆ. ಮೆಕ್ಕೆಜೋಳ ಮೊಳಕೆಯೊಡೆದಿದೆ. 10 ದಿನಗಳಿಂದ ಮಳೆಯೇ ಇಲ್ಲ. ಕಳೆದ ವರ್ಷವೂ ಬಿತ್ತನೆ ಮಾಡಿದ ಒಂದು ತಿಂಗಳು ಮಳೆಯೇ ಆಗಿರಲಿಲ್ಲ’ ಎಂದು ಜಗಳೂರು ಗೊಲ್ಲರಹಟ್ಟಿಯ ವಿ.ವೆಂಕಟೇಶ್‌ ಆತಂಕ ವ್ಯಕ್ತಪಡಿಸಿದರು.

ನ್ಯಾಮತಿಯ ಜಮೀನಿನಲ್ಲಿ ಮೆಕ್ಕೆಜೋಳಕ್ಕೆ ಎಡೆಕುಂಟೆ ಹೊಡೆಯುತ್ತಿರುವುದು
ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ನ್ಯಾಮತಿಯ ಜಮೀನಿನಲ್ಲಿ ಮೆಕ್ಕೆಜೋಳಕ್ಕೆ ಎಡೆಕುಂಟೆ ಹೊಡೆಯುತ್ತಿರುವುದು ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
8 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತಿದ್ದೇನೆ. ಮೊಳಕೆ ಬಂದಿದೆ. ಈ ಹಂತದಲ್ಲಿ ತುಂತುರು ಮಳೆ ಬಂದರೂ ಸಾಕು. ಇನ್ನೂ ಎರಡು ದಿನಗಳಲ್ಲಿ ಮಳೆ ಆಗದಿದ್ದರೆ ಇಳುವರಿ ಬರುವುದು ಅನುಮಾನ.
ವಿ. ವೆಂಕಟೇಶ್‌ ರೈತ ಜಗಳೂರು ಗೊಲ್ಲರಹಟ್ಟಿ
ಇನ್ನು 4 ದಿನಗಳಲ್ಲಿ ಮಳೆಯಾಗದಿದ್ದರೆ ಮೆಕ್ಕೆಜೋಳ ಅಳಿಸುವುದು ಅನಿವಾರ್ಯ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಸರ್ಕಾರ ಬೆಳೆ ಪರಿಹಾರ ಕೊಡಲು ಮುಂದಾಗಬೇಕು.
ಶಿವು ರೈತ ಆರುಂಡಿ
ಜಿಲ್ಲೆಯ ಮಳೆ ವಿವರ (ಜೂನ್‌ 14ರಿಂದ 20ರವರೆಗೆ ಮಿ.ಮೀಗಳಲ್ಲಿ)
ತಾಲ್ಲೂಕು; ವಾಡಿಕೆ ಮಳೆ; ಸುರಿದ ಮಳೆ ಚನ್ನಗಿರಿ; 22.4;14.9 ದಾವಣಗೆರೆ;16.9;14.0 ಹರಿಹರ;15.4;8.1 ಹೊನ್ನಾಳಿ;19.5;6.6 ನ್ಯಾಮತಿ;30;7.3 ಜಗಳೂರು;14.2;10.4
ಆರಂಭದಲ್ಲೇ ಬರೆ ಎಳೆದ ವರುಣ
‘ಈ ಬಾರಿ ಉತ್ತಮ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆಯವರು ಹೇಳಿದ್ದರು. ಆದರೆ ಮಳೆಯೇ ಇಲ್ಲ. ಆರಂಭದಲ್ಲೇ ಬರೆ ಎಳೆದಂತಾಗಿದೆ. 5 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಈ ಭಾಗದಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆ. ಮಳೆ ಅಗತ್ಯವಾಗಿ ಬೇಕು. ಆಕಾಶದತ್ತ  ನೋಡುವುದೇ ರೈತರ ಕಾಯಕವಾಗಿದೆ’ ಎಂದು ಜಗಳೂರು ಕಸಬಾ ಹೋಬಳಿ ಪಿ. ತಿಪ್ಪೇಸ್ವಾಮಿ ವಾಸ್ತವ ತೆರೆದಿಟ್ಟರು. ‘‌ಬಿತ್ತನೆ ಬೀಜ ರಸಗೊಬ್ಬರದ ಬೆಲೆಯೂ ಏರಿಕೆಯಾಗಿದ್ದು ಸಂಕಷ್ಟ ಅನುಭವಿಸುವಂತಾಗಿದೆ. ಮೆಕ್ಕೆಜೋಳ ಕೈಗೆ ಬರದಿದ್ದರೆ ಮುಂದೆ ಏನು ಎಂಬ ಚಿಂತೆ ಕಾಡುತ್ತಿದೆ. ಕೊಳವೆಬಾವಿಯಲ್ಲೂ ನೀರು ಇಲ್ಲ. ಮೊದಲು ನ್ಯಾಮತಿ ಭಾಗದಲ್ಲಿ ತರಕಾರಿ ಬೆಳೆಯುತ್ತಿದ್ದರು. ನೀರಿನ ಕೊರತೆಯ ಕಾರಣ  ರೈತರು ವಿಮುಖರಾಗುತ್ತಿದ್ದಾರೆ’ ಎಂದು ನ್ಯಾಮತಿಯ ರೈತ ಸಂತೋಷ್‌ಕುಮಾರ್‌ ಹೇಳಿದರು. ಜಲಮೂಲಗಳಿಗಿಲ್ಲ ಜೀವಕಳೆ ಜೂನ್‌ ತಿಂಗಳಲ್ಲಿ ವಾಡಿಕೆ ಆಗಬೇಕಿದ್ದ ಮಳೆ ಒಂದೆರಡು ದಿನಗಳಲ್ಲಿ ಸುರಿದಿದೆ. ಆದರೆ ಮತ್ತೆ ಮಳೆಯೇ ಆಗಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.  ಮಳೆಯಾಗದ ಕಾರಣ ಕೆರೆಕಟ್ಟೆಗಳು ಈ ಭಾಗದ ರೈತರ ಜೀವನಾಡಿ ಭದ್ರಾ ಜಲಾಶಯ ತುಂಬಿಲ್ಲ. ಅಂತರ್ಜಲ ಮಟ್ಟವೂ ಏರಿಕೆಯಾಗದ ಕಾರಣ ಬೇಸಿಗೆಯಲ್ಲಿ ಬತ್ತಿದ್ದ ಕೊಳವೆಬಾವಿಗಳಲ್ಲಿ ನೀರು ಬಂದಿಲ್ಲ. ನೀರಿನ ಮೂಲಗಳೂ ಜೀವಕಳೆ ಪಡೆದಿಲ್ಲ. ಇದರಿಂದ ರೈತರು ಜಾನುವಾರುಗಳು ಸಂಕಷ‌್ಟ ಎದುರಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT