ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ, ತೋಟಗಾರಿಕೆ ಸಹಾಯಧನ ಕಡಿತ!

ಪರಿಶಿಷ್ಟರನ್ನೂ ಸಾಮಾನ್ಯ ವರ್ಗದವರಂತೆ ಪರಿಗಣನೆ
Last Updated 9 ಆಗಸ್ಟ್ 2022, 4:21 IST
ಅಕ್ಷರ ಗಾತ್ರ

ಜಗಳೂರು: ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳಡಿ ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಹಾಯಧನದ ಮೊತ್ತವನ್ನು ಕಡಿತಗೊಳಿಸಿದ್ದು, ಸವಲತ್ತುಗಳಿಂದ ವಂಚಿತರಾಗುವಂತಾಗಿದೆ.

ತೋಟಗಾರಿಕೆ ಇಲಾಖೆಯಡಿ ಈರುಳ್ಳಿ ಘಟಕ ನಿರ್ಮಾಣ, ಕೃಷಿ ಹೊಂಡ, ಸಮುದಾಯಿಕ ಕೃಷಿಹೊಂಡ ನಿರ್ಮಾಣ, ಹಣ್ಣುಗಳ ಪ್ಯಾಕ್ ಹೌಸ್ ನಿರ್ಮಾಣ ಹಾಗೂ ಟ್ರ್ಯಾಕ್ಟರ್ ಟ್ರೇಲರ್ ಮತ್ತು ವಿವಿಧ ಯಾಂತ್ರಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಈಹಿಂದೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತಿತ್ತು. ಆದರೀಗ ಸಹಾಯಧನವನ್ನು ಕಡಿತಗೊಳಿಸಿದ್ದು, ಪರಿಶಿಷ್ಟ ಸಮುದಾಯದವರಿಗೆ ನೆರವು ದೊರೆಯದಂತಾಗಿದೆ.

ಈರುಳ್ಳಿ ಬೆಳೆಯುವ ರೈತರಿಗೆ ₹ 1.75 ಲಕ್ಷ ವೆಚ್ಚದಲ್ಲಿ ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ ಎಸ್.ಸಿ. ಮತ್ತು ಎಸ್.ಟಿ. ಫಲಾನುಭವಿಗಳಿಗೆ ಶೇ
‌90ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ 50ರಷ್ಟು ಸಹಾಯಧನ ನೀಡಲಾಗುತ್ತಿತ್ತು. ಆದರೆ, 2021-22 ಮತ್ತು 2022-23ನೇ ಸಾಲಿನಲ್ಲಿ ಎಸ್.ಸಿ/ ಎಸ್.ಟಿ. ಫಲಾನುಭವಿಗಳಿಗೆ ಸಹಾಯಧನದ ಮೊತ್ತವನ್ನು ಶೇ 50ಕ್ಕೆ ಇಳಿಸಿದೆ. ಎಲ್ಲಾ ವರ್ಗದ ರೈತರನ್ನು ಸಾಮಾನ್ಯವರ್ಗದ ರೈತರು ಎಂದು ಪರಿಗಣಿಸಲಾಗಿದೆ.

ಕೃಷಿ ಹೊಂಡ, ಸಮುದಾಯಿಕ ಕೃಷಿಹೊಂಡ, ಪ್ಯಾಕ್ ಹೌಸ್ ಮತ್ತು ಯಾಂತ್ರೀಕರಣ ಯೋಜನೆಗಳಿಗೂ ಸಹಾಯಧನವನ್ನು ಶೇ 50ಕ್ಕೆ ಇಳಿಸಲಾಗಿದೆ. ಹನಿ ನೀರಾವರಿ ಯೋಜನೆಯಡಿ ಮಾತ್ರ ಪರಿಶಿಷ್ಟ ಫಲಾನುಭವಿಗಳಿಗೆ ಶೇ 90ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇ 75ರಷ್ಟು ಸಹಾಯಧನ ನೀಡಲಾಗುತ್ತಿದೆ.

‘ಶೋಷಿತ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯಧನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ತಾಲ್ಲೂಕಿನಲ್ಲಿ ಎಸ್.ಸಿ/ಎಸ್.ಟಿ ಸಮುದಾಯದವರೇ ಹೆಚ್ಚಾಗಿದ್ದು, ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಶೋಷಿತರನ್ನು ಸವಲತ್ತುಗಳಿಂದ ವಂಚಿಸಿ ಸಾಮಾಜಿಕ ನ್ಯಾಯ ನಿರಾಕರಿಸಿದಂತಾಗುತ್ತದೆ’ ಎಂದು ವಕೀಲ ಟಿ. ಬಸವರಾಜ್ ಆಗ್ರಹಿಸಿದ್ದಾರೆ.

ಸರ್ಕಾರ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡದ ಕಾರಣ ಎಸ್.ಸಿ/ಎಸ್.ಟಿ ಫಲಾನುಭವಿಗಳಿಗೆ ಶೇ 90ರಷ್ಟು ಸಹಾಯಧನ ಬಿಡುಗಡೆಯಾಗುತ್ತಿಲ್ಲ. ಎಲ್ಲಾ ವರ್ಗದವರಿಗೆ ಶೇ 50ರಷ್ಟು ಸಹಾಯಧನ ನೀಡಲಾಗುತ್ತಿದೆ.

– ವೆಂಕಟೇಶಮೂರ್ತಿ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT