ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು ಟಿಪಿಯಿಂದ ತ್ರಿಚಕ್ರ ಬೈಕ್ ವಿತರಣೆಯಲ್ಲಿ ಅಂಧರ ಕಡೆಗಣನೆ ಬಗ್ಗೆ ಆರೋಪ

ರಾಷ್ಟ್ರೀಯ ಅಂಧರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ವೀರೇಶ್ ಆರೋಪಿಸಿದ್ದಾರೆ
Published 12 ಫೆಬ್ರುವರಿ 2024, 9:23 IST
Last Updated 12 ಫೆಬ್ರುವರಿ 2024, 9:23 IST
ಅಕ್ಷರ ಗಾತ್ರ

ಜಗಳೂರು: ಜಗಳೂರು ತಾಲ್ಲೂಕು ಪಂಚಾಯಿತಿಯ ಅನುದಾನದಲ್ಲಿ ಅಂಗವಿಕಲರಿಗೆ ಮೀಸಲಿರಿಸಿರುವ ಅನುದಾನದಲ್ಲಿ ಅಂಧರನ್ನು ಕಡೆಗಣಿಸಿ ಕೇವಲ ವಾಹನಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಅಂಧರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ವೀರೇಶ್ ಆರೋಪಿಸಿದ್ದಾರೆ.

‘ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ಯೋಜನೆಯಡಿ ₹ 2.23 ಕೋಟಿ ಅನುದಾನದಲ್ಲಿ ಶೇ 5ರಷ್ಟು ಮೊತ್ತ ₹ 11.17 ಲಕ್ಷ ಹಣವನ್ನು ಅಂಗವಿಕಲರಿಗೆ ಮೀಸಲಿರಿಸಲಾಗಿದೆ. ಆದರೆ, ಪ್ರತಿ ವರ್ಷವೂ ತಾಲ್ಲೂಕು ಪಂಚಾಯಿತಿಯಲ್ಲಿ ಕೇವಲ ತ್ರಿಚಕ್ರ ಬೈಕ್‌ಗಗಳನ್ನು ವಿತರಿಸಲಾಗುತ್ತಿದೆ. ಅಂಧರು ಮತ್ತು ಕಿವುಡರು ಮುಂತಾದ ಅಂಗವೈಕಲ್ಯ ಹೊಂದಿರುವವರನ್ನು ಪರಿಗಣಿಸಲಾಗುತ್ತಿಲ್ಲ. ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದರೂ, ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದ್ದಾರೆ.

‘ತಾಲ್ಲೂಕಿನಲ್ಲಿ ಸಾಕಷ್ಟು ಅಂಧರು, ಕಿವುಡರು ಇದ್ದಾರೆ. ಇವರಿಗೆ ಆರ್ಬಿಟ್ ರೀಡರ್, ಲ್ಯಾಪ್ ಟಾಪ್, ಅಕ್ಸೆಸಿಬಲ್ ಸ್ಕ್ಯಾನರ್, ಕ್ರೀಡಾ ಪರಿಕರ, ಸಂಗೀತದ ಸಾಮಗ್ರಿ ವಿತರಿಸಲು ಅವಕಾಶವಿದೆ. ಆದರೆ, ಅಧಿಕಾರಿಗಳು ಯಾವುದನ್ನೂ ಪರಿಗಣಿಸದೆ ಕೇವಲ ಕಾಲು, ಕೈ ಊನವಾಗಿರುವ ಅಂಗವಿಕಲರಿಗಾಗಿ ತ್ರಿಚಕ್ರ ಬೈಕ್‌ಗಳನ್ನು ಖರೀದಿಸಲು ಮುಂದಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಈ ಬಗ್ಗೆ ಯಾವುದೇ ಕ್ರಿಯಾ ಯೋಜನೆ ರೂಪಿಸಿಲ್ಲ. ಈ ಹಂತದಲ್ಲೂ ಅಂಧರಿಗೆ ಸೌಲಭ್ಯ ನೀಡಬಹುದು. ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳಲ್ಲಿ ಅಂಧರಿಗೆ ಸಾಮಗ್ರಿ ನೀಡುತ್ತಿದ್ದು, ಇಲ್ಲಿಯೂ ಪರಿಗಣಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಕರಿಬಸಪ್ಪ ಅವರಿಗೆ ಲಿಖಿತವಾಗಿ ದೂರು ನೀಡಲಾಗಿದೆ. ಆದರೆ, ಈಗಾಗಲೇ ಕ್ರಿಯಾಯೋಜನೆ ಮುಗಿದಿದೆ ಎಂದು ಸಬೂಬು ಹೇಳುತ್ತಾರೆ’ ಎಂದು ವೀರೇಶ್ ಆರೋಪಿಸಿದ್ದಾರೆ.

‘ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನದಲ್ಲಿ ₹ 11. 15 ಲಕ್ಷ ವೆಚ್ಚದಲ್ಲಿ ರೆಟ್ರೋಪಿಟ್ ತ್ರಿಚಕ್ರ ವಾಹನ ಖರೀದಿಗಾಗಿ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಗೆ ವಹಿಸಲಾಗಿದೆ. ಮುಂದಿನ ಬಾರಿ ಅಂಧರಿಗೆ ಸವಲತ್ತುಗಳನ್ನು ನೀಡಲಾಗುವುದು. ಆದಾಗ್ಯೂ ಮನವಿ ಮೇರೆಗೆ ಒಂದಿಬ್ಬರಿಗೆ ಆರ್ಬಿಟ್ ರೀಡರ್ ಮುಂತಾದ ಸಾಮಗ್ರಿ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಕರಿಬಸಪ್ಪ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT