ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಅಂಗವೈಕಲ್ಯ ಎದುರಿಸಿ ಸಾಧನೆ ಮಾಡಿದ ದಿಟ್ಟೆ ಅನಿತಾ

Published 8 ಮಾರ್ಚ್ 2024, 6:01 IST
Last Updated 8 ಮಾರ್ಚ್ 2024, 6:01 IST
ಅಕ್ಷರ ಗಾತ್ರ

ಹರಿಹರ: ತಮ್ಮ ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿ, ಸೇವೆ, ಸಂಘಟನೆಯ ಮೂಲಕ ಸಾಧನೆ ಮಾಡಿದವರು ಇಲ್ಲಿನ ಅನಿತಾ ಎಚ್. ಪಾಟೀಲ್. 

ತಾಲ್ಲೂಕಿನ ನಂದಿತಾವರೆ ಗ್ರಾಮದ ಎನ್.ಪಿ. ಹನುಮಂತಗೌಡ (ನಿವೃತ್ತ ಇಂಜಿನಿಯರ್) ಮತ್ತು ಮಹದೇವಮ್ಮ ದಂಪತಿಯ 3ನೇ ಪುತ್ರಿಯಾದ ಅನಿತಾ ಪಾಟೀಲ‌ ಬಿ.ಕಾಂ ಪದವೀಧರೆ.

ಕೆಲ ವರ್ಷ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ ನಂತರ, 2006ರಲ್ಲಿ ಹರಿಹರ ತಾಲ್ಲೂಕು ಅಂಗವಿಕಲರ ಅಭಿವೃದ್ಧಿ ಸಂಘ ಸ್ಥಾಪಿಸಿ ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಲು ಅಂಗವಿಕಲರಾದ ಪರಮೇಶ್ವರಪ್ಪ ಹಾಗೂ ಸಂಗಡಿಗರೊಂದಿಗೆ ಸೇರಿ ಹಳ್ಳಿ, ಹಳ್ಳಿ ಸುತ್ತಾಡಿದರು.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆಯ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಇತರೆ ಪರಿಕರಗಳನ್ನು ಕೊಡಿಸಿದರು. ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಸಂಸ್ಥೆಗಳುಅಂಗವಿಕಲರಿಗೆ ಆದ್ಯತೆ ನೀಡುವಂತೆ ಮಾಡಿದರು. ಅಂಗವಿಕಲರತ್ತ ಸಮಾಜದ ಗಮನ ಸೆಳೆಯುವ ಉದ್ದೇಶದಿಂದ ಅನಿತಾ 2008ರ ವಿಧಾನಸಭಾ ಚುನಾವಣೆಯಲ್ಲಿ ಹರಿಹರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

2007ರಲ್ಲಿ ‘ಮೂನ್ ವೆಬ್ ಜೋನ್’ ಸಂಸ್ಥೆ ಆರಂಭಿಸಿ ಸೇವಾ ಕಾರ್ಯ ಆರಂಭಿಸಿದರು. ಮಹಿಳಾ ಸಾಂತ್ವನ, ಮಹಿಳಾ ಸಹಾಯವಾಣಿ ಕೇಂದ್ರದ ಮೂಲಕ ಈವರೆಗೆ 2500ಕ್ಕೂ ಹೆಚ್ಚು ಪ್ರಕರಣಗಳನ್ನು ಆಲಿಸಿ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದಾರೆ. ಪ್ರಿಯದರ್ಶಿನಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಿದ್ದಾರೆ. ನಗರದ ಹೊರವಲಯದಲ್ಲಿ ಮಹಾದೇವಿ ಭಾರತ್ ಫ್ಯೂಯಲ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿದ್ದಾರೆ. ಈ ಮೂಲಕ ಹಲವರಿಗೆ ಉದ್ಯೋಗ ನೀಡಿದ್ದಾರೆ.

ಈ ಎಲ್ಲ ಕಾರ್ಯಗಳ ಜತೆಗೆ ರಾಷ್ಟ್ರಮಟ್ಟದ ಸಿಟ್ಟಿಂಗ್ ವಾಲಿಬಾಲ್, ವ್ಹೀಲ್‌ಚೇರ್ ವಾಲಿಬಾಲ್ ಕ್ರೀಡಾಕೂಟಗಳಲ್ಲೂ ಭಾಗವಹಿಸಿದ್ದಾರೆ.  ವಿಕಲಚೇತನರ ಕ್ಷೇತ್ರದಲ್ಲಿನ ವೈಯಕ್ತಿಕ ಸಾಧನೆ ಪರಿಗಣಿಸಿ 2022ರಲ್ಲಿ ರಾಜ್ಯ ಸರ್ಕಾರ ‘ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ.

ದಾವಣಗೆರೆ ಕಸ್ತೂರಬಾ ಸಮಾಜ ಸೇರಿದಂತೆ ಹತ್ತಾರು ಸಂಘ, ಸಂಸ್ಥೆಗಳ ಪ್ರಶಸ್ತಿಗಳೂ ಅರಸಿ ಬಂದಿವೆ. ತಾಲ್ಲೂಕಿನಲ್ಲಿ ನೊಂದ ಮಹಿಳೆಯರು ಪೊಲೀಸ್ ಠಾಣೆಗಿಂತ ಮುಂಚೆ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದತ್ತ ಬರುವಂತೆ ಮಾಡಿರುವುದು ಅನಿತಾ ಪಾಟೀಲ ಸಾಧನೆ.

2022ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸುತ್ತಿರುವ ಅನಿತಾ ಎಚ್. ಪಾಟೀಲ್‌
2022ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸುತ್ತಿರುವ ಅನಿತಾ ಎಚ್. ಪಾಟೀಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT