ಗುರುವಾರ , ಜೂಲೈ 9, 2020
21 °C
ಲಾಕ್‌ಡೌನ್‌ ಹಿನ್ನೆಲೆ; ನೆರೆಯ ರಾಜ್ಯಗಳಿಗೆ ಹೋಗುತ್ತಿದ್ದ ಭತ್ತ ಸ್ಥಗಿತ

ದಾವಣಗೆರೆ: ಎಪಿಎಂಸಿ ಆವಕ ಜೋರು: ರೈತರಿಗೆ ಸಿಗದ ಬೆಲೆ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಾವಣಗೆರೆ ಎಪಿಎಂಸಿಯಲ್ಲಿ ಭತ್ತದ ಆವಕ ಜೋರಾಗಿದೆ. ಆದರೆ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡಿಗೆ ಭತ್ತ ಹೋಗುವುದು ಸ್ಥಗಿತಗೊಂಡಿದ್ದರಿಂದ ಅಲ್ಲಿಗೆ ಹೋಗಬೇಕಾದ ಭತ್ತ ಸ್ಥಳೀಯವಾಗಿಯೇ ಉಳಿದುಕೊಂಡಿದೆ. ಅಲ್ಲದೇ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಡಿತರದಾರರಿಗೆ ಎರಡು ತಿಂಗಳ ಪಡಿತರವನ್ನು ನೀಡಿರುವುದರಿಂದ ಭತ್ತ ಕೊಂಡುಕೊಳ್ಳುವವರ ಪ್ರಮಾಣ ಕಡಿಮೆಯಾಗಿದೆ ಎಂಬುದು ವರ್ತಕರ ಹೇಳಿಕೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಭತ್ತದ ಬೆಲೆ ಕಡಿಮೆಯಾಗಿದೆ. ಮಳೆಗಾಲವಾದ್ದರಿಂದ ಭತ್ತವನ್ನು ಸಂಗ್ರಹಿಸಿ ಇಟ್ಟುಕೊಂಡರೆ ಹಾಳಾಗುತ್ತದೆ ಎಂಬ ಭಯದಿಂದ ರೈತರು ಸಿಕ್ಕಷ್ಟು ಬೆಲೆಗೆ ಭತ್ತವನ್ನು ಮಾರಾಟ ಮಾಡಿ ಹೋಗುತ್ತಿದ್ದಾರೆ. ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿಸುವುದಕ್ಕೆ ಮೇ 31ರವರೆಗೆ ಗಡುವು ನೀಡಿದೆ. ಸುಗ್ಗಿ ಶುರುವಾಗುವ ಮುನ್ನವೇ ಬೆಂಬಲ ಮುಗಿಯುತ್ತದೆ. 

‘ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ಕ್ವಿಂಟಲ್ ಭತ್ತಕ್ಕೆ ₹200 ಕಡಿಮೆ ಇದೆ. ಬೆಂಬಲ ಬೆಲೆ, ಫ್ರೂಟ್ ತಂತ್ರಾಂಶದ ಆಧಾರದ ಮೇಲೆ ಖರೀದಿ ಮಾಡಲಾಗುತ್ತಿದೆಯಾದರೂ ಅವರು ಶೇ 17ರಷ್ಟು ತೇವಾಂಶ ಕೇಳುತ್ತಿದ್ದಾರೆ. ಆದರೆ ರೈತರ ಬಳಿ ಶೇ 20ರಿಂದ 25 ಪ್ರಮಾಣದಲ್ಲಿ ತೇವಾಂಶ ಇರುವುದರಿಂದ ರೈತರ ಭತ್ತದ ಖರೀದಿ ಕಡಿಮೆಯಾಗಿದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಜೆ.ಪ್ರಭು.

‘ಎಪಿಎಂಸಿಯಲ್ಲಿ ಭತ್ತದ ಆವಕ ಹೆಚ್ಚಾಗುತ್ತಿದೆ. ಶನಿವಾರ 23,895 ಕ್ವಿಂಟಲ್ ಆವಕವಾದರೆ ಕಳೆದ ಸೋಮವಾರ 49 ಸಾವಿರ ಕ್ವಿಂಟಲ್ ಆವಕವಾಗಿದೆ. ಕೆಎಂಎಫ್‌ಗೆ 8 ಸಾವಿರ ಮೆಟ್ರಿಕ್ ಟನ್ ಮಾರಾಟ ಮಾಡಲಾಗಿತ್ತು. 5 ದಿನಗಳ ಹಿಂದೆ ಖರೀದಿ ಮುಗಿದಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಸ್ವಲ್ಪ ಪ್ರಮಾಣದಲ್ಲಿ ಭತ್ತ ಹೋಗುತ್ತಿದೆ’ ಎನ್ನುತ್ತಾರೆ.

‘ಕೋವಿಡ್–19 ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಗೆ ಹೋಗುತ್ತಿದ್ದ ಭತ್ತ ಶೇ 50ರಷ್ಟು ಕಡಿಮೆಯಾಗಿದೆ. ಸ್ಪಿರಿಟ್‌ಗಾಗಿ ಮಾತ್ರ ಜರೇಕಟ್ಟೆ ಹಾಗೂ ತ್ಯಾವಣಗಿಯಿಂದ ಸ್ವಲ್ಪ ಪ್ರಮಾಣದಲ್ಲಿ ಭತ್ತ ಆಂದ್ರಕ್ಕೆ ಹೋಗುತ್ತಿದೆ. ಬೆಂಬಲ ಬೆಲೆಯಲ್ಲಿ ಒಬ್ಬ ರೈತರಿಂದ 45 ಚೀಲ ಮಾತ್ರ ಕೊಂಡುಕೊಳ್ಳುತ್ತಿದ್ದು, ಒಂದು ಎಕರೆಗೆ ರೈತ ಇಷ್ಟು ಪ್ರಮಾಣದ ಭತ್ತ ಬೆಳೆಯುತ್ತಾನೆ. ಉಳಿದ ಭತ್ತವನ್ನು ಎಲ್ಲಿ ಮಾರಾಟ ಮಾಡಬೇಕು? ರೈತರಿಗೆ ಒಂದು ಎಕರೆಗೆ ಕನಿಷ್ಠ ₹10 ಸಾವಿರ ನಷ್ಟವಾಗುತ್ತಿದೆ’ ಎನ್ನುತ್ತಾರೆ ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು