ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಡಾ ಮನೆ ನಿವೇಶನಕ್ಕೆ ಅರ್ಜಿಗಳ ಮಹಾಪೂರ

ಸೆ.4ರ ವರೆಗೆ ಅವಧಿ ವಿಸ್ತರಣೆ * ಪ್ರತಿದಿನ ಸರದಿ ಸಾಲಲ್ಲಿ ನಿಲ್ಲುತ್ತಿರುವ ಸಾವಿರಾರು ಮಂದಿ
Last Updated 25 ಆಗಸ್ಟ್ 2021, 9:28 IST
ಅಕ್ಷರ ಗಾತ್ರ

ದಾವಣಗೆರೆ: ಬೇಡಿಕೆ ಸಮೀಕ್ಷೆ ಮತ್ತು ನಿವೇಶನ ಹಂಚಿಕೆಗೆ ಧೂಡಾ ಅರ್ಜಿ ಆಹ್ವಾನಿಸಿದೆ. ಅದಕ್ಕೆ ಅರ್ಜಿ ಸಲ್ಲಿಸಲು ಜನರು ಮುಗಿಬಿದ್ದಿದ್ದಾರೆ. ದಿನೇ ದಿನೇ ನಿವೇಶನ ಆಕಾಂಕ್ಷಿಗಳ ಪ್ರಮಾಣ ಕಡಿಮೆಯಾಗದೇ ಇರುವುದನ್ನು ಕಂಡ ಧೂಡಾವು ಅರ್ಜಿ ಸಲ್ಲಿಕೆಯ ಅವಧಿಯನ್ನು ಸೆ.4ರ ವರೆಗೆ ವಿಸ್ತರಿಸಿದೆ.

ಕುಂದವಾಡದಲ್ಲಿ 53 ಎಕರೆಯಲ್ಲಿ ನಿವೇಶನ ನಿರ್ಮಿಸಿ ಹಂಚಿಕೆ ಮಾಡಲು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿತ್ತು. ರೈತರ ಜತೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೂರು ಸುತ್ತಿನ ಮಾತುಕತೆ ನಡೆಸಿ ಒಪ್ಪಿಗೆ ಪಡೆದಿತ್ತು. ನಿವೇಶನ ನಿರ್ಮಿಸಿ ಹಂಚಿಕೆ ಮಾಡಲು ಅವಕಾಶ ನೀಡುವಂತೆ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿತ್ತು. ನೇರ ಅರ್ಜಿ ಪಡೆಯುವ ಬದಲು ಬೇಡಿಕೆ ಸಮಿಕ್ಷೆ ಸಹಿತ ಅರ್ಜಿ ಆಹ್ವಾನ ಮಾಡಬೇಕು ಎಂದು ಸರ್ಕಾರದಿಂದ ಮಾರ್ಗಸೂಚಿ ಬಂದಿತ್ತು. ಅದರಂತೆ ಆ.11ರಿಂದ 26ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜನರು ತಮ್ಮ ಪುಟ್ಟ ಮಕ್ಕಳ ಸಹಿತ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಬೆಳಿಗ್ಗಿನಿಂದ ಸಂಜೆವರೆಗೆ ಕಾದು ಚಲನ್‌, ಅರ್ಜಿ ಪಡೆಯುತ್ತಿದ್ದಾರೆ. ಇನ್ನೊಂದು ದಿನ ಬಂದು ಸಲ್ಲಿಸುತ್ತಿದ್ದಾರೆ.

‘ನಾವು ನೇರವಾಗಿ ನಿವೇಶನಕ್ಕೆ ಅರ್ಜಿ ಆಹ್ವಾನಿಸುವ ಗುರಿ ಇಟ್ಟುಕೊಂಡಿದ್ದೆವು. ಆಗ ಇಷ್ಟೊಂದು ಅರ್ಜಿಗಳು ಬರುತ್ತಿರಲಿಲ್ಲ. ಯಾಕೆಂದರೆ ನಿವೇಶನ ವೆಚ್ಚದ ಶೇ 25ರಷ್ಟು ಆಗ ತುಂಬಬೇಕಿತ್ತು. ಆದರೆ ನಿವೇಶನ ಬೇಡಿಕೆಯ ಸಮೀಕ್ಷೆ ಮಾಡಲು ಸರ್ಕಾರ ಸೂಚಿಸಿದೆ. ಹಾಗಾಗಿ ಈಗ ಅರ್ಜಿ ಶುಲ್ಕ ಮತ್ತು ನೋಂದಣಿ ಶುಲ್ಕ ಮಾತ್ರ ಪಡೆದು ಅರ್ಜಿ ತೆಗೆದುಕೊಳ್ಳುತ್ತಿದ್ದೇವೆ. ಮುಂದೆ ನಿವೇಶನ ಹಂಚಿಕೆ ಸಮಯದಲ್ಲಿ ಈಗ ಅರ್ಜಿ ಸಲ್ಲಿಸಿದವರು ಮಾತ್ರ ಶೇ 25ರಷ್ಟು ಮೊತ್ತವನ್ನು ತುಂಬಲು ಅರ್ಹರಾಗಿರುತ್ತಾರೆ. ಬಳಿಕ ಲಾಟರಿ ಮೂಲಕ ಆಯ್ಕೆ ನಡೆಯುತ್ತದೆ. ಆಯ್ಕೆಯಾದವರನ್ನು ಬಿಟ್ಟು ಉಳಿದವರಿಗೆ ಅವರು ಕಟ್ಟಿರುವ ಶೇ 25ರಷ್ಟು ಮೊತ್ತವನ್ನು ವಾಪಸ್‌ ಮಾಡಲಾಗುತ್ತದೆ’ ಎಂದು ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ರೈತರಿಂದ ಭೂಮಿ ಖರೀದಿಯ ಪ್ರಕ್ರಿಯೆಯಲ್ಲಿ ಯಾವುದೇ ತಕರಾರುಗಳಿಲ್ಲ. ಭೂಮಿ ನೀಡಲು ಒಪ್ಪಿಗೆ ಪತ್ರ ಪಡೆಯಲಾಗಿದೆ. ಹಾಗಾಗಿ ಸರ್ಕಾರ ಅನುಮತಿ ನೀಡಿದ ಕೂಡಲೇ ರೈತರ ಖಾತೆಗೆ ಆರ್‌ಟಿಜಿಎಸ್‌ ಮೂಲಕ ನೇರವಾಗಿ ಹಣ ಪಾವತಿಸಿ ಭೂಮಿಯನ್ನು ನಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತೇವೆ. ರೈತರಿಗೆ ಪಾವತಿಸಿದ ಜಮೀನಿನ ವೆಚ್ಚ, ಅಭಿವೃದ್ಧಿಯ ವೆಚ್ಚ ಸೇರಿಸಿ ಚದರ ಅಡಿಗೆ ದರ ನಿಗದಿ ಪಡಿಸಲಾಗುವುದು. ಒಂದು ವರ್ಷದ ಒಳಗೆ ನಿವೇಶನ ತಯಾರಿಸಿ ಹಂಚಿಕೆ ಮಾಡುವ ಗುರಿ ಇದೆ. ಸುಮಾರು 700 ನಿವೇಶನಗಳು ನಿರ್ಮಾಣಗೊಂಡು ಪಾರದರ್ಶಕವಾಗಿ ಹಂಚಿಕೆಯಾಗಲಿದೆ’ ಎಂದು ವಿವರಿಸಿದರು.

ಆಗಸ್ಟ್‌ 23ರ ವರೆಗೆ ಸುಮಾರು 12 ಸಾವಿರ ಮಂದಿ ಅರ್ಜಿ ಒಯ್ದಿದ್ದಾರೆ. ಅರ್ಜಿ ಸಲ್ಲಿಸಲು ಇನ್ನೂ ಬರುತ್ತಿರುವವರ ಸಂಖ್ಯೆ ಕಡಿಮೆ ಆಗದೇ ಇರುವುದರಿಂದ ಮತ್ತೆ 10 ದಿನಗಳ ಕಾಲ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT