ಗುರುವಾರ , ಮಾರ್ಚ್ 30, 2023
22 °C
ಸಂಕಲನ ಕಲಾ ಕೇಂದ್ರದಲ್ಲಿ ನಡೆಯುತ್ತಿರುವ ಚಿತ್ರಕಲಾ ಪ್ರದರ್ಶನ

ದಾವಣಗೆರೆ: ‘ಇಂಪನೋಲ್ಲಾಸ’ದಲ್ಲಿ ಕಂಡ ಕಲಾ ಪ್ರಪಂಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಲ್ಲಿಯ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಸಂಕಲನ ಕಲಾಕೇಂದ್ರದಲ್ಲಿ ನಡೆಯುತ್ತಿರುವ ಇಂಪನಾ ಆರ್‌.ಎ. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ‘ಇಂಪನೋಲ್ಲಾಸ’ ಜನರ ಗಮನ ಸೆಳೆಯುತ್ತಿದೆ.

ದೃಶ್ಯ ಕಲಾವಿದ ರವೀಂದ್ರ ಅರಳಗುಪ್ಪಿ ಹಾಗೂ ಕಲಾವಿದೆ ಉಷಾ ಎಂ.ಜಿ. ಅವರ ಪುತ್ರಿಯಾಗಿರುವ ಇಂಪನಾ ನಗರದ ಡಿಆರ್‌ಎಂ ಕಾಲೇಜಿನಲ್ಲಿ ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾಳೆ. ತಂದೆ–ತಾಯಿಯಿಂದ ಪ್ರಭಾವಿತರಾಗಿ ಬಾಲ್ಯದಿಂದಲೇ ಚಿತ್ರ ರಚನೆಗಳಲ್ಲಿ ತೊಡಗಿರುವ ಇಂಪನಾ ಅವರ ಕೃತಿಗಳಲ್ಲಿ ಪ್ರೌಢತೆ ಕಾಣುತ್ತಿದೆ. ಸ್ವಂತ ಆಲೋಚನೆಗಳು ಹಾಗೂ ಕಲಾಶೈಲಿ ಕೃತಿಯಲ್ಲಿ ರೂಪುಗೊಳ್ಳತೊಡಗಿವೆ.

ಎರಡು ವರ್ಷದವಳಿರುವಾಗ ಇಂಪನಾ ಬರೆದ ಮುದ್ದು ಚಿತ್ರಗಳಿಂದ ಹಿಡಿದು ಇಂದಿನವರೆಗಿನ ಕಲಾಪ್ರೌಢಿಮೆಯ ಹಂತಹಂತದ ಪ್ರಗತಿಯನ್ನು ನೋಡಲು ಸಿಗುವುದು ಈ ಚಿತ್ರಕಲಾ ಪ್ರದರ್ಶನದ ಒಂದು ವಿಶೇಷ. ಅವಳು ಬರೆದ ಚಿತ್ರಗಳನ್ನು ಜತನವಾಗಿ ಕಾಯ್ದಿರಿಸಿ, ಅವುಗಳನ್ನು ಚೌಕಟ್ಟಿನೊಳಗೆ ಅಳವಡಿಸಿಟ್ಟ ತಂದೆ–ತಾಯಿಯ ಕಲಾಪ್ರೀತಿ ಇಲ್ಲಿ ಢಾಳಾಗಿ ಕಾಣಸಿಗುತ್ತದೆ.

ಒಟ್ಟು 30 ಕಲಾಕೃತಿಗಳನ್ನು ಸುಂದರವಾಗಿ ಫ್ರೇಮ್‌ ಹಾಕಿ ಪ್ರದರ್ಶನದಲ್ಲಿ ಇಡಲಾಗಿದೆ. ಬಣ್ಣದ ಪೆನ್ಸಿಲ್‌, ಸ್ಕೆಚ್‌ ಪೆನ್‌, ಪೋಸ್ಟರ್‌ ಬಣ್ಣಗಳು, ಜಲವರ್ಣ, ಆಕ್ರಿಲಿಕ್, ಫೆವಿಕಾಲ್‌ ತಂತ್ರಗಾರಿಕೆ ಹೀಗೇ ಹಲವು ಬಣ್ಣ ಮಾಧ್ಯಮಗಳು ಇವರ ಕಲಾಕೃತಿಗಳಲ್ಲಿ ಕಾಣುತ್ತಿವೆ. ಮಾಡರ್ನ್‌ ಕಲಾಶೈಲಿಯತ್ತ ಆಕರ್ಷಣೆಯೂ, ಪರಿಸರ ಪ್ರೀತಿಯೂ ಇವರ ಕೃತಿಗಳಲ್ಲಿ ಕಂಡು ಬರುತ್ತದೆ. ಗಾಢ ವರ್ಣಗಳ ಬಳಕೆ, ನಿಯಾನ್‌ ಬಣ್ಣಗಳ ಬಳಕೆಯೂ ಚಿತ್ರಗಳನ್ನು ವೈವಿಧ್ಯಮಯವಾಗಿಸಿವೆ. ಸ್ವಂತ ಚಿಂತನೆಯಿಂದ ಮೂಡಿಬಂದಿರುವ ‘ಅರ್ಧನಾರೀಶ್ವರ’ ಹಾಗೂ ಮಹಾಭಾರತದ ಘಟನೆಗಳನ್ನು ಆಧರಿಸಿ ರಚಿಸಿರುವ ‘ಬ್ಲೈಂಡ್‌ನೆಸ್‌’ ಕೃತಿಗಳು ಕಲಾವಿದೆಯ ಅಧ್ಯಯನಶೀಲ ಗುಣವನ್ನೂ ದರ್ಶಿಸುತ್ತವೆ.

ಎನ್‌ಸಿಸಿಯ 2020ರ ಆರ್‌ಡಿಸಿ ಕ್ಯಾಂಪ್‌ನಲ್ಲಿ ಪಾಲ್ಗೊಂಡಿರುವ ಇಂಪನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಂದರ್ಭದಲ್ಲಿ ಎನ್‌ಸಿಸಿ ವತಿಯಿಂದ ಕೊರೊನಾ ವಾರಿಯರ್‌ ಆಗಿಯೂ ಕಾರ್ಯನಿರ್ವಹಿಸಿರುವುದು ಗಮನಾರ್ಹ. ಭರತನಾಟ್ಯ, ವೀಣಾ ವಾದನ, ನಾಟಕಗಳನ್ನೂ ಕಲಿಯುತ್ತ ಬಹುಮುಖ ಪ್ರತಿಭೆಯಾಗಿರುವ ಇಂಪನಾ, ಚಿತ್ರಕಲಾ ಕ್ಷೇತ್ರದಲ್ಲೂ ಭರವಸೆಯ ಪ್ರತಿಭೆಯಾಗಿ ಹೊರಹೊಮ್ಮುವ ಲಕ್ಷಣಗಳನ್ನು ಈ ಕಲಾಪ್ರದರ್ಶನದಲ್ಲಿ ಕಾಣಬಹುದು. ನ. 6ರವರೆಗೂ ಕಲಾ ಪ್ರದರ್ಶನ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.