ಬಕ್ರೀದ್‌: ಗೋಹತ್ಯೆ ತಡೆಯಲು ಡಿಸಿ ಸೂಚನೆ

7

ಬಕ್ರೀದ್‌: ಗೋಹತ್ಯೆ ತಡೆಯಲು ಡಿಸಿ ಸೂಚನೆ

Published:
Updated:

ದಾವಣಗೆರೆ: ಗೋಹತ್ಯೆಯನ್ನು ನಿಷೇಧಿಸಲಾಗಿದ್ದು, ಮುಂದಿನ ವಾರ ನಡೆಯುವ ಬಕ್ರೀದ್‌ ಹಬ್ಬದ ವೇಳೆ ನಗರದಲ್ಲಿ ಎಲ್ಲಿಯೂ ಹಸುವಿನ ವಧೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಆಹಾರಕ್ಕಾಗಿ ಒಂಟೆ ವಧಿಸುವುದನ್ನೂ ನಿಷೇಧಿಸಲಾಗಿದೆ. ಹಬ್ಬದ ವೇಳೆ ನಗರದಲ್ಲಿ ಎಲ್ಲಿಯೂ ಗೋಹತ್ಯೆ ಹಾಗೂ ಒಂಟೆಗಳ ವಧೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳ ತಂಡ ರಚಿಸಬೇಕು. ಹತ್ಯೆ ನಡೆಸಿರುವುದು ಕಂಡು ಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿದರು.

ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ ಸುಂಕದ, ‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಸಿಗದೇ ಇರುವುದರಿಂದ ನಗರದಲ್ಲಿ ಅತ್ಯಾಧುನಿಕ ಕಸಾಯಿಖಾನೆ ಆರಂಭಿಸಲು ಸಾಧ್ಯವಾಗಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರ ಜನಸಂಖ್ಯೆ ಇರುವ ಕಡೆ ತಾತ್ಕಾಲಿಕವಾಗಿ ಕಸಾಯಿಕಾನೆ ತೆರೆಯಲು ಪರವಾನಗಿ ನೀಡುತ್ತೇವೆ. ಪ್ರಾಣಿಯ ರಕ್ತ ಚರಂಡಿ ಸೇರದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ನಗರದಲ್ಲಿ ಒಂಟೆ ಹಾಗೂ ಹಸುವನ್ನು ವಧಿಸುವುದು ಎಲ್ಲಿಯೂ ಕಂಡು ಬಂದಿಲ್ಲ. ಕುರಿ, ಮೇಕೆಯನ್ನೇ ಹೆಚ್ಚಾಗಿ ವಧಿಸಲಾಗುತ್ತದೆ. ಆರೋಗ್ಯ ನಿರೀಕ್ಷಕರ, ಪಶು ವೈದ್ಯಾಧಿಕಾರಿಗಳ ಹಾಗೂ ಪೊಲೀಸರನ್ನು ಒಳಗೊಂಡ ತಂಡವನ್ನು ರಚಿಸಿ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ಆಗದಂತೆ ನಿಗಾ ವಹಿಸಲಾಗುವುದು’ ಎಂದು ಅವರು ತಿಳಿಸಿದರು.

ಅಕ್ರಮ ಸಾಗಾಟ:

‘ಜಾನುವಾರು ಅಕ್ರಮ ಸಾಗಾಟವನ್ನು ತಡೆಯಲು ಆರ್‌ಟಿಒ, ಪೊಲೀಸ್‌ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ತಂಡವನ್ನು ರಚಿಸಬೇಕು. ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವುದು ಕಂಡು ಬಂದ ತಕ್ಷಣ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ನಾಗರಿಕರಿಗೆ ನೀಡಬೇಕು. ಗೋರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡುವ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು’ ಎಂದೂ ಜಿಲ್ಲಾಧಿಕಾರಿ ಸೂಚಿಸಿದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಶಿವಪ್ರಸಾದ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !