ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಬ್ಯಾಂಕ್‌ ವಿಲೀನ ವಿರೋಧಿಸಿ ನೌಕರರಿಂದ ಪ್ರತಿಭಟನೆ

Last Updated 9 ಅಕ್ಟೋಬರ್ 2018, 20:17 IST
ಅಕ್ಷರ ಗಾತ್ರ

ದಾವಣಗೆರೆ: ವಿಜಯ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡ ಮತ್ತು ದೇನಾ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಆಶ್ರಯದಲ್ಲಿ ಬ್ಯಾಂಕ್‌ ನೌಕರರು ನಗರದ ಪಿ.ಬಿ. ರಸ್ತೆಯ ವಿಜಯ ಬ್ಯಾಂಕ್‌ ಎದುರು ಮಂಗಳವಾರ ಪ್ರತಿಭಟಿಸಿದರು.

ಜಿಲ್ಲಾ ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಜಿಲ್ಲಾ ಸಂಚಾಲಕ ಕೆ. ರಾಘವೇಂದ್ರ ನಾಯರಿ, ‘ಬ್ಯಾಂಕ್‌ಗಳನ್ನು ವಿಲೀನಗೊಳಿಸುವುದನ್ನು ಮೊದಲಿನಿಂದಲೂ ನಾವು ವಿರೋಧಿಸುತ್ತಿದ್ದೇವೆ. ಈಗ ವಿಜಯ ಬ್ಯಾಂಕ್‌ ವಿಲೀನಗೊಳಿಸಲು ಮುಂದಾಗಿರುವುದನ್ನೂ ಖಂಡಿಸುತ್ತಿದ್ದೇವೆ’ ಎಂದರು.

‘ರಾಷ್ಟ್ರೀಕೃತ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕು. ಇನ್ನಷ್ಟು ವಿಸ್ತಾರಗೊಳಿಸಬೇಕು ಎಂಬ ಬೇಡಿಕೆಗಳಿಗೆ ವಿರುದ್ಧವಾಗಿ ಸಾರ್ವಜನಿಕ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಇನ್ನಷ್ಟು ಸಂಕುಚಿತಗೊಳಿಸಲು ಹುನ್ನಾರ ನಡೆಸಲಾಗಿದೆ. ಎಸ್‌ಬಿಐ ಜೊತೆಗೆ ಐದು ಸಹವರ್ತಿ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದರಿಂದ 2017ಕ್ಕೆ ಇದ್ದ ₹ 1,77,000 ನಷ್ಟದ ಪ್ರಮಾಣವು 2018ಕ್ಕೆ ₹ 2,25,000 ಕೋಟಿಗೆ ಏರಿಕೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ದೊಡ್ಡ ಬ್ಯಾಂಕ್‌ ಹೆಚ್ಚು ಅಪಾಯಕಾರಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ₹ 8,95,600 ಕೋಟಿ ವಸೂಲಾಗದ ಸಾಲ (ಎನ್‌.ಪಿ.ಎ) ಇದೆ. ಸಾಲವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲು ಆಸಕ್ತಿ ವಹಿಸುವುದರ ಬದಲು ಅನಗತ್ಯವಾಗಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಇದು ಸಾರ್ವಜನಿಕ ಬ್ಯಾಂಕಿಂಗ್‌ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕುವಂತಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಮೇಲಗಿರಿ, ಅಧ್ಯಕ್ಷ ವಿ. ನಂಜುಂಡೇಶ್ವರ, ಎಸ್‌.ಟಿ. ಶಾಂತಗಂಗಾಧರ್‌, ಅಜಿತ್‌ಕುಮಾರ್‌ ನ್ಯಾಮತಿ, ವಿ. ಶಂಭುಲಿಂಗಪ್ಪ, ಹರೀಶ್‌ ಎಂ. ಪೂಜಾರ್‌, ನವೀನ್‌ಕುಮಾರ್‌, ಕೆ. ವಿಶ್ವನಾಥ್‌ ಬಿಲ್ಲವ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT