ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾದಿ ಶರಣರದ್ದು ಸಮಾನತೆ, ಸ್ವಾಭಿಮಾನದ ಇತಿಹಾಸ

110ನೇ ಬಸವ ಜಯಂತಿ ಉತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರ ಬಣ್ಣನೆ
Last Updated 5 ಮೇ 2022, 3:16 IST
ಅಕ್ಷರ ಗಾತ್ರ

ದಾವಣಗೆರೆ: ‘ಬಸವಾದಿ ಶರಣರ ಇತಿಹಾಸವು ಸಾಂಸ್ಕೃತಿಕ, ಸಮಾನತೆ ಹಾಗೂ ಸ್ವಾಭಿಮಾನದ ಇತಿಹಾಸವಾಗಿದೆ. ಇಂತಹ ಅದ್ವಿತೀಯ ಇತಿಹಾಸವನ್ನು ಮೊದಲು ಅಧ್ಯಯನ ಮಾಡಬೇಕು. ಸಾಧ್ಯವಾದರೆ ಅದನ್ನು ಅನುಷ್ಠಾನಕ್ಕೂ ತರಬೇಕು’ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ವಿರಕ್ತಮಠ ಹಾಗೂ ಬಸವ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಶಿವಯೋಗಾಶ್ರಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ 110ನೇ ವರ್ಷದ ಬಸವ ಜಯಂತಿ ಉತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಣ್ಣ ಹಾಗೂ ಶಿವಶರಣರ ಸಾಮರ್ಥ್ಯ, ಶಕ್ತಿಯನ್ನು ತಿಳಿದುಕೊಳ್ಳಬೇಕೆಂದರೆ ವಚನಗಳನ್ನು ಓದಬೇಕು. ಮನೆ–ಮನೆಗಳಲ್ಲಿ ವಚನಗಳ ಅಧ್ಯಯನ ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

‘ಭಾರತದ ಸಂವಿಧಾನಕ್ಕೆ 73 ವರ್ಷಗಳ ಇತಿಹಾಸವಿದೆ. ಬಸವಣ್ಣ ಕೊಟ್ಟ ವಚನ ಸಂವಿಧಾನಕ್ಕೆ 900 ವರ್ಷಗಳ ಇತಿಹಾಸ ಇದೆ. ಜಗತ್ತಿನಲ್ಲಿ ಸಂಸದೀಯ ವ್ಯವಸ್ಥೆ, ಸಂವಿಧಾನ ಬರುವ ಮೊದಲೇ ಭಾರತದ ಕರ್ನಾಟಕದ ಬಸವ ಕಲ್ಯಾಣದಲ್ಲೇ ಮೊದಲು ಅನುಭವ ಮಂಟಪದ ಮೂಲಕ ಸಂಸದೀಯ ವ್ಯವಸ್ಥೆ ಜಾರಿಗೆ ಬಂದಿತ್ತು. ಅನುಭವ ಮಂಟಪವು ಸಂಸದೀಯ ವ್ಯವಸ್ಥೆಯ ಮಾತೃ ಸಂಸ್ಥೆಯಾಗಿದೆ. ಇಂಥ ಪರಂಪರೆಯ ಅಧ್ಯಯನ ಮಾಡಬೇಕು’ ಎಂದು ಸ್ಮರಿಸಿದರು.

‘ಬಸವಣ್ಣನವರ ಮೇಲಿನ ಭಕ್ತಿ, ಉತ್ಸವ ಕೇವಲ ಬಸವ ಜಯಂತಿಗೆ ಸೀಮಿತವಾಗಬಾರದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಬೇಕು. ಬಸವಣ್ಣನ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ, ‘ಕನಕದಾಸರು ಕುಲ–ಕುಲ ಎಂದು ಹೊಡೆದಾಡದಿರಿ...’ ಎಂದು ಹೇಳಿದರೆ, 12ನೇ ಶತಮಾನದಲ್ಲಿ ಬಸವಣ್ಣ ‘ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ . ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ...’ ಎಂದು ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ್ದರು. ಬಸವಣ್ಣ ಹಾಗೂ ಕನಕದಾಸರ ಆಲೋಚನೆಗಳನ್ನು ಇಂದು ಮುರುಘಾ ಶರಣರು ಸಾಕಾರಗೊಳಿಸುತ್ತಿದ್ದಾರೆ’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಬಸವಣ್ಣ ಎಲ್ಲಾ ವರ್ಗದ ಜನರಿಗೆ ಅಧಿಕಾರ ಕೊಟ್ಟಿದ್ದಾರೆ. ಸ್ವೀಯರಿಗೂ ಸಮಾನತೆ ತಂದುಕೊಟ್ಟಿದ್ದರು’ ಎಂದು ಸ್ಮರಿಸಿದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ಜಿ. ಅಜಯಕುಮಾರ್‌, ‘110ನೇ ವರ್ಷದ ಬಸವ ಜಯಂತಿ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಿದ್ದೇವೆ. ಮುಂದಿನ ವರ್ಷದಿಂದ ಇನ್ನೂ ದೊಡ್ಡ ಪ್ರಮಾಣದಲ್ಲಿ ಮಾಡಲಾಗುವುದು. ಮುರುಘಾ ಶರಣರು ಸೇರಿ ಸ್ವಾಮೀಜಿಗಳನ್ನು ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಬರಬೇಕು ಎಂಬ ಭಕ್ತರ ಆಸೆ ಮುಂದಿನ ವರ್ಷವಾದರೂ ಈಡೇರಲಿ’ ಎಂದು ಆಶಿಸಿದರು.

ಬಸವಪ್ರಭು ಸ್ವಾಮೀಜಿ ಸ್ವಾಗತಿಸಿದರು. ಸರ್ದಾರ ಸೇವಾಲಾಲ್‌ ಸ್ವಾಮೀಜಿ, ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ರೈತ ಮುಖಂಡ ತೇಜಸ್ವಿ ಪಟೇಲ್‌, ವಿರಕ್ತಮಠದ ಧರ್ಮದರ್ಶಿ ನಾಸಿರ್‌ ಅಹ್ಮದ್‌, ದುರ್ಗಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಕಾಂಗ್ರೆಸ್‌ ಮುಖಂಡ ಎಚ್‌.ಬಿ. ವೀರಭದ್ರಪ್ಪ, ಮಂಗಳಾ ಅಜಯಕುಮಾರ್‌ ಅವರು ಹಾಜರಿದ್ದರು.

ಮೆರುಗು ತಂದ ಭವ್ಯ ಮೆರವಣಿಗೆ

ನಗರದಲ್ಲಿ ಜಾನಪದ ಕಲಾ ಮೇಳಗಳೊಂದಿಗೆ ಬುಧವಾರ ನಡೆದ ಭವ್ಯ ಮೆರವಣಿಗೆಯು 110ನೇ ವರ್ಷದ ಬಸವ ಜಯಂತಿ ಉತ್ಸವಕ್ಕೆ ಮೆರುಗು ತಂದಿತು. ಶೋಭಾಯಾತ್ರೆಯಂತೆ ಕಂಗೊಳಿಸಿದ ಮೆರವಣಿಗೆಯು ‘ಬಸವಪ್ರಿಯ’ರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಬಸವಪ್ರಭು ಸ್ವಾಮೀಜಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಬಿ.ಜಿ. ಅಜಯಕುಮಾರ್‌ ನೇತೃತ್ವದಲ್ಲಿ ವಿರಕ್ತಮಠದಿಂದ ಮಧ್ಯಾಹ್ನ ಆರಂಭಗೊಂಡ ಮೆರವಣಿಗೆಯು ಮದಕರಿನಾಯಕ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಮಹಾನಗರ ಪಾಲಿಕೆ ಎದುರು, ಪ್ರವಾಸಿ ಮಂದಿರ ರಸ್ತೆ, ಜಯದೇವ ವೃತ್ತದ ಮೂಲಕ ಸಾಗಿ ಶಿವಯೋಗಾಶ್ರಮಕ್ಕೆ ಸಂಜೆಯ ವೇಳೆಗೆ ತಲುಪಿತು.

ಬಸವೇಶ್ವರ ಭಾವಚಿತ್ರವನ್ನು ಹೊತ್ತಿದ್ದ ಆನೆಯು ರಾಜಗಾಂಭೀರ್ಯದಿಂದ ಮೆರವಣಿಗೆಯಲ್ಲಿ ಸಾಗಿತು. ಗೊಂಬೆ, ಚೆಂಡೆ ಕುಣಿತ, ಕುದುರೆ, ನಂದಿಕೋಲು, ಡೊಳ್ಳು ಕುಣಿತವು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಮಹಿಳೆಯರೂ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಜಯದೇವ ವೃತ್ತದಲ್ಲಿ ಮುರುಘಾ ಶರಣರ ನೇತೃತ್ವದಲ್ಲಿ ಹಲವು ಮಠಾಧೀಶರು ಜಾನಪದ ಕಲಾವಿದರ ನೃತ್ಯವನ್ನು ವೀಕ್ಷಿಸಿದರು. ಅನುಭವ ಮಂಟಪ, ಮೈಸೂರಿನ ಮಹಾರಾಜರು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಮುಂತಾದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆಯಿತು.

* 900 ವರ್ಷಗಳ ಹಿಂದೆ ಬಸವಣ್ಣ ಬಿತ್ತಿ ಹೋಗಿದ್ದ ಸಮಾನತೆ, ಶೂನ್ಯ ಸಿದ್ಧಾಂತ, ಸ್ವಾಭಿಮಾನದ ತತ್ವಗಳ ಬೀಜಗಳು ಇಂದು ಪ್ರಫುಲ್ಲಗೊಳ್ಳುತ್ತಿವೆ. ಬಸವಾದಿ ಶರಣರ ಪ್ರಯೋಗಗಳು ಮತ್ತೆ ಮತ್ತೆ ನೆನಪಿಗೆ ಬರುತ್ತಿವೆ.

– ಶಿವಮೂರ್ತಿ ಮುರುಘಾ ಶರಣರು

* ಬಸವಣ್ಣ ಎಲ್ಲರ ಕಲ್ಯಾಣಕ್ಕಾಗಿ ವಚನಗಳನ್ನು ರಚಿಸಿ ಸುಂದರ ಸಮಾಜ ಕಟ್ಟಲು ಮುಂದಾಗಿದ್ದರು. ಬಸವ ತತ್ವ ಹಿಂದೆ–ಇಂದು ಹಾಗೂ ಮುಂದೆಯೂ ಪ್ರಸ್ತುತವಾಗಿರಲಿದೆ.

– ಪುರುಷೋತ್ತಮಾನಂದ ಸ್ವಾಮೀಜಿ

* ಬಸವೇಶ್ವರರು ಒಂದು ಸೀಮಿತ ವರ್ಗಕ್ಕೆ ಸೇರಿದವಲ್ಲ. ಬದಲಾಗಿ ಸರ್ವ ಕಾಲಿಕ, ಸರ್ವ ಜನಾಂಗಕ್ಕೆ ಸೇರಿದವರು ಎಂಬುದಕ್ಕೆ ಬಸವ ಜಯಂತಿಯ ಶೋಭಾಯಾತ್ರೆಯೇ ಸಾಕ್ಷಿಯಾಗಿದೆ.

– ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT