ಗುರುವಾರ , ಮಾರ್ಚ್ 23, 2023
30 °C
ಅಗತ್ಯ ಸೌಲಭ್ಯಗಳಿದ್ದರೂ ಮಕ್ಕಳನ್ನು ಸೇರಿಸಲು ಪಾಲಕರ ನಿರಾಸಕ್ತಿ

ಬಸವಾಪಟ್ಟಣ: ಶತಮಾನ ಕಂಡ ಶಾಲೆಗೆ ವಿದ್ಯಾರ್ಥಿಗಳ ಕೊರತೆ

ಎನ್.ವಿ. ರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಬಸವಾಪಟ್ಟಣ: ಒಂದು ಕಾಲದಲ್ಲಿ ಸುತ್ತಲಿನ 60ಕ್ಕೂ ಹೆಚ್ಚು ಗ್ರಾಮಸ್ಥರ ಮಕ್ಕಳಿಗೆ ಕಲಿಯಲು ಆಸರೆಯಾಗಿದ್ದ ಹೋಬಳಿಯ ಕೋಟೆಹಾಳಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ.  1912–13ನೇ ಸಾಲಿನಲ್ಲಿ ಆರಂಭವಾಗಿ ಶತಮಾನ ಪೂರೈಸಿರುವ ಈ ಶಾಲೆಯಲ್ಲಿ ಎಲ್ಲ ಸೌಲಭ್ಯವಿದ್ದರೂ ಪಾಲಕರ ನಿರಾಸಕ್ತಿಯಿಂದ ಬಳಲುತ್ತಿದೆ.

ಬ್ರಿಟಿಷ್‌ ಆಡಳಿತದ ಅವಧಿಯಲ್ಲಿ, ಮೈಸೂರು ಸಂಸ್ಥಾನಕ್ಕೆ ಒಳಪಟ್ಟಿದ್ದ ಈ ಗ್ರಾಮದಲ್ಲಿ ನಿರ್ಮಾಣವಾಗಿರುವ ಹೆಂಚಿನ ಚಾವಣಿಯ ಶಾಲಾ ಕಟ್ಟಡ ಇಂದಿಗೂ ಸುಭದ್ರವಾಗಿದೆ. 175 ಅಡಿ ಉದ್ದ, 200 ಅಡಿ ಅಗಲದ ನಿವೇಶನದಲ್ಲಿ ಸಾಕಷ್ಟು ಗಾಳಿ ಬೆಳಕು ಬರುವಂತೆ ಈ ಕಟ್ಟಡವನ್ನು ನಿರ್ಮಿಸಲಾಗಿದೆ.

ಕಟ್ಟಡದ ಹಿಂಭಾಗ ಮತ್ತು ಮುಂಭಾಗದಲ್ಲಿ ವಿಶಾಲ ಸ್ಥಳಾವಕಾಶ ಇದೆ. ಶಾಲಾ ಆವರಣ ಹಸಿರು ಹೊದ್ದು ಕಂಗೊಳಿಸುತ್ತಿದೆ. ಮೂರು ಎಕರೆಗೂ ಹೆಚ್ಚು ದೊಡ್ಡದಾದ ಆಟದ ಮೈದಾನ ಇದೆ. ಎಲ್ಲ ಇದ್ದರೂ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ.

ಆಗಿನ ಕಾಲದಲ್ಲಿ ಅಲ್ಲಲ್ಲಿ 1ರಿಂದ 4ನೇ ತರಗತಿಯವರೆಗೆ ಕಿರಿಯ ಪ್ರಾಥಮಿಕ ಶಾಲೆಗಳಿದ್ದವು. ಹಿರಿಯರು ಗ್ರಾಮದಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆಯನ್ನು ನಿರ್ಮಿಸಬೇಕು ಎಂದು ಮೈಸೂರಿನ ಮಹಾರಾಜರಿಗೆ ಮನವಿ ಸಲ್ಲಿಸಿದ ಪರಿಣಾಮವಾಗಿ ಈ ಭಾಗದಲ್ಲಿ 1912-13ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮಂಜೂರಾಯಿತು. ರೈತರೊಬ್ಬರ ಮನೆಯಲ್ಲಿ ಶಾಲೆ ಆರಂಭಿಸಲಾಯಿತು. ಆ ಕಾಲದಲ್ಲಿಯೇ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯವೂ ಇತ್ತು. ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌, ಮಕ್ಕಳ ತಜ್ಞ, ದಿವಂಗತ ಡಾ.ಜಿ.ಬೆನಕಪ್ಪ, ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪ ಮತ್ತಿತರರು ಇದೇ ಶಾಲೆಯಲ್ಲಿ ಓದಿದ್ದಾರೆ. ಚಿತ್ರ ನಟಿ ಬಿ.ಸರೋಜಾದೇವಿ ಅವರ ಮಾವ ಇಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಇತಿಹಾಸ ಹೊಂದಿರುವ ಈ ಸರ್ಕಾರಿ ಶಾಲೆಗೆ ಪಾಲಕರು ಮಕ್ಕಳನ್ನು ದಾಖಲಿಸುತ್ತಿಲ್ಲ  ಎಂದು ಬೇಸರಿಸುತ್ತಾರೆ ನಿವೃತ್ತ ಶಿಕ್ಷಕ ಎ.ತೀರ್ಥಪ್ಪ.

‘ನಮ್ಮ ಶಾಲೆಯಲ್ಲಿ ಈಗ 1ರಿಂದ 7ನೇ ತರಗತಿಯವರೆಗೆ 56 ವಿದ್ಯಾರ್ಥಿಗಳು ಇದ್ದಾರೆ. ಮಕ್ಕಳು ಕುಳಿತುಕೊಳ್ಳಲು ಪೀಠೋಪಕರಣಗಳಿಲ್ಲ ಎನ್ನುವುದನ್ನು ಬಿಟ್ಟರೆ ಇತರೆ ‌ಎಲ್ಲ ಸೌಲಭ್ಯಗಳಿವೆ. ಕುಡಿಯುವ ನೀರು, ಸುಸಜ್ಜಿತ ಗ್ರಂಥಾಲಯ, ಅಡುಗೆ ಕೋಣೆ, ಶೌಚಾಲಯ ಎಲ್ಲವೂ ಇವೆ. ಆದರೆ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಮಕ್ಕಳನ್ನು ನಮ್ಮಲ್ಲಿಗೆ ಸೇರಿಸುತ್ತಿಲ್ಲ. ಇದೇ ಗ್ರಾಮದಲ್ಲಿ ಒಂದು ಖಾಸಗಿ ಶಾಲೆ ಇದೆ. ಅಕ್ಕಪಕ್ಕದ ಗ್ರಾಮಗಳಲ್ಲಿ  1 ಕಿ.ಮೀ ಅಂತರದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಇದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ’ ಎನ್ನುತ್ತಾರೆ ಪ್ರಭಾರ ಮುಖ್ಯಶಿಕ್ಷಕ ಎಚ್‌. ಮುರುಗೇಂದ್ರಪ್ಪ.

ಈ ಶತಮಾನದ ಶಾಲೆಯಲ್ಲಿ ಸುಮಾರು 400ರವರೆಗೆ ವಿದ್ಯಾರ್ಥಿಗಳು ಇದ್ದ ದಾಖಲೆ ಇದೆ. ಪಾಲಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು  ಕಳುಹಿಸುತ್ತಿದ್ದು, ಅವರ ಒಲವು ಬದಲಾಗಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಸಾಧ್ಯ ಎನ್ನುತ್ತಾರೆ ಸಿ.ಆರ್‌.ಪಿ. ಎಂ.ರಘುನಾಥ್‌.

ಕೋಟ್‌...

ನಮ್ಮೂರಿನ ಶಾಲೆಯನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮ ವಹಿಸಿದ್ದೇವೆ. ಶಾಲಾ ವಾತಾವರಣ ಮಕ್ಕಳನ್ನು ಆಕರ್ಷಿಸುವಂತೆ ಮಾಡಿದ್ದೇವೆ. ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಹಿಂದಿನ ವೈಭವ ಮರುಕಳಿಸುತ್ತದೆ. ಲಕ್ಷ್ಮಿದೇವಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು