ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಸಮ ಸಮಾಜದ ಕ್ರಾಂತಿ ಪುರುಷ ಬಸವಣ್ಣ

ಏಪ್ರಿಲ್‌ 26ಕ್ಕೆ ಜಗಜ್ಯೋತಿ ಬಸವೇಶ್ವರ ಜಯಂತಿ
Last Updated 25 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದ ಉದ್ದಗಲಕ್ಕೂ ನಡೆದ ಸಾಮಾಜಿಕ–ಧಾರ್ಮಿಕ ಕ್ರಾಂತಿಯು ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಜಡ್ಡುಗಟ್ಟಿದ ಸಮಾಜದಲ್ಲಿನ ಅರ್ಥರಹಿತ ಆಚಾರ–ವಿಚಾರಗಳಿಂದ, ಮೇಲು–ಕೀಳು ಎಂಬ ಭಾವನೆಗಳಿಂದ ಸ್ತ್ರೀ–ಪುರುಷ ಎಂಬ ಲಿಂಗಭೇದದ ತಾರತಮ್ಯದಿಂದ, ಶ್ರೀಮಂತ–ಬಡವ ಎಂಬ ಅಂತರದ ಸಂಘರ್ಷದಿಂದ ಸಾಮಾಜಿಕ ವ್ಯವಸ್ಥೆ ರೋಸಿ ಹೋಗಿತ್ತು. ಇದರ ವಿರುದ್ಧ ತಮ್ಮ ವಿಶಿಷ್ಟವಾದ ಮಾನವೀಯ ಮೌಲ್ಯಗಳ ಆಧಾರದ ಮೇಲೆ, ನೈತಿಕ ಸೂತ್ರಗಳ ಹಿನ್ನೆಲೆಯಲ್ಲಿ ಹೋರಾಟ ನಡೆಸಿದ ಸಾಮಾಜಿಕ ಹೋರಾಟದ ಹರಿಕಾರ ಭಕ್ತಿಭಂಡಾರಿ ಬಸವಣ್ಣನವರು.

ಕಾಯಕ, ದಾಸೋಹ ಮತ್ತು ಸಮಾನತೆಯ ತಳಹದಿಯ ಮೇಲೆ ಸಂತೃಪ್ತ ಸಮಾಜದ ಕನಸು ಕಂಡವರು ಬಸವಣ್ಣ. ಜನರಾಡುವ ಭಾಷೆಯಲ್ಲಿ ವಚನಗಳನ್ನು ರಚಿಸಿ ಜನವಾಣಿಗೆ ದೇವವಾಣಿಯ ಪಟ್ಟಕಟ್ಟಿದರು. ಸಮಾಜದಲ್ಲಿರುವ ಪ್ರತಿಯೊಬ್ಬರೂ ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣವನ್ನು ಸಾಧಿಸಬೇಕು ಎಂಬುದು ಅವರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮನುಕುಲಕ್ಕೆ ನೀಡಿದ ಸಂದೇಶಗಳು ಅವರ ವಚನಗಳಲ್ಲಿ ಸಮೃದ್ಧವಾಗಿವೆ.

ವ್ಯಕ್ತಿಯ ಧಾರ್ಮಿಕ, ಆಧ್ಯಾತ್ಮಿಕ ಔನ್ನತ್ಯಕ್ಕೆ ಕಾರಣವಾದ ಈ ವಚನಗಳು ಕನ್ನಡದ ಉಪನಿಷತ್ತುಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಇಂದಿನ ನಮ್ಮ ಸಂವಿಧಾನದ ಎಲ್ಲ ಆಶಯಗಳೂ ವಚನಗಳಲ್ಲಿ ಹುದುಗಿಕೊಂಡಿರುವುದು ಅವುಗಳ ಶ್ರೇಷ್ಠತೆಗೆ ನಿದರ್ಶನವಾಗಿದೆ.

‘ಆಚಾರವೇ ಸ್ವರ್ಗ ಅನಾಚಾರವೇ ನರಕ, ಸತ್ಯವ ನುಡಿವುದೇ ಮತ್ರ್ಯಲೋಕ, ನುಡಿದಂತೆ ನಡೆ ಇದೇ ಜನ್ಮಕಡೆ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು, ಸೋಹಂ ಎಂದೆನಿಸದೇ ದಾಸೋಹ ಎಂದೆನಿಸಯ್ಯಾ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಕೂಡಲ ಸಂಗನ ಶರಣರೇ ಕುಲಜರು...’ ಈ ರೀತಿಯ ಸಂದೇಶಗಳು ಮನುಕುಲಕ್ಕೆ ಹೊಸ ಚೈತನ್ಯವನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿವೆ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಜ್ಯೋತಿಯನ್ನು ಬೆಳಗಿಸುವಲ್ಲಿ ಸಮರ್ಥವಾಗಿವೆ.

ದಯವಿಲ್ಲದ ಧರ್ಮವು ಅರ್ಥಹೀನ, ಧರ್ಮಕ್ಕೆ ದಯವೇ ಮೂಲ ಎಂದು ಹೇಳುವ ಬಸವಣ್ಣನವರು ಸಕಲ ಪ್ರಾಣಿಗಳಲ್ಲಿಯೂ ದಯೆಯುಳ್ಳವರಾಗಿರಬೇಕು ಎಂದು ಬೋಧಿಸಿದ್ದರು. ಅವರ ಸಾಮಾಜಿಕ ಕಳಕಳಿ, ಮಾನವೀಯ ಅನುಕಂಪ, ನಯ–ವಿನಯಗಳು ಕಾರಣವಾಗಿ ಅವರೊಬ್ಬ ಶ್ರೇಷ್ಠ ಮಾನವತಾವಾದಿಯಾಗಿ, ಸಮಾಜ ಸುಧಾರಕರಾಗಿ, ಧಾರ್ಮಿಕ ನೇತಾರರಾಗಿ ಇತಿಹಾಸದಲ್ಲಿ ಕಂಗೊಳಿಸಿದ್ದಾರೆ.

ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಅವರ ಮನೋಭಾವವೇ ಸಮಾಜೋಧಾರ್ಮಿಕ ಚಳವಳಿಯ ನೇತಾರರಾಗಲು ಕಾರಣವಾಯಿತು. ಅವರ ನಡೆ–ನುಡಿಗಳೆಲ್ಲವೂ ಪುರುಷ ಸದೃಶವಾಗಿದ್ದವು. ಹಾಗಾಗಿ ಸಮಕಾಲೀನ ಶರಣ ಸಂಕುಲವು ಅವರನ್ನು ಗುರುವಾಗಿ, ಜಗದ್ಗುರುವಾಗಿ, ದೇವರಾಗಿ-ಮಹಾದೇವರಾಗಿ ಕಂಡು ಸುತ್ತಿಸಿರುವುದು ಬಸವಣ್ಣನ ಹಿರಿಮೆಗೆ ಹಿಡಿದ ಕೈ ಕನ್ನಡಿಯಾಗಿದೆ.

ಹೆಣ್ಣು, ಹೊನ್ನು, ಮಣ್ಣಗಳಿಗಾಶಿಸದೇ ಭಕ್ತಿಪಥವನ್ನು ತೋರಲು ಬಂದ ಬಸವಣ್ಣನವರ ಪರುಷ ಸದೃಶ ವ್ಯಕ್ತಿತ್ವವನ್ನು ಕಂಡ ಆಧುನಿಕ ಚಿಂತಕರು–ಶಿವನಾಗಬಹುದು ಬಸವಣ್ಣನಾಗಲು ಬಾರದು ಎಂದು ಹೇಳಿರುವುದು ಅರ್ಥಪೂರ್ಣ ಅಷ್ಟೇ ಅಲ್ಲ ಔಚಿತ್ಯಪೂರ್ಣವೂ ಆಗಿದೆ. ಒಟ್ಟಾರೆ ಅವರ ಸಂದೇಶಗಳನ್ನು ಪಾಲಿಸುತ್ತ ಮನುಕುಲವನ್ನು ಬೆಳಕಿನತ್ತ ಕೊಂಡೊಯ್ಯವುದೇ ಅವರ ಜಯಂತಿ ಆಚರಣೆಯ ಸಾರ್ಥಕ ಉಪಕ್ರಮವಾಗಿದೆ.

(ಲೇಖಕರು: ಬಸವಾಪಟ್ಟಣದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT