ಶನಿವಾರ, ಫೆಬ್ರವರಿ 27, 2021
31 °C
ಲಾಕ್‌ಡೌನ್‌ ಇನ್ನಷ್ಟು ಬಿಗಿಗೊಳಿಸಿದ ಪೊಲೀಸರು * 71 ವಾಹನ ವಶ

ದಾವಣಗೆರೆಯ ಬಾಷಾನಗರ, ಜಾಲಿನಗರ ಸೀಲ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌–19 ಎರಡು ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಾಷಾನಗರ ಮತ್ತು ಜಾಲಿನಗರವನ್ನು ಸೀಲ್‌ಡೌನ್‌ ಮಾಡಲಾಗಿದೆ. ನಗರದಲ್ಲಿ ಅನಗತ್ಯವಾಗಿ ಓಡಾಟ ಮಾಡುತ್ತಿದ್ದ 71 ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಎಪಿಸೆಂಟರ್‌ನಿಂದ (ಸೋಂಕು ಪತ್ತೆಯಾದವರ ಮನೆಯಿಂದ) 100 ಮೀಟರ್‌ ವ್ಯಾಪ್ತಿಯಲ್ಲಿ ಯಾರೂ ಹೊರಗೆ ಬಾರದಂತೆ ಪೊಲೀಸರು ಬಂದೋಬಸ್ತು ಮಾಡಿದ್ದಾರೆ. 100 ಮೀಟರ್‌ಗಿಂತ ಹೊರಗಿರುವವರು ಕೂಡ ಹೊರಬರುವುದನ್ನು ಕಡಿಮೆ ಮಾಡಿಬಿಟ್ಟಿದ್ದಾರೆ. ‘ಯಾರೂ ಹೊರಬರಬೇಡಿ’ ಎಂದು ಸ್ಥಳೀಯ ಯುವಕರು ಧ್ವನಿವರ್ಧಕಗಳ ಮೂಲಕ ತಿಳಿಸುತ್ತಿರುವುದು ಕೂಡ ಕಂಡು ಬಂದಿದೆ.

ಒಳ ರಸ್ತೆಗಳಿಗೆ ಯುವತಿಯರೇ ಮುಂದೆ ನಿಂತು ಮುಳ್ಳಿನ ಬೇಲಿ ಹಾಕಿದ್ದಾರೆ.

ದ್ರಾವಣ ಸಿಂಪಡಣೆ: ಕೊರೊನಾ ವೈರಸ್‌ ಪತ್ತೆಯಾದ ಪ್ರದೇಶವನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಗುರುತಿಸಿಸಲಾಗಿದೆ. ಜಾಲಿನಗರ ಮತ್ತು ಬಾಷಾನಗರದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು.

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮನೆಮನೆ ಭೇಟಿ ನೀಡಿ ಜನರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೆಮ್ಮು, ಜ್ವರ, ಶೀತ, ಗಂಟಲು ನೋವು ಸಹಿತ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಇರುವವರನ್ನು ಪಟ್ಟಿ ಮಾಡುತ್ತಿದ್ದಾರೆ. ಹೊರಗೆ ಹೋಗಿ ಬಂದವರ ಮಾಹಿತಿ ಒಟ್ಟುಮಾಡುತ್ತಿದ್ದಾರೆ.

ಅಂಗಡಿಗಳು ಬಂದ್‌: ಹಸಿರು ವಲಯಕ್ಕೆ ಜಿಲ್ಲೆ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಹಲವು ರಸ್ತೆಗಳಲ್ಲಿದ್ದ ಬ್ಯಾರಿಕೇಡ್‌ಗಳಲ್ಲಿ ಕೆಲವನ್ನು ತೆರವುಗೊಳಿಸಲಾಗಿತ್ತು. ಗುರುವಾರ ಮತ್ತೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ನಗರದ ವಿವಿಧೆಡೆ ಹೊಸತಾಗಿ ತೆರೆಯಲು ಅವಕಾಶ ನೀಡಿದ್ದ ಅಂಗಡಿಗಳನ್ನು ಮತ್ತೆ ಬಂದ್‌ ಮಾಡಿಸಲಾಗಿದೆ.

ತಾಲ್ಲೂಕುಗಳಲ್ಲಿ ಆರ್ಥಿಕ ಚಟುವಟಿಕೆ

ಜಿಲ್ಲಾ ಕೇಂದ್ರದಲ್ಲಷ್ಟೇ ಸದ್ಯಕ್ಕೆ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿರುವುದರಿಂದ ಜಿಲ್ಲಾ ಕೇಂದ್ರದ ಸುತ್ತಮುತ್ತವಷ್ಟೇ ಸಡಿಲಿಕೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಹಾಗಾಗಿ ತಾಲ್ಲೂಕುಗಳಲ್ಲಿ ಆರ್ಥಿಕ ಚಟುವಟಿಕೆಗೆ ನೀಡಿರುವ ಸಡಿಲಿಕೆ ಮುಂದುವರಿದಿದೆ.

ಜಗಳೂರು, ಹರಿಹರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳಲ್ಲಿ ಅಂತರ ಕಾಪಾಡಿಕೊಂಡು, ಮಾಸ್ಕ್‌ ಹಾಕಿಕೊಂಡು ವ್ಯವಹಾರಗಳು ನಡೆದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು