ಶುಕ್ರವಾರ, ಮೇ 14, 2021
32 °C
ಮೆರವಣಿಗೆಯಲ್ಲಿ ವಸ್ತು ದಾನ ಮಾಡಿದ ಪ್ರೀತಿ

ಸನ್ಯಾಸ ದೀಕ್ಷೆಗೆ ಬಿಬಿಎಂ ಪದವೀಧರೆ ನಿರ್ಧಾರ

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಇಲ್ಲಿಯ ಜೈನರ ಬಡಾವಣೆ ನಿವಾಸಿ ಪ್ರೀತಿ ಗಣಧರ ಚೋಪ್ರಾ ಅವರು ಶ್ವೇತಾಂಬರ ಪಂಗಡದ ಜೈನ ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ್ದಾರೆ.

ಭಾನುವಾರ ಜೈನ ದೀಕ್ಷಾ ವಸ್ತು ದಾನ ಮೆರವಣಿಗೆ ನಡೆಯಿತು. ಇಲ್ಲಿಯ ಗೌಳೇರಪೇಟೆ ಮಯೂರ ಟೆಕ್ಸ್‌ಟೋರಿಯಂನ ಮಾಲೀಕರಾದ ವೀರಚಂದ್ ಚೋಪ್ರಾ ಮತ್ತು ವಿಮಲಾದೇವಿ ದಂಪತಿಯ ಮೂರನೇ ಪುತ್ರಿ 28ರ ಹರೆಯದ ಪ್ರೀತಿ ಅವರು ಸನ್ಯಾಸ ದೀಕ್ಷಾ ಮೆರವಣಿಗೆ ನಡೆಸಿದರು. ಇವರಿಗೆ ಹಿರಿಯ ಸಹೋದರಿ ರಿಂಕು ಮತ್ತು ಸಹೋದರ ಪಿಂಟು ಜೈನ್ ಇದ್ದಾರೆ. ಮೇ 22ರಂದು ಸೂರತ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೈನ ಶ್ವೇತಾಂಬರ ಗುರುಗಳಿಂದ ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ.

ಸ್ಥಳೀಯ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಅಭ್ಯಸಿಸಿದ್ದಾರೆ. ಬಳಿಕ 2012ರಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಬಿಎಂ ಪದವಿ ಪೂರೈಸಿದ್ದಾರೆ. ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಪದವೀಧರೆ ಪೂಜಾ ಅವರೂ ಸನ್ಯಾಸ ದೀಕ್ಷೆ ಪಡೆದಿದ್ದರು.

ಭಾನುವಾರ ಜೈನರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ವಿವಿಧ ವಸ್ತುಗಳನ್ನು ದಾನ ಮಾಡಿದರು. ಬಣಗಾರಪೇಟೆ, ಗೌಳೇರಪೇಟೆ, ಸಿನಿಮಾ ಮಂದಿರ ರಸ್ತೆ, ಕೊಟ್ಟೂರು ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಜೈನ ಸಮುದಾಯದವರು ದೀಕ್ಷಾ ಮೆರವಣಿಗೆಯಲ್ಲಿ ಧಾರ್ಮಿಕ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.

‘ಶಾಂತಿ, ನೆಮ್ಮದಿ ಕಲ್ಪಿಸದ ಸಂಸಾರದಲ್ಲಿ ಏನೂ ಇಲ್ಲ. ಇಲ್ಲಿ ಎಲ್ಲರೂ ಆಸ್ತಿ ಅಂತಸ್ತಿಗಾಗಿ ಜೀವನ ನಡೆಸುತ್ತಾ ಪಪೋಟಿ ನಡೆಸುತ್ತಿದ್ದಾರೆ. ಅದೇ ದೀಕ್ಷೆ ಪಡೆದರೆ ಅಲ್ಲಿ ಭಗವಂತನ ಸನ್ನಿಧಿಯ ಪ್ರೀತಿ, ಶಾಂತಿ, ನೆಮ್ಮದಿ ಲಭಿಸುತ್ತದೆ. ಅದಕ್ಕಿಂತ ಹೆಚ್ಚಿನದಾಗಿ ಲೋಕ ಕಲ್ಯಾಣ, ಆತ್ಮ ಕಲ್ಯಾಣದ ಕೆಲಸಕ್ಕೆ ಸಹಕಾರಿ ಆಗುತ್ತದೆ’ ಎಂದು ಪ್ರೀತಿ ಚೋಪ್ರಾ ‘ಪ್ರಜಾವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡರು.

ಮೆರವಣಿಗೆಯಲ್ಲಿ ವೀರಚಂದ್, ವಿಮಲಾದೇವಿ, ಯು.ಪಿ. ನಾಗರಾಜ್ ಜೈನ್, ಸುಮೇರಿಮಲ್ ಜೈನ್, ಗೌತಮ್ ಚಂದ್, ಕಾಂತಿಲಾಲ್, ಪ್ರಸನ್ನಕುಮಾರ ಜೈನ್, ಅಶೋಕ ಕುಮಾರ್, ಮಹಾವೀರ ಭಂಡಾರಿ, ಹನುಮಾನ್ ಚಂದ್, ಉತ್ತಮ್ ಚಂದ್ ಜೈನ್
ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು