ಗುರುವಾರ , ಆಗಸ್ಟ್ 11, 2022
23 °C
ಕೃಷಿ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

ಬಿ.ಸಿ.ಪಾಟೀಲ್ ಕ್ಷಮೆಯಾಚನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹಗುರವಾಗಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಸಮಿತಿ ಪದಾಧಿಕಾರಿಗಳು ನಗರದ ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬಿ.ಸಿ. ಪಾಟೀಲ್ ವಿಧಾನಸೌಧದಿಂದಲೇ ತೊಲಗಲಿ ಎಂದು ಘೋಷಣೆ ಕೂಗಿದರು. ಸಚಿವರ ಭಾವಚಿತ್ರವಿದ್ದ ಫ್ಲೆಕ್ಸ್ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಯೂರಿಯಾ ಗೊಬ್ಬರದ ಅಭಾವ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ ಅಗ್ರಿ ಪದವಿಯಲ್ಲಿ ಈ ಹಿಂದೆ ಕೃಷಿಕರ ಮಕ್ಕಳಿಗೆ ಇದ್ದ ತಲಾ ಶೇ 40ರ ಕೋಟಾ ತೆಗೆದುಹಾಕಿದ್ದನ್ನು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಕ್ಕೆ ಅವರನ್ನು ಸಚಿವರು ಅವಹೇಳನ ಮಾಡಿದ್ದು ಸರಿಯಲ್ಲ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ತಿಳಿಸಿದರು.

‘ನಂಜುಂಡಸ್ವಾಮಿ, ಪುಟ್ಟಣ್ಣಯ್ಯ ಮೊದಲಾದವರ ಜತೆ ಗುರುತಿಸಿಕೊಂಡು ಹೋರಾಟ ಮಾಡಿ, ಯಾವುದೇ ಅಧಿಕಾರದಾಸೆ ಇಲ್ಲದ ಕೋಡಿಹಳ್ಳಿ ಅವರನ್ನು ಅವಹೇಳನ ಮಾಡಿದ್ದು ಸರಿಯಲ್ಲ. ಅವರು ಕ್ಷಮೆ ಕೇಳದಿದ್ದರೆ ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಲಾಗುವುದು’ ಎಂದು ಎಚ್ಚರಿಸಿದರು.

ಪೊಲೀಸ್ ಅಧಿಕಾರಿಯಾಗಿ, ನಂತರ ಪಕ್ಷದಿಂದ ಪಕ್ಷಕ್ಕೆ ಹಾರಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದವರಿಗೆ ರೈತರ ಸಮಸ್ಯೆ ಅರ್ಥವಾಗುವುದಾದರೂ ಹೇಗೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಹನುಮೇಶಿ, ಶತಕೋಟಿ ಬಸವರಾಜ್, ಮಲ್ಲಶೆಟ್ಟಿಹಳ್ಳಿ ಮಂಜುನಾಥ್, ಬಸವಾಪಟ್ಟಣ ಬಸವರಾಜ್, ಗುರುಸಿದ್ದಾಪುರ ಸಿದ್ದೇಶ್, ದಾಗಿನಕಟ್ಟೆ ಸಂತೋಷ್‌ಕುಮಾರ್, ಬುಳ್ಳಾಪುರ ಶಿವಣ್ಣ, ಕಲೀಂಸಾಬ್, ಕೃಷ್ಣಮೂರ್ತಿ, ದಾಗಿನಕಟ್ಟೆ ಬಸವರಾಜ್, ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು