ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿನಲ್ಲಿ ರೈತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ

ಮಳೆಗಾಲದ ಪೂರ್ವಸಿದ್ಧತಾ ಕ್ರಮಗಳ ಕುರಿತ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
Last Updated 9 ಮೇ 2021, 5:24 IST
ಅಕ್ಷರ ಗಾತ್ರ

ದಾವಣಗೆರೆ: ಮಳೆ ಆರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆ ಶುರುವಾಗುತ್ತದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಮತ್ತು ಇತರೆ ಪರಿಕರಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೊರತೆ ಇದ್ದರೆ ನನಗೆ ತಿಳಿಸಬೇಕು. ಶೀಘ್ರವೇ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 2,44,297 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಇದೆ. ಪ್ರಮುಖ ಬೆಳೆಗಳಾದ ಭತ್ತ 66,037 ಹೆಕ್ಟೇರ್‌, ಜೋಳ 2,400 ಹೆಕ್ಟೇರ್‌, ಮುಸಿಕಿನ ಜೋಳ 1,26,708 ಹೆಕ್ಟೇರ್‌, ರಾಗಿ 7,295 ಹೆಕ್ಟೇರ್‌, ತೊಗರಿ 7,215 ಹೆಕ್ಟೇರ್‌, ಶೇಂಗಾ 13,775 ಹೆಕ್ಟೇರ್‌, ಸೂರ್ಯಕಾಂತಿ 2,190 ಹೆಕ್ಟೇರ್‌, ಹತ್ತಿ 10,327 ಹೆಕ್ಟೇರ್‌ ಮತ್ತು ಕಬ್ಬು 1,529 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇದೆ ಎಂದು ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ವಿವರಿಸಿದರು.

ಕೃಷಿ ಇಲಾಖೆಯ 20 ರೈತ ಸಂಪರ್ಕ ಕೇಂದ್ರಗಳು ಹಾಗೂ 10 ಹೆಚ್ಚುವರಿ ವಿತರಣಾ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಹಾಗೂ ಕಾಪು ದಾಸ್ತಾನು ಸಂಸ್ಥೆಯವರೊಡನೆ ಸಭೆ ನಡೆಸಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಲಾರಿ ಮಾಲೀಕರ ಸಂಘದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಸಗೊಬ್ಬರಗಳ ಸುಗಮ ಸರಬರಾಜಿಗೆ ಕ್ರಮ ವಹಿಸಲಾಗಿದೆ. ಕೃಷಿ ಪರಿಕರ ಮಾರಾಟಗಾರರು ಮತ್ತು ಕೃಷಿ ಯಂತ್ರಧಾರೆ ಕೇಂದ್ರದವರಿಗೆ 534 ಗ್ರೀನ್ ಪಾಸ್ ವಿತರಿಸಲಾಗಿದೆ ಎಂದರು.

ಬಿತ್ತನೆ ಬೀಜಗಳ ಬೇಡಿಕೆ 40,521 ಕ್ವಿಂಟಾಲ್ ಇದೆ. ಪ್ರಸ್ತುತ 35,515.50 ಕ್ವಿಂಟಾಲ್ ದಾಸ್ತಾನಿದೆ. ಇದರಲ್ಲಿ 35.52 ಕ್ವಿಂಟಾಲ್ ವಿತರಣೆಯಾಗಿದೆ. ರಸಗೊಬ್ಬರ ಒಟ್ಟು 22650 ಟನ್ ಬೇಡಿಕೆ ಇದೆ. 38,557 ಟನ್ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

ಡಿಐಪಿ ಗೊಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ. ಕೇಂದ್ರದ ರಸಗೊಬ್ಬರ ಸಚಿವರು ಹಳೇ ದಾಸ್ತಾನಿಗೆ ಹಳೇ ದರದಲ್ಲೇ ಮಾರಾಟ ಮಾಡಬೇಕೆಂದು ತಿಳಿಸಿದ್ದಾರೆ. ಹಾಗೂ ಸರ್ಕಾರ ನಿಗದಿಪಡಿಸಿದ ದರದಲ್ಲೇ ಗೊಬ್ಬರ ಮಾರಾಟ ಆಗಬೇಕು ಎಂದು ಸಂಸದರು ಸೂಚಿಸಿದರು.

ಬಾಳೆ, ಮಾವು, ನಿಂಬೆ, ಕಲ್ಲಂಗಡಿ, ಪಪ್ಪಾಯ, ದಾಳಿಂಬೆ, ಪೇರಲೆ ಮತ್ತು ಸಪೋಟ ಸೇರಿ ಒಟ್ಟಾರೆ 2,081 ಹೆಕ್ಟೇರ್ ಪ್ರದೇಶದಲ್ಲಿ 29,131 ಮೆಟ್ರಿಕ್ ಟನ್ ಬೆಳೆಯಲಾಗಿದೆ. ಇದರಲ್ಲಿ ಹೆಚ್ಚಾಗಿ ಬಾಳೆ 807 ಮತ್ತು ಮಾವು 1,148 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಟೊಮ್ಯಾಟೊ, ಈರುಳ್ಳಿ, ಹಸಿಮೆಣಸು, ಬದನೆ, ಬೆಂಡಕಾಯಿ, ಕೋಸು, ಪರಂಗಿ, ಬೂದುಗುಂಬಳ, ಕ್ಯಾಪ್ಸಿಕಂ ಮತ್ತು ಇತರೆ ತರಕಾರಿಗಳನ್ನು 2,922 ಹೆ. ಪ್ರದೇಶದಲ್ಲಿ 79,132 ಮೆಟ್ರಿಕ್ ಟನ್ ಬೆಳೆಯಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮನ್ನರ್ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಸೈಯದ್ ಖಲೀಂ, ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ, ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಪಾಪಣ್ಣ, ಮಹಾಂತೇಶ, ಕೃಷ್ಣಮೂರ್ತಿ, ಸುರೇಶ್, ಸೋಮಶೇಖರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT