ಶುಕ್ರವಾರ, ಜೂನ್ 25, 2021
21 °C
ದಾವಣಗೆರೆ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಆಕ್ಷೇಪ

ಸೋಂಕು ವ್ಯಾಪಿಸಿದ ಕಾಲದಲ್ಲೂ ಬಿ.ಇಡಿ ಪರೀಕ್ಷೆ

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಎರಡನೇ ಅಲೆಯಿಂದಾಗಿ ರಾಜ್ಯ ಸರ್ಕಾರ ಮೇ 4ರ ವರೆಗೆ ಎಲ್ಲಾ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿದೆ. ಕೆಲವು ವಿಶ್ವವಿದ್ಯಾಲಯಗಳು ಪರೀಕ್ಷೆಯನ್ನು ಮುಂದೂಡಿವೆ. ಈ ನಡುವೆ ದಾವಣಗೆರೆ ವಿಶ್ವವಿದ್ಯಾಲಯ ಸದ್ದಿಲ್ಲದೇ ಬಿ.ಇಡಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿರುವುದು ವಿದ್ಯಾರ್ಥಿಗಳು ಆತಂಕಕ್ಕೆ ಕಾರಣವಾಗಿದೆ.

ಶನಿವಾರವೇ (ಏ.24) ಪರೀಕ್ಷೆ ಆರಂಭವಾಗಬೇಕಿತ್ತು. ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದರಿಂದ ಆ ದಿನ ನಡೆಯಬೇಕಿದ್ದ ವಿಷಯದ ಪರೀಕ್ಷೆಯನ್ನು ಮಾತ್ರ ಮೇ 4ಕ್ಕೆ ಮುಂದೂಡಲಾಗಿದೆ. ಉಳಿದ ವಿಷಯಗಳ ಪರೀಕ್ಷೆ ಮತ್ತೆ ಸೋಮವಾರದಿಂದ (ಏ. 26) ನಿಗದಿಯಾಗಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣ.

ಈ ಹಿಂದೆ ಏಪ್ರಿಲ್ 19ಕ್ಕೆ ಪರೀಕ್ಷೆ ನಿಗದಿಯಾಗಿತ್ತು. ಕೊರೊನಾ ಎರಡನೇ ಅಲೆ ಹಾಗೂ ಸಾರಿಗೆ ನೌಕರರ ಮುಷ್ಕರದ ಕಾರಣದಿಂದ ಆಗ ಒಮ್ಮೆ ಮುಂದೂಡಲಾಯಿತು. ಇದಾದ ಮೂರೇ ದಿನಗಳಲ್ಲಿ ಪರೀಕ್ಷೆ ನಡೆಸುವ ಬಗ್ಗೆ ವೇಳಾಪಟ್ಟಿಯನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗಿದೆ. ಇದರಿಂದಾಗಿ ದೂರದ ಬಳ್ಳಾರಿ, ರಾಯಚೂರು, ಕೊಪ್ಪಳದಿಂದ ಬರುವ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. 

‘ಕೋವಿಡ್ ಕಾರಣದಿಂದ ಹಾಸ್ಟೆಲ್‌ಗಳು ಮುಚ್ಚಿದ್ದು, ಪ್ರಶಿಕ್ಷಣಾರ್ಥಿಗಳು ಉಳಿದುಕೊಳ್ಳಲು ಪಟ್ಟಣದ ವಸತಿಗೃಹಗಳಲ್ಲಿ ಯಾವುದೇ ಕೊಠಡಿಗಳನ್ನು ಕೊಡುತ್ತಿಲ್ಲ. ದೂರದ ಜಿಲ್ಲೆಗಳಿಂದ ಬರುವವರಿಗೆ ತೊಂದರೆಯಾಗಿದೆ. ಸಮಯಕ್ಕೆ ಸರಿಯಾಗಿ ಬಂದು ಪರೀಕ್ಷೆ ಬರೆಯುವುದಾದರೂ ಹೇಗೆ’ ಎಂಬುದು ದೂರದ ಜಿಲ್ಲೆಗಳ ವಿದ್ಯಾರ್ಥಿಗಳ ಪ್ರಶ್ನೆ.

‘ಹಿಂದಿನ ವರ್ಷಗಳಲ್ಲಿ ಪ್ರಶಿಕ್ಷಣಾರ್ಥಿಗಳು ತರಬೇತಿಯಲ್ಲಿ ತಯಾರಿಸಿದ್ದ ದಾಖಲೆಗಳನ್ನು ಸಮನ್ವಯ ಸಮಿತಿ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ 15 ದಿನಗಳಲ್ಲೇ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಫೆಬ್ರುವರಿ ತಿಂಗಳಲ್ಲೇ ಸಮನ್ವಯ ಸಮಿತಿ ಭೇಟಿ ನೀಡಿತ್ತು. ಒಂದೂವರೆ ತಿಂಗಳು ಕಳೆದರೂ ಪರೀಕ್ಷೆ ನಡೆಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೇ ತಾತ್ಸಾರ ಮಾಡಲಾಗಿದೆ’ ಎಂಬುದು ವಿದ್ಯಾರ್ಥಿಗಳ ಆರೋಪ.

‘ಪರೀಕ್ಷೆ ನಡೆಸಿ ಎಂದು ವಿದ್ಯಾರ್ಥಿಗಳು ಒತ್ತಾಯ ಮಾಡಬಹುದು. ಆದರೆ ವಿಶ್ವವಿದ್ಯಾಲಯಕ್ಕೆ ಜವಾಬ್ದಾರಿ ಇರಬೇಕಲ್ಲವೇ? ಅಲ್ಲದೇ ಒಂದು ಕೊಠಡಿಗೆ 60 ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸುತ್ತಿದ್ದಾರೆ’ ಎಂದು ಪ್ರಶಿಕ್ಷಣಾರ್ಥಿಯೊಬ್ಬರು ಆರೋಪಿಸಿದ್ದಾರೆ.

‘ಮಾರ್ಚ್ ತಿಂಗಳಲ್ಲಿ ಬಿ.ಎ, ಬಿ.ಎಸ್ಸಿ ಪದವಿ ಪರೀಕ್ಷೆಗಳು ಪ್ರಾರಂಭವಾದವು. ಆಗಲೇ ಬಿ.ಇಡಿ ಪರೀಕ್ಷೆಯನ್ನು ಮುಗಿಸಬಹುದಿತ್ತು. ಕೊರೊನಾ ಸೋಂಕು ವ್ಯಾಪಿಸುತ್ತಿರುವಾಗ ಪರೀಕ್ಷೆ ದಿನಾಂಕ ಪ್ರಕಟಿಸಿದೆ. ಬಡಕುಟುಂಬಗಳು ಕೊರೊನ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಹೆಚ್ಚಿನ ಪರೀಕ್ಷಾ ಶುಲ್ಕವನ್ನು ವಸೂಲಿ ಮಾಡಿದೆ’ ಎಂಬುದು ಪ್ರಶಿಕ್ಷಣಾರ್ಥಿಗಳ ಮತ್ತೊಂದು ದೂರು.

ವಿದ್ಯಾರ್ಥಿಗಳ ಒತ್ತಾಯದಿಂದಲೇ ಪರೀಕ್ಷೆ

‘ಬಿ.ಇಡಿ ಈಗ ಮೂರು ವರ್ಷದ ಕೋರ್ಸ್ ಆಗಿದ್ದು, ವಿದ್ಯಾರ್ಥಿಗಳು ಒತ್ತಾಯದ ಕಾರಣದಿಂದ ಪರೀಕ್ಷೆ ನಡೆಸುತ್ತಿದ್ದೇವೆ. ಕಳೆದ ಬಾರಿ ಕೋವಿಡ್ ಕಾರಣದಿಂದ ಪರೀಕ್ಷೆ ನಡೆದಿಲ್ಲ. ಪರೀಕ್ಷೆ ನಡೆಸಲು 31 ಕಾಲೇಜುಗಳಲ್ಲಿ 29 ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆ ನಡೆಸಲು ಒತ್ತಾಯಿಸಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಪತ್ರದಲ್ಲಿ ಸಹಿ ಮಾಡಿ ಕೊಟ್ಟಿದ್ದರಿಂದ ಪರೀಕ್ಷೆ ನಡೆಸುತ್ತಿದ್ದೇವೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಪ್ರೊ. ಅನಿತಾ ಎಚ್‌.ಎಸ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಏ. 19ರಂದು ಇದ್ದ ಪರೀಕ್ಷೆಯನ್ನು ಏ.24ಕ್ಕೆ ಮುಂದೂಡಲಾಯಿತು. ಸಿಂಡಿಕೇಟ್‌ನಲ್ಲಿ ಈ ವಿಷಯವನ್ನು ಇಟ್ಟು ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳೂ ಅನುಮತಿ ನೀಡಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಿದ್ದಾರೆ. ಈ ಹಿಂದೆ ಮುಚ್ಚಿದ್ದ ಹಾಸ್ಟೆಲ್‌ಗಳು ಆರಂಭವಾದ್ದರಿಂದ ವಿದ್ಯಾರ್ಥಿಗಳೇ ಪರೀಕ್ಷೆ ಮಾಡಿ ಎಂದು ಒತ್ತಾಯಿಸಿದ್ದರಿಂದ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲಾಯಿತು’ ಎಂದು ಹೇಳಿದರು.

‘ಬಳ್ಳಾರಿ ವಿದ್ಯಾರ್ಥಿಗಳು ಯಾರೂ ಇಲ್ಲ. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅವರ ಹತ್ತಿರದ ಸ್ಥಳಗಳಲ್ಲಿ 28 ಪರೀಕ್ಷಾ ಕೇಂದ್ರಗಳನ್ನು ಆರಂಭಿಸಿದ್ದೇವೆ.  ಒಂದು ವೇಳೆ ರಾಜ್ಯ ಸರ್ಕಾರ ಪುನಃ ಲಾಕ್ ಡೌನ್ ಘೋಷಣೆ ಮಾಡಿದರೆ ಪರೀಕ್ಷೆಯನ್ನು ಮುಂದೂಡುತ್ತೇವೆ. ಈ ಕುರಿತು ಸ್ಟೂಡೆಂಟ್ ಪೋರ್ಟಲ್‌ಗಳು ಹಾಗೂ ಪ್ರಾಂಶುಪಾಲರ ವಾಟ್ಸ್ಆ್ಯಪ್ ಗ್ರೂಪ್‌ಗಳಿಗೆ ಸಂದೇಶ ಕಳುಹಿಸುತ್ತೇವೆ’ ಎಂದು ಸಮರ್ಥಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು