ಭಾನುವಾರ, ನವೆಂಬರ್ 29, 2020
23 °C
ಪೂಜೆಗೆ ಅಡ್ಡಿಪಡಿಸಿದ ಅರ್ಚಕರ ಕುಟುಂಬದ 18 ಮಂದಿ ವಶಕ್ಕೆ ಪಡೆದ ಪೊಲೀಸರು

ಬಿಗಿ ಭದ್ರತೆಯಲ್ಲಿ ದಾವಣಗೆರೆ ಬೀರಲಿಂಗೇಶ್ವರ ದೇವಾಲಯ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಾಗದ ವಿವಾದ ಹಾಗೂ ಅರ್ಚಕರೊಬ್ಬರ ವಜಾ ಕಾರಣಗಳಿಂದ ಹಲವು ತಿಂಗಳುಗಳಿಂದ ಮುಚ್ಚಿದ್ದ ಇಲ್ಲಿನ ಬೀರಲಿಂಗೇಶ್ವರ ದೇವಸ್ಥಾನದ ಬಾಗಿಲು ತೆರೆಯುವ ವೇಳೆ ಅಡ್ಡಿಪಡಿಸಿದ ಅರ್ಚಕರ ಕುಟುಂಬದ 18 ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು.

ಶನಿವಾರ ಮುಂಜಾನೆಯೇ ಆಡಳಿತಾಧಿಕಾರಿ ಗ್ರಾಮ ಲೆಕ್ಕಿಗ ರೋಹಿತ್ ನೇತೃತ್ವದಲ್ಲಿ ಕಂದಾಯ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು  ಇಲ್ಲಿನ ಪಿ.ಜೆ.ಬಡಾವಣೆಯ ಬಳಿ ಇರುವ ದೇವಾಲಯದ ಬಾಗಿಲು ತೆರೆಯಲು ಮುಂದಾದರು. ಆ ವೇಳೆ ಅರ್ಚಕ ಬಿ.ಪಿ. ಲಿಂಗೇಶ್ ಸೇರಿ ಅವರ ಕುಟುಂಬದ ಸದಸ್ಯರು ವಾಗ್ವಾದಕ್ಕಿಳಿದರು. ಅಧಿಕಾರಿಗಳು ಅವರ ಮನವೊಲಿಸುವ ಪ್ರಯತ್ನ ನಡೆಸಿದರೂ ಸುಮ್ಮನಾಗಲಿಲ್ಲ. ಆಗ ಸ್ಥಳಕ್ಕೆ ಬಂದ ಪೊಲೀಸರು ಪುರುಷರು, ಮಹಿಳೆಯರು ಎನ್ನದೇ ಅರ್ಚಕರು ಹಾಗೂ ಕುಟುಂಬದವರನ್ನು ಎಳೆದು ಹಾಕುತ್ತಿದ್ದರು. ಆಗ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಏನಿದು ವಿವಾದ?: ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ಬಿ.ಪಿ.ಲಿಂಗೇಶ್ ಹಲವು ವರ್ಷಗಳಿಂದ ಪೂಜೆ ಸಲ್ಲಿಸುತ್ತಿದ್ದರು. ಭಕ್ತರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಕಾರಣ ಜೂನ್‌ ತಿಂಗಳಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಲಿಂಗೇಶ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದರು.

ಇದನ್ನು ಪ್ರಶ್ನಿಸಿ ಲಿಂಗೇಶ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸೂಕ್ತ ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿದ್ದರು. ಆನಂತರ ಮರು ವಿಚಾರಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಮರು ವಿಚಾರಣೆ ವೇಳೆ ಲಿಂಗೇಶ್ ಸೂಕ್ತ ಪ್ರತಿಕ್ರಿಯ ನೀಡಿರಲಿಲ್ಲ. ಇದರಿಂದಾಗಿ ಈ ಹಿಂದಿನ ಆದೇಶದಂತೆಯೇ ಮುಂದುವರಿಯಲು ತೀರ್ಮಾನಿಸಲಾಗಿತ್ತು.

ದೇವಾಲಯದ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಭಕ್ತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಡಿಸಿ ಆದೇಶದಂತೆ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರನ್ನು ತಾತ್ಕಾಲಿಕವಾಗಿ ನೇಮಿಸಿ ದೇವಾಲಯದ ಬಾಗಿಲು ತೆರೆಯಲಾಯಿತು. ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಹಾಗೂ ತಹಶೀಲ್ದಾರ್ ಕೆ.ಎಸ್‌.ಗಿರೀಶ್ ನೇತೃತ್ವ ವಹಿಸಿದ್ದರು.

ಅರ್ಚಕ ಲಿಂಗೇಶ್ ಮಾತನಾಡಿ, ‘ಸೋಮವಾರ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ದೇವಾಲಯದಲ್ಲಿ ಪೂಜೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷ್ಯ ತೋರಿಸಲು ಅಧಿಕಾರಿಗಳು ದೇವಾಲಯದ ಬಾಗಿಲು ತೆರೆದಿದ್ದಾರೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ‘ಈ ಆರೋಪ ಸುಳ್ಳು. ಕೋವಿಡ್ ಕಾರಣದಿಂದ ದೇವಾಲಯಗಳು ಹಲವು ತಿಂಗಳು ಮುಚ್ಚಿದ್ದವು. ಸರ್ಕಾರದ ಆದೇಶದ ನಂತರ ದೇವಾಲಯದ ಬಾಗಿಲು ತೆರೆಯಲಾಗಿದೆ. ಅರ್ಚಕರ ಕುಟುಂಬದವರು ವಿರೋಧ ವ್ಯಕ್ತಪಡಿಸುತ್ತಿದ್ದುದರಿಂದ ಸಾಮರಸ್ಯ ಕಾಪಾಡಲು ದೇವಾಲಯವನ್ನು ತೆರೆದಿರಲಿಲ್ಲ’ ಎಂದು ಸಮಜಾಯಿಷಿ ನೀಡಿದರು.

‘ಬೀರಲಿಂಗೇಶ್ವರ ದೇವಾಲಯ ಪುರಾತನ ದೇವಾಲಯವಾಗಿದ್ದು, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಬಿ.ಪಿ.ಲಿಂಗೇಶ್ ಅವರ ತಂದೆ ಬಸವರಾಜಪ್ಪ ಪೂಜೆ ಸಲ್ಲಿಸುತ್ತಿದ್ದರು. ತಂದೆಯ ನಂತರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಬಿ.ಪಿ.ಲಿಂಗೇಶ್ ಅವರನ್ನು ನೇಮಕ ಮಾಡಿತ್ತು. ಅಲ್ಲದೇ ದೇವಾಲಯದ ಹಿಂಭಾಗದಲ್ಲೇ ಅವರ ಕುಟುಂಬಕ್ಕೆ ವಾಸಿಸಲು ಮನೆಯನ್ನು ಕಟ್ಟಿಕೊಡಲಾಗಿತ್ತು. ದೇವಾಲಯದ ಸುತ್ತಮುತ್ತ 4.10 ಎಕರೆ ಜಾಗವಿದ್ದು, ಈ ಜಾಗ ತಮ್ಮದೇ ಎಂದು ಹೇಳಿ ಲಿಂಗೇಶ್ ಹೈಕೋರ್ಟ್ ಮೊರೆ ಹೋಗಿದ್ದಾರೆ’ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು