ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತಮ ಮಳೆ: ಅಡಿಕೆ ತೋಟಗಳಿಗೆ ಜೀವಕಳೆ

ಕೆರೆ ಕಟ್ಟೆಗಳಿಗೆ ಜೀವ ಕಳೆ, ಅಂತರ್ಜಲ ಮಟ್ಟ ಏರಿಕೆ
Published 3 ಜೂನ್ 2024, 7:42 IST
Last Updated 3 ಜೂನ್ 2024, 7:42 IST
ಅಕ್ಷರ ಗಾತ್ರ

ಚನ್ನಗಿರಿ: ಅಡಿಕೆ ನಾಡಿನ ಖ್ಯಾತಿಯ ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಅಡಿಕೆ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ. 

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಿಂದಾಗಿ ಕೆರೆ ಕಟ್ಟೆಗಳು ತುಂಬದೇ ಅಡಿಕೆ ಬೆಳೆಗಾರರು ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಮಳೆಯಾಗಿರುವುದರಿಂದ ಅಡಿಕೆ ತೋಟಗಳಿಗೆ ಜೀವ ಬಂದಿದೆ.

ಕಳೆದ ವರ್ಷ ಜನವರಿ ತಿಂಗಳಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಅಡಿಕೆ ಬೆಳೆಗಾರರು ಅಡಿಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ಮೊರೆ ಹೋಗಿದ್ದರು. ಐದು ತಿಂಗಳಲ್ಲಿ ಕೋಟ್ಯಂತರ ಹಣವನ್ನು ಇದಕ್ಕೆ ವ್ಯಯಿಸಿ‌‌ದ್ದರು.

ಕಳೆದ ವರ್ಷ ಮಳೆ ಕೊರತೆಯಿಂದಾಗಿ 1 ಎಕರೆ ಅಡಿಕೆ ತೋಟದಲ್ಲಿ ಕೇವಲ 9 ರಿಂದ 10 ಕ್ವಿಂಟಲ್ ಅಡಿಕೆ ಇಳುವರಿ ಬಂದಿತ್ತು. ಉತ್ತಮ ಮಳೆಯಾದರೆ 1 ಎಕರೆ ಅಡಿಕೆ ತೋಟದಲ್ಲಿ 15ರಿಂದ 16 ಕ್ವಿಂಟಲ್ ಅಡಿಕೆ ಇಳುವರಿ ಬರುತ್ತದೆ. ಅಡಿಕೆ ಇಳುವರಿ ಕುಸಿತದ ಜತೆಗೆ ಅಂತರ್ಜಲ ಮಟ್ಟ ಕೊರತೆಯಿಂದಾಗಿ ಟ್ಯಾಂಕರ್ ಗಳ ಮೂಲಕ ನೀರು ತಂದು ತೋಟಗಳನ್ನು ಉಳಿಸಿಕೊಳ್ಳಬೇಕಾಗಿತ್ತು.

ಬಿಸಿಲಿನ ತಾಪಕ್ಕೆ ಅಡಿಕೆ ಕಾಯಿಗಳು ಉದುರಿದ್ದವು. ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸಿದರೂ ಕಾಯಿ ಉದುರುವುದು ಮಾತ್ರ ಕಡಿಮೆಯಾಗಿರಲಿಲ್ಲ. ಪೂರ್ವ ಮುಂಗಾರು ಮಳೆಯಾಗಲಿ ಎಂದು ರೈತರು ಮಳೆರಾಯನ ಆಗಮನದ ನಿರೀಕ್ಷೆಯಲ್ಲಿ ಇದ್ದರು. ಅಂತು ಕೊನೆಗೆ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಅಡಿಕೆ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಸಾಮಾನ್ಯವಾಗಿ ಮೇ ತಿಂಗಳಲ್ಲಿ 114.6 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, ಈ ಬಾರಿ ತಾಲ್ಲೂಕಿನಲ್ಲಿ 171.4 ಮಿ.ಮೀ. ಮಳೆಯಾಗಿದೆ. ಕೆಲವು ಗ್ರಾಮಗಳಲ್ಲಿ ಕೆರೆಕಟ್ಟೆಗಳು ತುಂಬಿದ್ದು, ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ.

ಮಳೆಯಿಂದಾಗಿ ಅಡಿಕೆ ಕಾಯಿ ಉದುರುವುದು ಕಡಿಮೆಯಾಗಿದೆ. ಆಗಸ್ಟ್ ತಿಂಗಳಿಂದ ಅಡಿಕೆ ಕೊಯ್ಲು ಆರಂಭವಾಗಲಿದೆ. ಮುಂಗಾರು ಮಳೆ ಪ್ರಾರಂಭವಾದರೆ ಅಡಿಕೆ ಬೆಳೆಗಾರರಿಗೆ ಮತ್ತಷ್ಟು ಅನುಕೂಲವಾಗಲಿದೆ. ಪ್ರಸ್ತುತ 1 ಕ್ವಿಂಟಲ್ ಅಡಿಕೆ ದರ ₹ 51,000ದಿಂದ ₹ 53,000 ಇದ್ದು, ಅಡಿಕೆಯನ್ನು ಸಂಗ್ರಹ ಮಾಡಿದ ಬೆಳೆಗಾರರು ಅಡಿಕೆ ಮಾರಾಟ ಮಾಡುತ್ತಿದ್ದಾರೆ. ಉತ್ತಮ ದರ ‌ಇರುವುದರಿಂದ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಅಡಿಕೆ ಬೆಳೆಗಾರ ‌ದಿಗ್ಗೇನಹಳ್ಳಿಯ ಅಜ್ಜಪ್ಪ ಖುಷಿಯಿಂದ ಹೇಳಿದರು.

ಜೂನ್ ತಿಂಗಳ ಮೊದಲ ವಾರದಿಂದ ಮುಂಗಾರು ಮಳೆ ಆರಂಭಗೊಳ್ಳಲಿದ್ದು ಬೆಳೆಗಾರರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ.
ಶ್ರೀಕಾಂತ್ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT