ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಕ್ಷೇತ್ರ ಕಲುಷಿತಗೊಳಿಸಿದ ಕಾಂಗ್ರೆಸ್‌

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ
Published 25 ಮೇ 2024, 16:28 IST
Last Updated 25 ಮೇ 2024, 16:28 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದುಗೊಳಿಸಿ ಎಸ್‌ಇಪಿ ಜಾರಿಗೆ ಮುಂದಾಗುವ ಮೂಲಕ ಶಿಕ್ಷಣ ಕ್ಷೇತ್ರದ ಪಾವಿತ್ಯವನ್ನು ಹಾಳುಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ತಾಲ್ಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ವಿಧಾನಪರಿಷತ್ ಚುನಾವಣೆಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಒಂದು ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮೂಲಕ ಹಾಳು ಮಾಡುವ ಕೆಲಸ ಮಾಡುತ್ತಿದೆ. ಶಿಕ್ಷಣ ಸಚಿವರನ್ನು ಬದಲಾವಣೆ ಮಾಡುವಂತೆ ಶಿಕ್ಷಕರೇ ಒತ್ತಾಯಿಸುತ್ತಿರುವ ಮಟ್ಟಿಗೆ ಶಿಕ್ಷಣ ಕ್ಷೇತ್ರ ಹಾಳಾಗಿದೆ. ಇದು ನಮ್ಮ ದೌರ್ಭಾಗ್ಯ. ರಾಜ್ಯದ ಶಿಕ್ಷಣ ಸಚಿವರಿಗೇ ಕನ್ನಡ ಬರುವುದಿಲ್ಲ’ ಎಂದು ಅವರು ದೂರಿದರು. 

ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಲಾಗಿತ್ತು. 2005–06ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದು ₹4,800 ಕೋಟಿ ಅನುದಾನ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮೀಸಲಿಟ್ಟಿದ್ದು ₹ 18,666 ಕೋಟಿ ಅನುದಾನ. ಶಿಕ್ಷಕರಿಗೆ ವೈದ್ಯಕೀಯ ಭತ್ಯೆ, 1000 ಪ್ರೌಢಶಾಲೆಗಳು, 530 ಪದವಿ ಪೂರ್ವ ಕಾಲೇಜು ಸೇರಿದಂತೆ 2000 ಪದವಿ ಪೂರ್ವ ಉಪನ್ಯಾಸಕರ ನೇಮಕ ಆಗಿದ್ದು ಬಿಜೆಪಿ ಸರ್ಕಾರದ ಆಡಳಿತದಲ್ಲಿ. ಕಾಂಗ್ರೆಸ್‌ ಸರ್ಕಾರದಿಂದ ಇಂತಹ ಯಾವುದೇ ಕೊಡುಗೆ ನೀಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಅನೇಕರು ಜಾತಿ ಹೆಸರಿನಲ್ಲಿ ಸ್ಥಾನಮಾನ ಪಡೆದರೂ ಸಮುದಾಯಕ್ಕೆ ನ್ಯಾ‌ಯ ಒದಗಿಸಿಲ್ಲ. ವೈ.ಎ. ನಾರಾಯಣಸ್ವಾಮಿ ಅವರು ಯಾವುದೇ ಜಾತಿ, ಸಮುದಾಯ ನೋಡದೇ ಶಿಕ್ಷಕರ ಸಮಸ್ಯೆಗೆ ಸ್ಫಂದಿಸುತ್ತಿದ್ದಾರೆ. ಎಲ್ಲ ವರ್ಗದ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕೆಲಸ ಮಾಡಿಕೊಡುತ್ತಾರೆ. ಅಂತಹವರು ಇಂತಹ ಕ್ಷೇತ್ರಕ್ಕೆ ಅಗತ್ಯ ಒದೆ. ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆ ಬಿಟ್ಟು ಉಳಿದ ಎಲ್ಲ ಯೋಜನೆಗಳನ್ನು ಹಳ್ಳ ಹಿಡಿಸುವ ಕೆಲಸ ಮಾಡುತ್ತಿದೆ. ಒಂದು ದೇಶದ ಅಭಿವೃದ್ಧಿ ನಿಂತಿರುವುದು ಶಿಕ್ಷಣ ಕ್ಷೇತ್ರದ ಮೇಲೆ. ಆದರೆ ಕಾಂಗ್ರೆಸ್‌ ಸರ್ಕಾರ ಶಿಕ್ಷಣದಲ್ಲೂ ರಾಜಕೀಯ ಮಾಡುತ್ತಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ದೂರಿದರು.

‘ಪ್ರಜ್ಞಾವಂತರಾದ ಶಿಕ್ಷಕ ಮತದಾರರು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಬೇಕು. ನಾರಾಯಣಸ್ವಾಮಿ ಮೂರು ಬಾರಿ ಗೆದ್ದಿದ್ದಾರೆ ಎಂದರೆ ಅವರ ಸಾಮರ್ಥ್ಯ ಅಂತಹುದು. ಕಾಂಗ್ರೆಸ್‌ ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ. ಅದನ್ನು ಅರಿತೇ ಶಿಕ್ಷಕರು ಅವರನ್ನು ಗೆಲ್ಲಿಸಿದ್ದಾರೆ’ ಎಂದರು.

‘20 ವರ್ಷಗಳಿಂದ ಪ್ರೀತಿ, ವಿಶ್ವಾಸದಿಂದ ಕಂಡು ಆಶೀರ್ವದಿಸಿದ್ದೀರಿ. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿ ನೀಡಿದ್ದೀರಿ. ಈ ಬಾರಿಯೂ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು’ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಮನವಿ ಮಾಡಿದರು.

‘ಕಾಂಗ್ರೆಸ್‌ ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರಕ್ಕೆ ನ್ಯಾಯ ಕೊಡಲು ಆಗಿಲ್ಲ. ಶಿಕ್ಷಣ ಕ್ಷೇತ್ರಕ್ಕೂ ತನಗೂ ಸಂಬಂಧ ಇಲ್ಲದಂತೆ ಕಾಂಗ್ರೆಸ್‌ ವರ್ತಿಸಿದ ಕಾರಣಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾ ಬಂದಿದ್ದಾರೆ. ಈ ಬಾರಿಯೂ ನನಗೆ ಮತ ನೀಡಬೇಕು‘ ಎಂದು ಕೋರಿದರು.

ದಿನಕ್ಕೊಂದು ಆದೇಶದ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಗೊಂದಲ ಮೂಡಿಸುತ್ತಿದೆ. ಶಿಕ್ಷಣ ಇಲಾಖೆ ತುಘಲಕ್‌ ದರ್ಬಾರ್‌ ನಡೆಸುತ್ತಿದೆ. ಅನುದಾನಿತ, ಅನುದಾನ ರಹಿತ ಶಾಲೆಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿದ್ಧಲಿಂಗಪ್ಪ ಸಂಕನೂರ, ‘ಆಗ್ನೇಯ ಶಿಕ್ಷಕರ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಇಲ್ಲಿ ಬಿಜೆಪಿ ಅಭ್ಯರ್ಥಿಗಳೇ ಸತತವಾಗಿ ಗೆಲುವು ಸಾಧಿಸಿದ್ದಾರೆ. ವೈ.ಎ. ನಾರಾಯಣಸ್ವಾಮಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತಾರೆ. 4ನೇ ಬಾರಿಯೂ ಅವರು ಗೆಲ್ಲಲಿದ್ದಾರೆ. ಶಿಕ್ಷಕರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು‘ ಎಂದು ಮನವಿ ಮಾಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಶಾಸಕರಾದ ಬೈರತಿ ಬಸವರಾಜ, ಬಿ.ಪಿ. ಹರೀಶ್‌, ಕೆ.ಎಸ್‌. ನವೀನ್‌, ಮಾಜಿ ಶಾಸಕರಾದ ಪ್ರೊ. ಲಿಂಗಣ್ಣ, ಎಚ್‌.‍ಪಿ. ರಾಜೇಶ್‌, ಎಚ್‌.ಎಸ್‌.ಶಿವಶಂಕರ್,  ಅರುಣ್‌ ಶಹಾಪೂರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್‌ ನಾಗಪ್ಪ, ಮುಖಂಡರಾದ ಎ.ಎಚ್‌.ಶಿವಯೋಗಿಸ್ವಾಮಿ, ಲೋಕಿಕೆರೆ ನಾಗರಾಜ್‌, ಮಾಡಾಳ್‌ ಮಲ್ಲಿಕಾರ್ಜುನ್‌, ಬಿ. ಚಿದಾನಂದಪ್ಪ, ಕಲ್ಲೇರುದ್ರೇಶ್‌, ವೀರೇಶ್‌ ಹನಗವಾಡಿ, ಎಚ್‌.ಎಸ್‌. ಶಿವಕುಮಾರ್‌, ಶಿವಲಿಂಗಪ್ಪ ಸೇರಿದಂತೆ ಬಿಜೆಪಿ, ಜೆಡಿಎಸ್‌ ಮುಖಂಡರು, ಶಿಕ್ಷಕರು ಭಾಗವಹಿಸಿದ್ದರು.

ಶಿಕ್ಷಣ ಅರ್ಥವಾಗದ ಸಚಿವರು’

‘ಶಿಕ್ಷಣ ಅರ್ಥವಾಗದ ಶಿಕ್ಷಣ ಸಚಿವರು ರಾಜ್ಯದಲ್ಲಿ ಇದ್ದಾರೆ. ಕನ್ನಡ ಓದಲು ಬಾರದ ಸಚಿವರಿಗೆ ಎನ್‌ಇಪಿ ಅರ್ಥವಾಗಲು ಹೇಗೆ ಸಾಧ್ಯ. ಪ್ರಧಾನಿ ಮೋದಿ ಸರ್ಕಾರ ಉತ್ತಮ ಉದ್ದೇಶದಿಂದ ಎನ್‌ಇಪಿ ಜಾರಿಗೆ ತಂದಿದ್ದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಅದರಲ್ಲೂ ರಾಜಕಾರಣ ಮಾಡುತ್ತಿದೆ. ಮಕ್ಕಳ ಶಿಕ್ಷಕರಲ್ಲಿ ಗೊಂದಲ ಮೂಡಿಸುತ್ತಿದೆ’ ಎಂದು ಸಿ.ಟಿ. ರವಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT