ಶನಿವಾರ, ನವೆಂಬರ್ 28, 2020
26 °C
ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಿಜೆಪಿಯಿಂದ ಉಚ್ಚಾಟನೆ

ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ/ ಜಗಳೂರು: ಮಹಿಳೆಯರ ಬಗ್ಗೆ ಅತ್ಯಾಚಾರಕ್ಕೆ ಪ್ರಚೋದಿಸುವಂತೆ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೊ ಸಂಭಾಷಣೆಗೆ ಸಂಬಂಧಪಟ್ಟಂತೆ ಇಲ್ಲಿನ ಬಿಜೆಪಿ ಜಿಲ್ಲಾ ಘಟಕದ ಒಬಿಸಿ ಮೋರ್ಚಾ ಉಪಾಧ್ಯಕ್ಷ ಚಿಕ್ಕಉಜ್ಜಿನಿ ಗ್ರಾಮದ ಸಾಗರ ಅಂಜಿನಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಮೊಬೈಲ್ ಹಾಗೂ ಆಡಿಯೊ ತುಣುಕನ್ನು ವಶಪಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ತನಿಖೆ ಕೈಗೊಂಡಿದ್ದಾರೆ. 

ಟೈಗರ್ ಅಂಜಿನಪ್ಪ ಯಾನೆ ಸಾಗರ ಚಿಕ್ಕಉಜ್ಜಿನಿ ಅಂಜಿನಪ್ಪ, ವ್ಯಕ್ತಿಯೊಬ್ಬರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿರುವುದನ್ನು ರೆಕಾರ್ಡ್‌ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.

ವಿವಾದಿತ ಸಂಭಾಷಣೆ: ಅಂಜಿನಪ್ಪ ಅವರ ಸ್ನೇಹಿತ ರೇವಣಸಿದ್ದಪ್ಪ ವ್ಯಕ್ತಿಯೊಬ್ಬರಿಗೆ ಸಾಲ ನೀಡಿದ್ದು, ಸಾಲ ವಸೂಲಿಯ ಬಗ್ಗೆ ಅಂಜಿನಪ್ಪಗೆ ಮೊಬೈಲ್‌ನಲ್ಲಿ ಕರೆ ಮಾಡಿ ಮಾತನಾಡುವಾಗ, ‘ನನಗೆ ನಿನ್ನ ಬೆಂಬಲ ಬೇಕು’ ಎಂದು ರೇವಣಸಿದ್ದಪ್ಪ ಕೇಳುತ್ತಾರೆ. ಇದಕ್ಕೆ ಅಂಜಿನಪ್ಪ, ‘ನಾನಿರುವುದೇ ಬೆಂಬಲ ಕೊಡಲು. ನೂರಕ್ಕೆ ನೂರು ಪರ್ಸೆಂಟ್ ನಿನಗೆ ಸದಾ ನನ್ನ ಬೆಂಬಲ ಇರುತ್ತದೆ’ ಎಂದಿದ್ದಾರೆ. ನಂತರ ಲಿಂಗಾಯತ, ಮಡಿವಾಳ ಹಾಗೂ ಪರಿಶಿಷ್ಟ ಜಾತಿಯ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ. 

ಆಡಿಯೊ ಹರಿದಾಡುತ್ತಿದ್ದಂತೆ ಕ್ರಮ ಕೈಗೊಳ್ಳುವಂತೆ ಜಗಳೂರು ಠಾಣೆಯ ಮುಂದೆ ಜನರು ಜಮಾಯಿಸಿದರು. ಅಂಜಿನಪ್ಪ ವಿರುದ್ಧ ಚಿಕ್ಕಉಜ್ಜಿನಿ ಗ್ರಾಮದ ದುರುಗಮ್ಮ ಎಂಬುವವರು ದೂರು ನೀಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉಚ್ಚಾಟನೆ: ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಂಜಿನಪ್ಪನನ್ನು ಉಚ್ಚಾಟಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು