ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯಲ್ಲಿ ಬಿಜೆಪಿ ಆಡಳಿತ ‘ಫ್ಲಾಪ್’

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ವಾಗ್ದಾಳಿ
Last Updated 28 ಫೆಬ್ರುವರಿ 2021, 4:41 IST
ಅಕ್ಷರ ಗಾತ್ರ

ದಾವಣಗೆರೆ: ‘ಮಹಾನಗರ ಪಾಲಿಕೆಯಲ್ಲಿ ಕಳೆದ ವರ್ಷ ಬಿಜೆಪಿಯು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಅದು ‘ಫ್ಲಾಪ್ ವರ್ಷವಾಗಿದೆ’ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿದಿನೇಶ್ ಕೆ.ಶೆಟ್ಟಿ ಆರೋಪಿಸಿದರು.

‘ಕಾಂಗ್ರೆಸ್ ಅಧಿಕಾರವಿದ್ದಾಗ ಜನಪರ ಆಡಳಿತ ನೀಡಿತ್ತು. ಆದರೆ ಬಿಜೆಪಿಯ ಕೊರೊನಾ ವೇಳೆ ಜನರಿಗೆ ದುಡಿಮೆ ಇಲ್ಲದಿರುವಾಗ ಆಸ್ತಿ ತೆರಿಗೆಯನ್ನು ಶೇ 20 ಹಾಗೂ ವಾಣಿಜ್ಯ ಮಳಿಗೆ ತೆರಿಗೆಯನ್ನು ಶೇ 24ರಷ್ಟು ಹೆಚ್ಚಿಸಿ ಜನರಿಗೆ ಹೊರೆಯನ್ನುಂಟುಮಾಡಿದೆ. ಈವರೆಗೆ ಒಂದು ಸಾಮಾನ್ಯ ಸಭೆಯನ್ನೂ ನಡೆಸಿಲ್ಲ’ ಎಂದುಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಸಮಾರೋಪ ದಿವಸ ಮೇಯರ್ ಅಜಯಕುಮಾರ್ ಮತ್ತು ಪ್ರಸನ್ನಕುಮಾರ್ ಅವರ ಎರಡೂ ವಾರ್ಡಿನ ಕಾರ್ಯಕ್ರಮ ಏರ್ಪಡಿಸಲಾಗಿತ್ತಾದರೂ 20 ಜನರೂ ಬಂದಿರಲಿಲ್ಲ. ಕೇವಲ ಕಂದಾಯ ವಸೂಲಿಗೆ ಮಾತ್ರ ಈ ಕಾರ್ಯಕ್ರಮ ಸೀಮಿತವಾಯಿತೇ ಹೊರತು ಜನಪರವಾಗಿರಲಿಲ್ಲ’ ಎಂದು ದೂರಿದರು.

‘ಅಧಿಕಾರಕ್ಕೆ ಬಂದಾಗಿನಿಂದ 8ರಿಂದ 15 ದಿನಗಳಿಗೊಮ್ಮೆ ಕುಡಿಯುವ ನೀರು ಒದಗಿಸುತ್ತಿದ್ದು, ಕುಂದುವಾಡ ಕೆರೆ ಅಭಿವೃದ್ಧಿ ಹೆಸರಲ್ಲಿ ನೀರಿಲ್ಲದೇ ಬತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಒಟ್ಟಿನಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿದರು.

ಇಂದು ಸೌದೆ ಒಲೆ ಹಚ್ಚಿ ಪ್ರತಿಭಟನೆ:‘ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್‍ನಿಂದ ಅಧ್ಯಕ್ಷ ಅಯೂಬ್ ಪೈಲ್ವಾನ್ ನೇತೃತ್ವದಲ್ಲಿ ಫೆ.28ರಂದು ಬೆಳಿಗ್ಗೆ 11.30ಕ್ಕೆ ಹೊಂಡದ ವೃತ್ತದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಮಹಿಳಾ ಘಟಕದಿಂದ ಸೌದೆಯಲ್ಲಿ ಒಲೆ ಹಚ್ಚಿ ಪ್ರತಿಭಟನೆ ನಡೆಸಲಾಗುವುದು’ ಎಂದು ದಿನೇಶ್ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಯೂಬ್ ಪೈಲ್ವಾನ್, ಅನಿತಾಬಾಯಿ ಮಾಲತೇಶ್ ಜಾಧವ್, ಸುಷ್ಮಾ ಪಾಟೀಲ್, ಪಾಲಿಕೆ ಸದಸ್ಯರಾದ ಚಮನ್‍ಸಾಬ್, ಸೈಯದ್ ಚಾರ್ಲಿ, ಅಬ್ದುಲ್ ಜಬ್ಬಾರ್, ಮುಜಾಹಿದ್, ದಾದಾಪೀರ್, ಸಾಗರ್ ಇದ್ದರು.

‘ಮಾಜಿ ಮೇಯರ್‌ರಿಂದ ಅಕ್ರಮ’
ದಾವಣಗೆರೆ:
‘ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ತಮ್ಮ ಸ್ವಂತ 21 ಎಕರೆ ಜಾಗ ಸೇರಿ 52 ಎಕರೆಗೆ ಧೂಡಾದ ನಿಯಮಾವಳಿ ಪಾಲಿಸದೇ ಅಕ್ರಮವಾಗಿ ಡೋರ್ ನಂಬರ್‌ಗಳನ್ನು ಕೊಟ್ಟು ಭ್ರಷ್ಟಾಚಾರ ಎಸಗಿದ್ದಾರೆ’ ಎಂದು ದಿನೇಶ್ ಶೆಟ್ಟಿ ಆರೋಪಿಸಿದರು.

‘ಧೂಡಾದ ನಿಯಮಾವಳಿ ಪ್ರಕಾರ ಮೂಲಸೌಲಭ್ಯ ಕಲ್ಪಿಸಬೇಕು. ಆದರೆ ಯುಜಿಡಿಗೆ ಪೈಪ್‌ಲೈನ್ ಇಲ್ಲ. ಡಾಂಬರು ರಸ್ತೆಯಾಗಿಲ್ಲ. ಈ ಬಗ್ಗೆ ನಮ್ಮಲ್ಲಿ ದಾಖಲೆಗಳಿದ್ದು, ಎಸಿಬಿಗೆ ದೂರು ಕೊಟ್ಟರೆ ಅಧಿಕಾರ ದುರುಪಯೋಗಮಾಡಿಕೊಳ್ಳುವ ಅನುಮಾನವಿದೆ. ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದರು.

‘ಅಜಯಕುಮಾರ್ ಅವರು ಪಾಲಿಕೆಯ ಹಣದಲ್ಲಿ ಒಂದು ಕಪ್ ಚಹಾವನ್ನು ಕುಡಿದಿಲ್ಲ ಎಂದು ಹೇಳಿದ್ದರು. ಆದರೆ, ಇವರು ಟೀ ಮಾತ್ರ ಕುಡಿದಿಲ್ಲ. ಊಟವನ್ನೇ ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಕಳ್ಳತನದಿಂದ ಡೋರ್ ನಂಬರ್ ಪಡೆದಿಲ್ಲ’
‘ನಾನು ಮಹಾನಗರಪಾಲಿಕೆಗೆ ಶುಲ್ಕ ಕಟ್ಟಿ, ಕಾನೂನುಬದ್ಧವಾಗಿ ಡೋರ್‌ ನಂಬರ್ ತೆಗೆದುಕೊಂಡಿದ್ದೇನೆಯೇ ಹೊರತು ಕಳ್ಳತನದಿಂದಲ್ಲ’ ಎಂದು ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಹೇಳಿದರು.

‘ಜಮೀನು ಖರೀದಿಸಿ ಲೇಔಟ್ ಮಾಡಿದ್ದೇನೆ. ಜಿಲ್ಲಾಧಿಕಾರಿಗಳು ಎನ್‌ಎ (ನಾನ್‌ ಅಗ್ರಿಕಲ್ಚರ್) ಕಾಪಿ ಕೊಟ್ಟಿದ್ದಾರೆ. ಧೂಡಾದಿಂದ ಶುಲ್ಕ ಕಟ್ಟಿಸಿಕೊಂಡು ವರ್ಕ್ ಆರ್ಡರ್ ಕೊಟ್ಟಿದ್ದಾರೆ. ಯುಜಿಡಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಕಾಮಗಾರಿಗಳನ್ನು ಮಾಡಿದ್ದೇನೆ. ಧೂಡಾ ಹಾಗೂ ನಗರಪಾಲಿಕೆಯ ಆಯುಕ್ತರು ಹಾಗೂ ಎಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ಎಲ್ಲವೂ ಸರಿಯಾಗಿದೆ ಎಂದು ಒಪ್ಪಿಗೆ ಕೊಟ್ಟಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT