ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಪಥದಂತೆ ಮನುಷ್ಯನ ದೇಹವೂ ಬದಲು- ವಚನಾನಂದ ಸ್ವಾಮೀಜಿ

ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮೀಜಿ
Last Updated 15 ಜನವರಿ 2022, 7:01 IST
ಅಕ್ಷರ ಗಾತ್ರ

ಹರಿಹರ: ಸೌರ ಮಂಡಲದಲ್ಲಾಗುವ ಬೆಳವಣಿಗೆಗಳು ವ್ಯಕ್ತಿಯ ಆಂತರ್ಯದಲ್ಲೂ ಪ್ರಭಾವ ಬೀರುತ್ತವೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಮಕರ ಸಂಕ್ರಾಂತಿ ಪ್ರಯುಕ್ತ 75 ಲಕ್ಷ ಜನರು ಸೂರ್ಯ ನಮಸ್ಕಾರ ಮಾಡಲು ನೀಡಿದ ಕರೆಯಂತೆ ಮಠದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ವರ್ಷದಲ್ಲಿ ಎರಡು ಬಾರಿ ಸೂರ್ಯ ತನ್ನ ಪಥ ಬದಲಿಸುತ್ತಾನೆ. ಮಕರ ಸಂಕ್ರಾಂತಿಯಂದು ಸೂರ್ಯ ದಕ್ಷಿಣದಿಂದ ಉತ್ತರಾಯಣದ ಕಡೆಗೆ ಸಾಗುತ್ತಾನೆ. ಸೂರ್ಯ ತನ್ನ ಪಥ ಬದಲಿಸುವ ಪ್ರಭಾವ ಭೂಮಿ ಮೇಲಿನ ಪ್ರತಿ ಜೀವಿಯ ಮೇಲೂ ಬೀರುತ್ತದೆ. ಪಂಚಭೂತಗಳಿಂದ ನಿರ್ಮಿತ ಮನಷ್ಯನ ದೇಹವೂ ಸೂರ್ಯನ ಪಥ ಬದಲಾವಣೆಯಿಂದ ಬದಲಾಗುತ್ತದೆ’ ಎಂದರು.

‘ಸೂರ್ಯ ಉತ್ಥಾನದಿಂದ ಜಗತ್ತಿನ ಜೀವಚರರ ಚಟುವಟಿಕೆ ಆರಂಭವಾಗಿ, ಸೂರ್ಯಾಸ್ಥದೊಂದಿಗೆ ಚಟುವಟಿಕೆಗಳಿಗೆ ವಿರಾಮ ಸಿಗುತ್ತದೆ. ಸೂರ್ಯನಿಲ್ಲದ ಬದುಕು ಸ್ಮರಿಸಲು ಆಗುವುದಿಲ್ಲ. ಹೀಗಾಗಿಯೇ ಸೂರ್ಯನ ಆರಾಧನೆ ಭಾರತೀಯ ಪರಂಪರೆಯಲ್ಲಿದೆ’ ಎಂದರು.

‘ನಿತ್ಯ ಯೋಗ ಸಾಧನೆಯಿಂದ ಸೂರ್ಯನ ಶಕ್ತಿಯನ್ನು ಪಡೆದು ಆರೋಗ್ಯ ವೃದ್ಧಿಸಿಕೊಳ್ಳಬಹುದು. ಸೂರ್ಯ ನಮಸ್ಕಾರವು ದೇಹದ ಎಲ್ಲಾ ಅಂಗಾಂಗಗಳಿಗೆ ಹುರುಪು, ಚೈತನ್ಯ ನೀಡುತ್ತದೆ. ಬೆಳಗಿನ ಸೂರ್ಯನ ಕಿರಣ ನಮ್ಮ ಮೈಗೆ ತಾಕುವಂತೆ ಸೂರ್ಯ ನಮಸ್ಕಾರ, ಯೋಗ ಸಾಧನೆ ಮಾಡುವುದರಿಂದ ಹೆಚ್ಚಿನ ಲಾಭವಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮಠದ ಪ್ರಧಾನ ಟ್ರಸ್ಟಿ ಬಿ.ಸಿ. ಉಮಾಪತಿ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿದ್ದರು.

ಮಠದ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಂಚಮಸಾಲಿ ಮಠಾಧೀಶ್ವರ ಒಕ್ಕೂಟದ ಅಧ್ಯಕ್ಷ ಬಬಲೇಶ್ವರ ಬೃಹನ್ಮಠದ ಷಟಸ್ಥಲ ಬ್ರಹ್ಮಿ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ಮನಗೊಳಿ ಹಿರೇಮಠದ ಷಟಸ್ಥಲ ಬೃಹ್ಮಿ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಗುಬ್ಬಿಯ ಭೃಂಗೇಶ್ವರ ಪೀಠದ ಭೃಂಗೇಶ್ವರ ಸ್ವಾಮೀಜಿ, ಸಿದ್ದರಹಳ್ಳಿ ಪಾರಮಾರ್ಥಿಕ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಮರಗೋಳ ರಾಮಲಿಂಗೇಶ್ವರ ಮಠದ ಬಸವಲಿಂಗ ಸ್ವಾಮೀಜಿ, ಅಲಗೂರು ದರಿದೇವರ ಮಠದ ಶಾಂತಮೂರ್ತಿ ಲಕ್ಷ್ಮಣ ಮುತ್ಯಾ ಸ್ವಾಮೀಜಿ, ‌ದೇವಪಟ್ಟದ ಶಾಂತ ಮಲ್ಲಿಕಾರ್ಜುನ ಶ್ರೀಗಳು ಭಾಗವಹಿಸಿದ್ದರು.

ಶ್ರೀಗಳಿಗೆ ನೀಡಿದ ತುತ್ತು ಸ್ಮರಿಸಿದರು

ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದ ದಾವಣಗೆರೆಯ ಮುಸ್ಲಿಂ ಸಮಾಜದ ಹಿರಿಯರೊಬ್ಬರು ನಂತರ ವಚನಾನಂದ ಶ್ರೀಗಳನ್ನು ಭೇಟಿ ಮಾಡಿ ದಾವಣಗೆರೆ ಮೋತಿ ವೀರಪ್ಪ ಕಾಲೇಜಿನ ಆವರಣದಲ್ಲಿ ಆರು ವರ್ಷಗಳ ಹಿಂದೆ ನಡೆದಿದ್ದ ಯೋಗ ಶಿಬಿರದಲ್ಲಿ ಕುಟಂಬ ಸಮೇತ ಭಾಗವಹಿಸಿದ್ದನ್ನು ಸ್ಮರಿಸಿದರು.

ಆ ಶಿಬಿರದಲ್ಲಿ ಮೈತ್ರಿ ಭೋಜನದಲ್ಲಿ ಎಲ್ಲಾ ಶಿಬಿರಾರ್ಥಿಗಳು ಮನೆಯಿಂದ ತಂದ ಭೋಜನವನ್ನು ಎಲ್ಲರೂ ಹಂಚಿಕೊಂಡು ಸೇವಿಸಿದ್ದರು. ಆ ವೇಳೆ ಶ್ರೀಗಳಿಗೆ ತುತ್ತು ನೀಡಿದ್ದನ್ನು ಸ್ಮರಿಸಿದರು. ಶ್ರೀಗಳು ಈ ಹಿರಿಯರಿಗೆ ನೀಡಿದ ತುತ್ತನ್ನು ಸ್ಮರಿಸಿ ಭಾವುಕರಾದರು.

ಶ್ರೀಗಳು ಅವರನ್ನುದ್ದೇಶಿಸಿ, ‘ಮಠಕ್ಕೆ ಆಗಾಗ ಬರುತ್ತೀರಿ, ನಿಮ್ಮ ಕುಟುಂಬದವರನ್ನು ಒಮ್ಮೆ ಮಠಕ್ಕೆ ಕರೆದುಕೊಂಡು ಬನ್ನಿ’ ಎಂದು ಆಹ್ವಾನಿಸಿದರು.

‘ಖಂಡಿತ ಬರುವುದಾಗಿ ಆ ಹಿರಿಯರು ಶ್ರೀಗಳಿಗೆ ಆಶ್ವಾಸನೆ’ ನೀಡಿದರು. ಶ್ರೀಗಳೊಂದಿಗೆ ಮುಸ್ಲಿಂ ಸಮಾಜದ ಹಿರಿಯರು ನಡೆಸಿದ ಆತ್ಮೀಯ ಮಾತುಕತೆ ನೆರೆದಿದ್ದ ಭಕ್ತರಿಗೆ ವಿಶೇಷ ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT