ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | 101 ಕೃತಿಗಳ ಮುದ್ರಣಕ್ಕೆ ಭರದ ಸಿದ್ಧತೆ

ದಾವಣಗೆರೆ ವಿಶ್ವವಿದ್ಯಾಲಯದ ಪ್ರಸಾರಾಂಗದ ಚೊಚ್ಚಲ ಪ್ರಕಟಣೆ
Last Updated 28 ಜುಲೈ 2020, 15:04 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕಳೆದ ವರ್ಷವಷ್ಟೇ ಅಸ್ತಿತ್ವಕ್ಕೆ ಬಂದಿರುವ ಪ್ರಸಾರಾಂಗವು ತನ್ನ ಚೊಚ್ಚಲ ಪ್ರಯತ್ನದಲ್ಲೇ 101 ಕೃತಿಗಳನ್ನು ಹೊರ ತರಲು ಮುಂದಾಗಿದೆ. ‘ಪ್ರಚಾರೋಪನ್ಯಾಸ ಮಾಲೆ’ಯಡಿ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವ 101 ಕೃತಿಗಳನ್ನು ಸೆಪ್ಟೆಂಬರ್‌ ಅಂತ್ಯಕ್ಕೆ ಬಿಡುಗಡೆಗೊಳಿಸಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 2019ರ ನವೆಂಬರ್‌ 8ರಂದು ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಉದ್ಘಾಟಿಸಿದ್ದರು. ರಾಜ್ಯ ಸರ್ಕಾರವು ಪ್ರಸಾರಾಂಗಕ್ಕೆ ಕಳೆದ ಮಾರ್ಚ್‌ನಲ್ಲಿ ಅಧಿಕೃತವಾಗಿ ಮಾನ್ಯತೆ ನೀಡಿದೆ. ಮೊದಲ ಹೆಜ್ಜೆ ಅವಿಸ್ಮರಣೀಯವಾಗಿರಲಿ ಎಂಬ ಉದ್ದೇಶದಿಂದ 101 ಕೃತಿಗಳನ್ನು ಹೊರತರಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿಶ್ವವಿದ್ಯಾಲಯವು ₹ 15 ಲಕ್ಷ ಅನುದಾನವನ್ನೂ ಪ್ರಸಾರಾಂಗಕ್ಕೆ ನೀಡಿದೆ.

‘101 ಕೃತಿಗಳನ್ನು ಆಗಸ್ಟ್‌ನಲ್ಲೇ ಬಿಡುಗಡೆಗೊಳಿಸಬೇಕು ಎಂದುಕೊಂಡಿದ್ದೆವು. ಆದರೆ, ಕೊರೊನಾ ಬಂದಿದ್ದರಿಂದ ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಈಗ ಆಗಸ್ಟ್‌ನಲ್ಲಿ ತರಗತಿ ನಡೆಸಿ, ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಬೇಕಾಗಿದೆ. ಹೀಗಾಗಿ ಪುಸ್ತಕ ಸಿದ್ಧಗೊಳ್ಳುವುದು ಸ್ವಲ್ಪ ವಿಳಂಬವಾಗಲಿದೆ. ಪರೀಕ್ಷೆ ಮುಗಿದ ಬಳಿಕ ಸೆಪ್ಟೆಂಬರ್‌ ಅಂತ್ಯಕ್ಕೆ ಪುಸ್ತಕ ಬಿಡುಗಡೆಗೊಳಿಸಬೇಕು ಎಂದುಕೊಂಡಿದ್ದೇವೆ’ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವಿಷಯ ವೈವಿಧ್ಯ: ವಿಶ್ವವಿದ್ಯಾಲಯದ ಹಾಗೂ ಸಂಲಗ್ನ ಕಾಲೇಜಿನ ಪ್ರಾಧ್ಯಾಪಕರೇ ಬಹುತೇಕ ಕೃತಿಗಳನ್ನು ಬರೆಯುತ್ತಿದ್ದಾರೆ. ವಿಜ್ಞಾನ, ಕಲೆ, ವಾಣಿಜ್ಯ, ಜನಪದ, ರಂಗಭೂಮಿ, ಪತ್ರಿಕೋದ್ಯಮ, ನವ ಮಾಧ್ಯಮ, ವಚನಗಳಲ್ಲಿನ ವೈಚಾರಿಕತೆ, ರಾಜಕೀಯ, ಕನ್ನಡ ಭಾಷೆ, ಶಾಸನ, ಗ್ರಾಮೀಣ ಆರ್ಥಿಕತೆ, ಆರೋಗ್ಯ, ಪರಿಸರ... ಹೀಗೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ಹೊರ ತರಲಾಗುತ್ತಿದೆ.

2000 ಪ್ರತಿ ಮುದ್ರಣ: ‘ನಾವು ಹೊರ ತರುತ್ತಿರುವ ಕೃತಿಗಳು 18x11 ಸೆ.ಮೀ ಅಳತೆಯ ಕಿರು ಹೊತ್ತಿಗೆ ರೂಪದಲ್ಲಿರಲಿವೆ. 60ರಿಂದ 75 ಪುಟಗಳಲ್ಲಿ ಸಂಕ್ಷಿಪ್ತವಾಗಿ ವಿಷಯಗಳನ್ನು ಪರಿಚಯಿಸಲಾಗುವುದು. ಪ್ರತಿ ಪುಸ್ತಕದ 2000 ಪ್ರತಿಗಳನ್ನು ಮುದ್ರಿಸಲಾಗುತ್ತಿದೆ. ಪ್ರತಿ ಪುಸ್ತಕದ ದರವನ್ನು ₹ 30 ನಿಗದಿಗೊಳಿಸಲು ಚಿಂತಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಡಾ. ಶಿವಕುಮಾರ ಕಣಸೋಗಿ ಮಾಹಿತಿ ನೀಡಿದರು.

‘ಕುಲಪತಿ ಪ್ರೊ. ಹಲಸೆ ಅವರು ‘ನಿತ್ಯ ವಿಜ್ಞಾನ’ ಹಾಗೂ ಸಿಂಡಿಕೇಟ್‌ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ ಅವರು ‘ಕುಟುಂಬ ನಿರ್ವಹಣೆ: ಮಹಿಳೆಯರ ಪಾತ್ರ’ ಕೃತಿಯನ್ನು ಬರೆದುಕೊಡುತ್ತಿದ್ದಾರೆ. ಕೆಲ ಪ್ರಾಧ್ಯಾಪಕರು ಎರಡು ಕೃತಿಗಳನ್ನೂ ಬರೆಯಲಿದ್ದಾರೆ. ಈಗಾಗಲೇ ಪುಸ್ತಕಗಳಿಗೆ ಐಎಸ್‌ಬಿ ಸಂಖ್ಯೆಯನ್ನೂ ಪಡೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದ 121 ಸಂಗಲ್ನ ಕಾಲೇಜುಗಳ ಗ್ರಂಥಾಲಯಗಳಿಗೆ ಎಲ್ಲಾ ಕೃತಿಗಳ ತಲಾ 10 ಪ್ರತಿಗಳನ್ನು ಕಳುಹಿಸಿಕೊಡಲು ಯೋಚಿಸಲಾಗಿದೆ’ ಎಂದು ತಿಳಿಸಿದರು.

ನಾಲ್ಕು ಜರ್ನಲ್‌ ಪ್ರಕಟಣೆ

ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯ, ವಾಣಿಜ್ಯ ನಿಕಾಯ, ಭಾಷಾ ಹಾಗೂ ಶಿಕ್ಷಣ ನಿಕಾಯ ಮತ್ತು ಕಲಾ ನಿಕಾಯಗಳಿಂದ ಪ್ರತಿ ಆರು ತಿಂಗಳಿಗೆ ಒಂದರಂತೆ ಜರ್ನಲ್‌ ಹೊರತರಲು ಚಿಂತಿಸಲಾಗಿದೆ. ವಿಶ್ವವಿದ್ಯಾಲಯದ ವಿಷಯ ತಜ್ಞ ಪ್ರಾಧ್ಯಾಪಕರ ಸಹಕಾರದಿಂದ ಜರ್ನಲ್‌ ಸಿದ್ಧಪಡಿಸಲಾಗುವುದು ಎಂದು ಪ್ರಸಾರಾಂಗದ ನಿರ್ದೇಶಕ ಡಾ. ಶಿವಕುಮಾರ ಕಣಸೋಗಿ ಮಾಹಿತಿ ನೀಡಿದರು.

*

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಜೊತೆಗೆ ಈಗಾಗಲೇ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಕೃತಿಗಳ ಮುದ್ರಣ ಹಾಗೂ ವಿನ್ಯಾಸಕ್ಕೆ ಅವರಿಂದ ನೆರವು ಪಡೆಯಲಾಗುವುದು.

– ಪ್ರೊ. ಶರಣಪ್ಪ ವಿ. ಹಲಸೆ, ಕುಲಪತಿ, ದಾವಣಗೆರೆ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT