ಬುಧವಾರ, ಆಗಸ್ಟ್ 4, 2021
26 °C
ಶಿಷ್ಯವೇತನಕ್ಕೆ ಪಟ್ಟು ಬಿಡದ ವಿದ್ಯಾರ್ಥಿಗಳು, ಮಾಸ್ಕ್‌, ಸ್ಯಾನಿಟೈಸರ್‌ ನೀಡಿ ಜಾಗೃತಿ

ದಾವಣಗೆರೆ: ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 16 ತಿಂಗಳ ಶಿಷ್ಯವೇತನಕ್ಕೆ ಒತ್ತಾಯಿಸಿ ಇಲ್ಲಿನ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿ 12 ನೇ ದಿನವೂ ಮುಂದುವರಿದಿದ್ದು, ಶುಕ್ರವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಬಹಿಷ್ಕರಿಸಿದರು. ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಿದರು. 

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾದ ವೈದ್ಯರು ಒಪಿಡಿ ಸೇವೆ ಬಹಿಷ್ಕರಿಸಿದರು. ಎರಡು ದಿನಗಳು ಒಪಿಡಿ ಸೇವೆ ಬಹಿಷ್ಕರಿಸಲಾಗುವುದು. ಸೋಮವಾರವೂ ಬೇಡಿಕೆ ಸ್ಪಂದನೆ ಸಿಗದಿದ್ದರೆ ಸೋಮವಾರದಿಂದ ಕೋವಿಡ್‌ ಸೇವೆ ಹೊರತುಪಡಿಸಿ ತುರ್ತು ಸೇವೆ ಬಹಿಷ್ಕರಿಸುವುದಾಗಿ ಸರ್ಕಾರಕ್ಕೆ ಮತ್ತೆ ಎಚ್ಚರಿಕೆ ನೀಡಿದರು.   

ಜಯದೇವ ವೃತ್ತದಲ್ಲಿ ಸಾರ್ವಜನಿಕರು, ಪೊಲೀಸ್‌ ಸಿಬ್ಬಂದಿಗೆ ಮಾಸ್ಕ್‌ ವಿತರಿಸಿ, ಕೈಗೆ ಸ್ಯಾನಿಟೈಸರ್‌ ಹಾಕಿ ಕೊರೊನಾ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು, ಮಾಸ್ಕ್ ಹಾಕದ ಪಾದಚಾರಿಗಳು, ಬೈಕ್‌ ಸವಾರರಿಗೆ ಮಾಸ್ಕ್‌ ಹಾಕುವಂತೆ ಮನವಿ ಮಾಡಿದರು. ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಿಸಿದರು. 

12 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ‘ಕಿವುಡು ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಬಳಿಕ ರಾಷ್ಟ್ರಗೀತೆ ಹಾಡಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

‘ನೇತ್ರದಾನ, ರಕ್ತದಾನ ಶಿಬಿರದ ಮೂಲಕ 11 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಇಂದು ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರಕ್ಕೆ ತಡೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದೇವೆ. ಸರ್ಕಾರಿ ಕೋಟಾದ ವೈದ್ಯರು ಒಪಿಡಿ ಸೇವೆ ಬಹಿಷ್ಕರಿಸಿದ್ದಾರೆ. ಸೋಮವಾರದಿಂದ ತುರ್ತು ಸೇವೆಗಳನ್ನೂ ಬಹಿಷ್ಕರಿಸಲಾಗುವುದು. ನಮ್ಮ ಬೇಡಿಕೆ ಈಡೇರಿಸುವವರೆಗೂ ಹೋರಾಟ ನಡೆಯಲಿದೆ’ ಎಂದು ಡಾ. ಹರೀಶ್‌ ಹೇಳಿದರು.

ಡಾ.ನಿಧಿ, ಡಾ. ಲಕ್ಷ್ಮಿ, ಡಾ. ಸುಧಾಕರ್‌, ಡಾ. ಅನಿರುದ್ಧ, ಡಾ. ಈಶ್ವರ್‌, ಡಾ. ಭರತ್‌, ಡಾ. ಪ್ರೀತಂ ಸೇರಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು