ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಮೂಡಿಸಿ: ಎಸ್‌.ಆರ್‌. ಶ್ರೀನಿವಾಸ

Last Updated 5 ಸೆಪ್ಟೆಂಬರ್ 2018, 13:27 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ ಕರೆ ನೀಡಿದರು.

ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಶಿಕ್ಷಣ ನೀಡಿದರೂ ವಿದ್ಯಾರ್ಥಿಗಳ ಕೊರತೆಯಿಂದಾಗಿ ರಾಜ್ಯದ 9 ಸಾವಿರ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ ಎಂದು ಸರ್ಕಾರ ಬಜೆಟ್‌ ಅಧಿವೇಶನದಲ್ಲಿ ಚರ್ಚಿಸಿದೆ. ಹೀಗಿದ್ದರೂ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಸರ್ಕಾರ ಶಿಕ್ಷಕರ ಜತೆಗಿದೆ. ಪ್ರಾಮಾಣಿಕವಾಗಿ ಪಾಠ ಮಾಡಿ, ಗುಣಮಟ್ಟದ ಶಿಕ್ಷಣ ಕೊಡಿ ಎಂದು ಹೇಳಿದರು.

ಕುವೈತ್‌, ಇರಾನ್‌ ಮತ್ತು ಇರಾಕ್‌ಗಳಲ್ಲಿ ಹೆಚ್ಚಿನ ಹಣ ಇದ್ದರೂ ಅವು ಅಭಿವೃದ್ಧಿ ಹೊಂದಲು ಆಗುತ್ತಿಲ್ಲ. ಶ್ರೀಮಂತಿಕೆ ಜತೆಗೆ ಸಾಮಾಜಿಕ, ಸಾಂಸ್ಕೃತಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಅಭಿವೃದ್ಧಿ ರಾಷ್ಟ್ರ ಎಂದು ಗುರುತಿಸಲು ಸಾಧ್ಯ. ಭಾರತವೂ ಹಲವು ದಶಕಗಳಿಂದ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲೇ ಇದೆ. ಹೀಗಾಗಿ, ದೇಶದ ಸಮಗ್ರ ಪ್ರಗತಿಗೆ ಪೂರಕವಾದ ಶಿಕ್ಷಣವನ್ನು ಕೊಡಲು ಶಿಕ್ಷಕರು ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ, ‘ಯಾರು ಏನೂ ಮಾಡಲಾಗದ ಸ್ಥಿತಿಯನ್ನು ಸರ್ಕಾರಿ ಶಾಲೆಗಳು ತಲುಪಿವೆ. ದಯಮಾಡಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಶಾಲೆಗಳಿಗೆ ಕೊಠಡಿ ಹಾಗೂ ಇತರ ಮೂಲ ಸೌಲಭ್ಯ ಒದಗಿಸಲು ಹೆಚ್ಚಿನ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ‘ಅರ್ಧವಾರ್ಷಿಕ ಪರೀಕ್ಷೆ ಬಂದರೂ ಸರ್ಕಾರಿ ಶಾಲೆಗಳಿಗೆ ಇನ್ನೂ ಹಲವು ಪಠ್ಯಪುಸ್ತಕಗಳು ತಲುಪಿಲ್ಲ. ಹೀಗಾದರೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಹೇಗೆ? ಸಕಾಲದಲ್ಲಿ ಪಠ್ಯಪುಸ್ತಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ‘ಸರ್ಕಾರಿ ಶಾಲೆಗಳ ಶಿಕ್ಷಕರ ಮೇಲೆ ಅಪಾರ ನಿರೀಕ್ಷೆಯಿದೆ. ಆದರೆ, ಅವರು ಕೇಳುವ ಸೌಲಭ್ಯಗಳನ್ನು ಮೊದಲು ಪೂರೈಕೆ ಮಾಡಬೇಕು. ಆಗ ನಿರೀಕ್ಷೆಗಳು ಈಡೇರುತ್ತವೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಕೆ. ಜಬ್ಬಾರ್‌, ಮೇಯರ್‌ ಶೋಭಾ ಪಲ್ಲಾಗಟ್ಟೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಸ್‌. ಬಸವರಾಜ್, ಶೈಲಜಾ ಬಸವರಾಜ್‌ ಮಾತನಾಡಿದರು.

ಸಾಹಿತಿ ನಾಗರಾಜ್‌ ಉಪನ್ಯಾಸ ನೀಡಿದರು. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಸದಸ್ಯ ಫಕೀರಪ್ಪ, ಉಪ ಮೇಯರ್ ಚಮನ್‌ಸಾಬ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ. ಸಂಗಜ್ಜ ಗೌಡ್ರು, ಎಸ್‌ಪಿ ಆರ್‌. ಚೇತನ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಅಶ್ವತಿ, ಎಸಿ ಬಿ.ಟಿ. ಕುಮಾರಸ್ವಾಮಿ, ಡಿಡಿಪಿಐ ಪರಮೇಶ್ವರಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.

-------

ಶಿಕ್ಷಕಿಯ ಸ್ಮರಿಸಿದ ಸಚಿವ

ಶಿಕ್ಷಕರ ದಿನಾಚರಣೆಯಲ್ಲಿ ಬಾಲ್ಯದ ನೆನಪುಗಳಿಗೆ ಜಾರಿದ ಸಚಿವ ಶ್ರೀನಿವಾಸ, ತಮ್ಮ ಶಿಕ್ಷಕಿಯನ್ನು ನೆನೆದು ಭಾವುಕರಾದರು.

‘ನಿತ್ಯವೂ 8 ಕಿ.ಮೀ ನಡೆದುಕೊಂಡು ಶಾಲೆಗೆ ಹೋಗಬೇಕಿತ್ತು. ಇದರಿಂದಾಗಿ ಪ್ರಾರ್ಥನೆಗೆ ಹಾಜರಾಗಲು ಆಗುತ್ತಿರಲಿಲ್ಲ. ತಡವಾಗಿ ಬರುತ್ತಿದ್ದ ನನಗೆ ಶಿಕ್ಷಕಿ ಸುನಂದಾ ದೇವಿ ನಿತ್ಯವೂ ಹೊಡೆಯುತ್ತಿದ್ದರು. ಆದರೂ ನನ್ನ ಮೇಲೆ ಅವರಿಗೆ ವಿಶೇಷ ಪ್ರೀತಿಯಿತ್ತು. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾದಾಗ ಅವರ ಮನೆಗೆ ಹೋಗಿದ್ದೆ. ಆಗ ಅವರು ಭಾವುಕರಾಗಿದ್ದರು’ ಎಂದು ಹೇಳಿದರು.

‘ಇತ್ತೀಚೆಗೆ ಅವರಿಗೆ ಕ್ಯಾನ್ಸರ್‌ ಬಂದು ಅಸ್ವಸ್ಥರಾಗಿದ್ದರು. ನನ್ನನ್ನು ನೋಡಬೇಕೆಂದು ಕರೆಯಿಸಿಕೊಂಡ ಅವರು, ನನ್ನ ಭುಜಕ್ಕೆ ಒರಗಿ ಪ್ರಾಣಬಿಟ್ಟರು. ತಾಯಿ ಹೊರತುಪಡಿಸಿದರೆ ಮಾತೃಹೃದಯ ಇರುವುದು ಶಿಕ್ಷಕರಲ್ಲೇ’ ಎಂದರು.

***

ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಪಾಠ ಮಾಡುವ ಶಿಕ್ಷಕರ ಮಕ್ಕಳೂ ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೆ ಏರುತ್ತಾರೆ.
–ಎಸ್‌.ಎ. ರವೀಂದ್ರನಾಥ್, ಶಾಸಕ

***

ಮಕ್ಕಳಲ್ಲಿ ಸುಪ್ತ ಜ್ಞಾನವಿರುತ್ತದೆ. ಶಿಕ್ಷಕರು ಅದನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕು. ಆದರೆ, ವಿದ್ಯಾರ್ಥಿಗಳಲ್ಲಿ ಮಾಹಿತಿ ತುಂಬುವ ಕೆಲಸ ನಡೆಯುತ್ತಿದೆ.
–ಡಿ.ಎಸ್. ರಮೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT