ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸರ್ಕಾರಿ ಶಾಲೆಗಳಿಗೆ ಕಟ್ಟಡ; ಸಂಸದ ಭರವಸೆ

Last Updated 25 ಜುಲೈ 2021, 3:57 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಕೊರತೆ ಇರುವ ಸರ್ಕಾರಿ ಶಾಲಾ–ಕಾಲೇಜುಗಳಿಗೆ ಸ್ವಂತ ಕಟ್ಟಡವನ್ನು ಒದಗಿಸುತ್ತೇವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 50 ಲಕ್ಷ ವೆಚ್ಚದಲ್ಲಿ ನೀಡಲಾಗಿರುವ ವಿಜ್ಞಾನ ವಿಭಾಗದ ಕಂಪ್ಯೂಟರ್ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಾವಣಗೆರೆ ಎಜುಕೇಷನ್ ಹಬ್ ಆಗಿ ಬೆಳೆಯುತ್ತಿದ್ದು, ಶ್ರೀಮಂತರ ಮಕ್ಕಳು ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ತೆತ್ತು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಬಡ ಹಾಗೂ ರೈತರ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದು, ಅಂತಹ ಮಕ್ಕಳ ಕಲಿಕೆಗೆ ಆದ್ಯತೆ ನೀಡಬೇಕಿದೆ. ಶಾಸಕ ಎಸ್.ಎ. ರವೀಂದ್ರನಾಥ್ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಸರ್ಕಾರಿ ಶಾಲಾ–ಕಾಲೇಜುಗಳ ಮಕ್ಕಳು ಶ್ರಮವಹಿಸಿ ಓದಿ ಉಪನ್ಯಾಸಕರು, ವಕೀಲರು, ಐಎಎಸ್, ಐಪಿಎಸ್‌, ಐಎಫ್‌ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಅಧಿಕಾರಿಗಳಾಗುವ ಮೂಲಕ ಕಾಲೇಜಿಗೆ ಹೆಸರು ತರುವ ಕೆಲಸ ಮಾಡಬೇಕು. ಈ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಕಾಲೇಜಿನ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಶಾಲಾ–ಕಾಲೇಜುಗಳ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ ಸರ್ಕಾರಗಳು ಹೆಚ್ಚಿನ ಅನುದಾನ ನೀಡಿವೆ. ಶಾಸಕ ಎಸ್.ಎ.ರವೀಂದ್ರನಾಥ್ ಹೆಚ್ಚಿನ ಅನುದಾನ ತಂದು ಬಡ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದಾರೆ. ಸ್ಮಾರ್ಟ್ಸಿಟಿ ಯೋಜನೆಯಡಿ ₹ 5 ಕೋಟಿ ವೆಚ್ಚದಲ್ಲಿ ವಿವಿಧ ಶಾಲೆಗಳ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಹೇಳಿದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶಕುಂತಲಾ ಎನ್. ಮಾತನಾಡಿ, ‘ಕಾಲೇಜಿನಲ್ಲಿ 1,370 ವಿದ್ಯಾರ್ಥಿಗಳು ಇದ್ದು, ಲ್ಯಾಬ್ ಕೊರತೆಯಿಂದ ಕಳೆದ ವರ್ಷ ಹೆಚ್ಚಿನ ವಿದ್ಯಾರ್ಥಿನಿಯರನ್ನು ದಾಖಲು ಮಾಡಿಕೊಳ್ಳಲು ಆಗಲಿಲ್ಲ. ಈಗ ಸ್ಮಾರ್ಟ್‌ಸಿಟಿಯಿಂದ 40 ಕಂಪ್ಯೂಟರ್, ಸ್ಮಾರ್ಟ್‌ ಕ್ಲಾಸ್‌ಗೆ ಅನುಕೂಲವಾಗುವಂತೆ 5 ಎಲ್‌ಇಡಿ ಟಿವಿ ನೀಡಿದ್ದಾರೆ. ಕಾಲೇಜಿಗೆ ಒಂದು ವಾಟರ್ ಫಿಲ್ಟರ್ ನೀಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಎಸ್‌.ಟಿ. ವೀರೇಶ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ದಿಳ್ಯೆಪ್ಪ, ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದಿಳ್ಯೆಪ್ಪ, ಡಿ.ಎಸ್‌. ಶಿವಂಶಂಕರ್ ಇದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಸುನೀತಾ ಕೆ.ಬಿ. ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT