ದಾವಣಗೆರೆ: ಪಾತಾಳಕ್ಕೆ ಕುಸಿದ ಎಲೆಕೋಸು ದರ: ಕಟಾವು ಮಾಡದೆ ಕೈಚೆಲ್ಲಿದ ರೈತರು

ಜಗಳೂರು (ದಾವಣಗೆರೆ ಜಿಲ್ಲೆ): ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಕುಸಿತದಿಂದ ಎಲೆಕೋಸು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ನೂರಾರು ಎಕೆರೆ ಪ್ರದೇಶಗಳಲ್ಲಿ ಬೆಳೆದಿದ್ದ ಎಲೆಕೋಸು ಬೆಳೆಯನ್ನು ಕಟಾವು ಮಾಡದೆ ಹೊಲದಲ್ಲೇ ಟ್ರ್ಯಾಕ್ಟರ್ ನೇಗಿಲು ಹೊಡೆದು ಮಣ್ಣಿನಲ್ಲಿ ಮುಚ್ಚುತ್ತಿದ್ದಾರೆ.
ಮೂರು ತಿಂಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 10ರಿಂದ ₹ 15 ಇದ್ದ ಎಲೆಕೋಸಿನ ಬೆಲೆ ಪ್ರಸ್ತುತ ಕೇವಲ 50 ಪೈಸೆಯಿಂದ ₹ 1ಕ್ಕೆ ಕುಸಿದಿದೆ. ಈ ಹಿಂದೆ ಹೊಲಕ್ಕೇ ಬರುತ್ತಿದ್ದ ಖರೀದಿದಾರರು, ಬೆಲೆ ಕುಸಿತದಿಂದಾಗಿ ಹೊಲಗಳತ್ತ ಯಾರೂ ಸುಳಿಯುತ್ತಿಲ್ಲ. ಕೆ.ಜಿ.ಗೆ ₹ 1ಕ್ಕೂ ಕೇಳುತ್ತಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಾರೆ.
ದಾವಣಗೆರೆ ತಾಲ್ಲೂಕು, ಜಗಳೂರು ತಾಲ್ಲೂಕಿನಲ್ಲಿ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಎಲೆಕೋಸು ಬೆಳೆಯಲಾಗಿದೆ. ದುಬಾರಿ ಬೆಲೆಯ ಸಸಿಗಳನ್ನು ಖರೀದಿಸಿ ತಂದು, ಗೊಬ್ಬರ ಹಾಕಿ, ಕೀಟ ನಾಶಕಗಳ ಸಿಂಪಡಣೆ ಮಾಡಿ ತಿಂಗಳುಗಟ್ಟಲೆ ನೀರು ಹಾಯಿಸಿ ಜತನದಿಂದ ಕೋಸು ಬೆಳೆದ ರೈತರು ಬೆಲೆ ಕುಸಿತದಿಂದಾಗಿ ಆರ್ಥಿಕ ಕಷ್ಟಕ್ಕೆ ಸಿಲುಕಿದ್ದಾರೆ.
ಮೂರು ತಿಂಗಳ ಹಿಂದೆ ಎಲೆಕೋಸು ಪ್ರತಿ ಕೆ.ಜಿ.ಗೆ ₹ 15ರವರೆಗೆ ಮಾರಾಟವಾಗಿದ್ದರಿಂದ ರೈತರು ಉತ್ತಮ ಆದಾಯ ಪಡೆದುಕೊಂಡಿದ್ದರು. ಇದರ ಪ್ರಭಾವದಿಂದ ಹೆಚ್ಚಿನ ರೈತರು ಎಲೆಕೋಸು ಬೆಳೆದಿದ್ದರು. ಇದರ ನಡುವೆಯೇ ದೆಹಲಿಯೂ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋಸು ಬೆಳೆಯಲಾಗಿದ್ದು, ಉತ್ಪಾದನೆ ಹೆಚ್ಚಾಗಿ ಬೇಡಿಕೆ ಕುಸಿದಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
‘ಸಸಿ, ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಗೆ ಪ್ರತಿ ಎಕರೆಗೆ ₹ 1 ಲಕ್ಷದವರೆಗೆ ಖರ್ಚು ಬಂದಿದೆ. ಮೂರು ನಾಲ್ಕು ತಿಂಗಳು ಹಗಲು ರಾತ್ರಿ ಎನ್ನದೆ ಬೆಳೆಗೆ ನೀರು ಹಾಯಿಸಿ, ಕಣ್ಣಲ್ಲಿ ಕಣ್ಣಿಟ್ಟು ಪೋಷಣೆ ಮಾಡಿದ್ದರಿಂದ ಎಕರೆಗೆ 30 ಟನ್ ಇಳುವರಿ ಬಂದಿದೆ. ಆದರೆ, ನಿರೀಕ್ಷಿಸಲೂ ಸಾಧ್ಯವಾಗದಷ್ಟು ಬೆಲೆ ಕುಸಿತವಾಗಿದ್ದು, ಕಟಾವು ಮಾಡಲು ಸಾಧ್ಯವಿಲ್ಲದಂತಾಗಿದೆ’ ಎಂದು ತಾಲ್ಲೂಕಿನ ಬುಳ್ಳನಹಳ್ಳಿ ಗ್ರಾಮದ ಇ. ನಾಗಪ್ಪ ಅಳಲು ತೋಡಿಕೊಂಡರು.
**
ಎಲೆಕೋಸಿಗೆ ಬೆಲೆ ಕುಸಿದಿರುವುದರಿಂದ ಹೊಲದತ್ತ ತಿರುಗಿ ನೋಡಲು ಮನಸ್ಸಾಗುತ್ತಿಲ್ಲ. ಬೆಳೆಯಲು ಮಾಡಿದ್ದ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಇ. ನಾಗಪ್ಪ, ರೈತ, ಬುಳ್ಳನಹಳ್ಳಿ, ಜಗಳೂರು ತಾಲ್ಲೂಕು
ಜಗಳೂರು ತಾಲ್ಲೂಕಿನ ನೀರಾವರಿ ಕೃಷಿಭೂಮಿಯಲ್ಲಿ ಈ ಬಾರಿ ರೈತರು ಉತ್ತಮವಾಗಿ ಎಲೆಕೋಸು ಬೆಳೆದಿದ್ದರು. ದುರದೃಷ್ಟವಶಾತ್ ಬೆಲೆ ಕುಸಿತವಾಗಿದ್ದರಿಂದ ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ
-ವೆಂಕಟೇಶ ಮೂರ್ತಿ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.