ದಾವಣಗೆರೆ: ‘ಬಿಜೆಪಿ ಆಡಳಿತದಲ್ಲಿನ ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆದಿರುವುದು. ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ನಿಧಿ, ರೈತ ಶಕ್ತಿ ಇತರೆ ಯೋಜನೆ, ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿರುವುದು ಖಂಡನೀಯ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಫಾಲಾಕ್ಷ ಗೌಡ್ರು ದೂರಿದರು.
‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ನಾಡಿನ ರೈತರ ಹಿತದೃಷ್ಟಿಯಿಂದ ರೈತರಪರ ಯೋಜನೆ ಜಾರಿಗೆ ತಂದಿದ್ದನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸಿರುವುದು ರೈತಕುಲಕ್ಕೆ ಎಸಗಿರುವ ದ್ರೋಹ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.
‘ಬಸವರಾಜ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ರೈತ ವಿದ್ಯಾನಿಧಿ ಯೋಜನೆ ಪ್ರಾರಂಭಿಸಿ, 11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದರು. ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರಿಗೆ ಎಕರೆಗೆ ₹250ಗಳಂತೆ 5 ಎಕರೆಗೆ ₹1250ಗಳನ್ನು ಡೀಸೆಲ್ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಯನ್ನೂ ರದ್ಧುಪಡಿಸಿರುವುದು ಸರಿಯಾದ ಕ್ರಮ ಅಲ್ಲ. ಈ ನಡೆಗೆ ಮುಂದಿನ ದಿನಗಳಲ್ಲಿ ಸೂಕ್ತ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಸಿದರು.
‘ಎಪಿಎಂಸಿ ತಿದ್ಧುಪಡಿ ಕಾಯ್ದೆ ರದ್ದುಪಡಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗಿದೆ. ಬೆಳೆಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡುವ ಹಳೆಯ ಅಸಮಂಜಸ ಕಾನೂನು ಮರು ಜಾರಿಗೊಳಿಸಲಾಗುತ್ತಿದೆ. ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ತಾವೇ ಹೋರಾಡಿದ್ದ ಮೇಕೆದಾಟು ಯೋಜನೆ ಹಾಗೂ ಕಳಸ-ಬಂಡೂರಿ ಯೋಜನೆಯ ಬಗ್ಗೆ ಬಜೆಟ್‌ನಲ್ಲಿ ಚಕಾರ ಎತ್ತದಿರುವುದು ಖಂಡನೀಯ. ದ್ವೇಷದ ಕಾರಣಕ್ಕೆ ಕಾಯ್ದೆ ರದ್ದುಪಡಿಸಿದ್ದು, ರೈತರ ಪರ ಯೋಜನೆಗಳ ಮುಂದುವರೆಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಮುಂದಿನ ದಿನಗಳಲ್ಲಿ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಅಣಬೇರು ಶಿವಪ್ರಕಾಶ್, ಬಾತಿ ಶಿವಕುಮಾರ್, ಅಣಜಿ ಗುಡ್ಡಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.