ಗುರುವಾರ , ಜೂಲೈ 9, 2020
26 °C
ಕಾರ್ಮಿಕರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಟೀಕೆ

ಬಂಡವಾಳಶಾಹಿಗಳ ಸಾಲ ಮನ್ನಾ ಖಂಡನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್–19 ವಿರುದ್ಧ ಹೋರಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಹಣವಿಲ್ಲ. ಆದರೆ ದೇಶಕ್ಕೆ ಬಂಡವಾಳಶಾಹಿಗಳ ₹60.607 ಕೋಟಿ ಸಾಲ ಮನ್ನಾ ಮಾಡಿರುವುದು ಯಾವ ನ್ಯಾಯ ಎಂದು ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಪ್ರಶ್ನಿಸಿದರು.

ನಗರದ ಎಐಟಿಯುಸಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ‘ಕೊರೊನಾ ವೈರಸ್ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಆವರಿಸಿಕೊಂಡು ಸಮಸ್ತ ಮಾನವ ಕುಲವನ್ನು ತಲ್ಲಣಗೊಳಿಸಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ’ ಎಂದರು.

‘ಭಾರತದ ಅಭ್ಯುದಯಕ್ಕಾಗಿ ಬೆವರು ಸುರಿಸುವ ಪೌರಕಾರ್ಮಿಕರು, ಬೀಡಿ ಕಟ್ಟುವವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಕ್ಷೌರಿಕರು, ಹಮಾಲರು ಇಸ್ತ್ರಿ ಮಾಡುವ ಕಾರ್ಮಿಕರು, ಮನೆಕೆಲಸ ಮಾಡುವವರು, ತರಗಾರರು, ಬಡಗಿ, ಪ್ಲಂಬರ್, ಟೈಲರ್‌ಗಳು, ಕೃಷಿ ಕಾರ್ಮಿಕರು, ಮಂಡಕ್ಕಿಭಟ್ಟಿ ಕಾರ್ಮಿಕರು ಸೇರಿ ಹಲವು ದುಡಿಯುವ ವರ್ಗಕ್ಕೆ ಕೇಂದ್ರ ಸರ್ಕಾರ ಸಂವಿಧಾನಬದ್ಧ ಹಕ್ಕುಗಳನ್ನು ನೀಡಿಲ್ಲ’ ಎಂದು ಆರೋಪಿಸಿದರು.

‘ದೇಶದಾದ್ಯಂತ ರೈತರು, ಕಾರ್ಮಿಕರು, ಸಣ್ಣ ಕೈಗಾರಿಕೆಯವರು, ಮಧ್ಯಮವರ್ಗ, ವ್ಯಾಪಾರಸ್ಥರಿಗೆ ಹಾಗೂ ಉದ್ಯಮಗಳಿಗೆ ₹68,607 ಕೋಟಿಗಳನ್ನು ನೀಡಬೇಕಿತ್ತು. ಆದರೆ ದೇಶದ ಹಣವನ್ನು ಕೊಳ್ಳೆಯೊಡೆದ ಮೇಹಾಲ್ ಚೋಸ್ಕಿ, ನೀರವ್ ಮೋದಿ, ಬಾಬಾ ರಾಮದೇವ್, ವಿಜಯ್ ಮಲ್ಯ ಅವರ ಸಾಲ ಮನ್ನಾ ಮಾಡಿರುವ ಸರ್ಕಾರದ ನೀತಿ ಜನಸಾಮಾನ್ಯರಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.

‘ರೈತ ಕಾರ್ಮಿಕರು ಒಂದಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿರುವವರನ್ನು, ಕಾರ್ಮಿಕರನ್ನು ಒಡೆದು ಆಳುವ ಶಕ್ತಿಗಳನ್ನು ಬುಡಸಮೇತ ಕಿತ್ತು ಹಾಕಿ, ಬಸವಣ್ಣ, ಕಾರ್ಲ್‌ಮಾರ್ಕ್ಸ್‌, ಡಾ.ಬಿ.ಆರ್‌.ಅಂಬೇಡ್ಕರ್ ಅವರು ಸಾರಿದಂತೆ ಸಮತಾ ಸಮಾಜ, ವರ್ಗರಹಿತ ಸಮಾಜ ಸ್ಥಾಪಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಆನಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಆವರಗೆರೆ ಚಂದ್ರು, ಎಚ್.ಜಿ. ಉಮೇಶ್, ಎಂ.ಬಿ. ಶಾರದಮ್ಮ, ಟಿ.ಎಸ್. ನಾಗರಾಜ, ಸರೋಜಮ್ಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.