ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದ ಕಣದಲ್ಲಿ ಜಾತೀಯತೆ, ಭ್ರಷ್ಟಾಚಾರ ತುಂಬಿದ ಕಾಂಗ್ರೆಸ್‌

ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್‌ ವಾಗ್ದಾಳಿ
Last Updated 19 ಏಪ್ರಿಲ್ 2019, 5:14 IST
ಅಕ್ಷರ ಗಾತ್ರ

ದಾವಣಗೆರೆ: ‘70 ವರ್ಷಗಳಲ್ಲಿ ಕಾಂಗ್ರೆಸ್‌ ಈ ದೇಶದ ರಕ್ತದ ಕಣ–ಕಣಗಳಲ್ಲೂ ಜಾತೀಯತೆ ಹಾಗೂ ದೇಶದ ಆಡಳಿತದ ಪ್ರತಿಯೊಂದು ಅಂಗದಲ್ಲೂ ಭ್ರಷ್ಟಾಚಾರವನ್ನು ತುಂಬಿದೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಾಗ್ದಾಳಿ ನಡೆಸಿದರು.

‘ಮಂಥನ’ ದಾವಣಗೆರೆ ಸಂಸ್ಥೆ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸಮರ್ಥ–ಸದೃಢಸ್ವಾಭಿಮಾನಿ ಭಾರತಕ್ಕಾಗಿ ಮೋದಿ ಮತ್ತೊಮ್ಮೆ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಇಂದು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲೂ ಜಾತೀಯತೆ ನಡೆಯುತ್ತಿದೆ. ನಮ್ಮ ಪಕ್ಷದವರೂ ಸೇರಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ತಮ್ಮ ಜಾತಿಯ ತಹಶೀಲ್ದಾರ, ಆರ್‌.ಟಿ.ಒ ಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಯೋಧರು ಸತ್ತಾಗ ದೇಶದ ಕೆಲ ಪ್ರಚಂಡ ಬುದ್ಧಿವಂತರು ಅವರ ಜಾತಿ, ಧರ್ಮವನ್ನು ಹುಡುಕಿದ್ದರು. ಪಾಕಿಸ್ತಾನದ ಗುಂಡಿಗೆ ಎದೆ ಒಡ್ಡಲು ಜಾತಿ ಮುಖ್ಯವಲ್ಲ; ಎದೆಗಾರಿಕೆ ಮುಖ್ಯ’ ಎಂದರು.

‘ಬಡತನ, ಬಲಿದಾನ, ಸಾಮರ್ಥ್ಯಕ್ಕೆ ಯಾವುದೇ ಜಾತಿ ಇರುವುದಿಲ್ಲ. ಆದರೆ, ಕಾಂಗ್ರೆಸ್‌ನವರು ಈ ದೇಶದಲ್ಲಿ ಪ್ರತಿಯೊಂದನ್ನೂ ಜಾತಿಯಿಂದಲೇ ನೋಡಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳ ಆಡಳಿತದಲ್ಲಿ ಜಾತಿಯನ್ನು ನೋಡದೆ ಯೋಗ್ಯತೆಗೆ ಮಣೆ ಹಾಕಿದರು. ಅಭಿವೃದ್ಧಿ ವಿಷಯದಲ್ಲಿ ಜಾತಿ–ಧರ್ಮವನ್ನು ನೋಡಲಿಲ್ಲ. ಸಾಲುಮರದ ತಿಮ್ಮಕ್ಕ, ಶುಕ್ರಿ ಬೊಮ್ಮನಗೌಡ ಅವರಿಗೆ ಅವರ ಯೋಗ್ಯತೆ ನೋಡಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದರು’ ಎಂದು ಮೋದಿ ಆಡಳಿತ ವೈಖರಿಯನ್ನು ಸಮರ್ಥಿಸಿಕೊಂಡರು.

‘ಮೋದಿ ಜಾತಿ ಕನ್ನಡಕವನ್ನು ತೆಗೆದು ದೇಶವನ್ನು ನೋಡಿದರು. ದೇಶಕ್ಕೆ ಹೊಸ ದಿಕ್ಕು ಕೊಟ್ಟರು. ಐದು ವರ್ಷಗಳ ಆಡಳಿತದಲ್ಲಿ ಜನರ ಅವಶ್ಯಕತೆಗಳನ್ನು ಪೂರೈಸಿದರು. ಮುಂದಿನ ಐದು ವರ್ಷ ಅವಕಾಶ ನೀಡಿದರೆ ದೇಶದ ಜನರ ಆಶೋತ್ತರಗಳನ್ನೂ ಪೂರೈಸುತ್ತಾರೆ. ಹೀಗಾಗಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು’ ಎಂದು ಸಂತೋಷ್‌ ಮನವಿ ಮಾಡಿದರು.

‘ಕಾಂಗ್ರೆಸ್‌ನಲ್ಲಿ ಹಲವರು ಪ್ರಧಾನಿಯಾಗಿದ್ದಾರೆ. ಆದರೆ, ಒಂದು ಕುಟುಂಬದವರು ಮಾತ್ರ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ದೆಹಲಿಯಲ್ಲಿ ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ಸಂಜಯ್‌ ಗಾಂಧಿ ರಾಜೀವ್‌ ಗಾಂಧಿ ಅವರ ಸ್ಮಾರಕವನ್ನು ಎಕರೆಗಟ್ಟಲೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಆದರೆ, ಪಿ.ವಿ. ನರಸಿಂಹರಾವ್‌, ಐ.ಕೆ. ಗುಜ್ರಾಲ್‌ ಅವರ ಸ್ಮಾರಕ ನಿರ್ಮಿಸಲು ಕನಿಷ್ಠ ಎರಡು ಎಕರೆ ಜಾಗವನ್ನೂ ನೀಡಲಿಲ್ಲ. ಮುಂದೆ ಮೃತಪಡುವ ಪ್ರಧಾನಿಗಳಿಗಾಗಿ ಜಾಗವನ್ನೂ ಮೀಸಲಿಟ್ಟಿಲ್ಲ’ ಎಂದು ಅವರು ನೆಹರೂ ಕುಟುಂಬದವರ ಮೇಲೆ ವಾಗ್ದಾಳಿ ನಡೆಸಿದರು.

ಅಧ್ಯಕ್ಷತೆ ವಹಿಸಿದ್ದ ನೇತ್ರತಜ್ಞ ಡಾ. ರವೀಂದ್ರನಾಥ, ‘ಹಿಂದೆ ಚುನಾವಣೆ ಜಾತಿ ಹೆಸರಿನಲ್ಲಿ ನಡೆಯುತ್ತಿತ್ತು. ಇಂದು ರಾಷ್ಟ್ರೀಯತೆ, ಭಾರತದ ರಕ್ಷಣೆ ವಿಷಯ ಮುಂಚೂಣಿಗೆ ಬಂದಿರುವುದು ಒಳ್ಳೆಯ ಬೆಳವಣಿಗೆ’ ಎಂದರು.ಕಿಶೋರ್‌ ಸ್ವಾಗತಿಸಿದರು. ಡಾ. ಜ್ಞಾನಶ್ರೀ ಪ್ರಾರ್ಥಿಸಿದರು.

ಸಂತೋಷ್‌ ಮಾತಿನ ಝಲಕ್‌

* ಕಾಂಗ್ರೆಸ್‌ ಎಂಬುದು ಒಂದು ಮನಸ್ಥಿತಿ. ಕಾಂಗ್ರೆಸ್‌ನ ‘ಸಿ’ ಎಂದರೆ ‘ಕರಪ್ಷನ್‌’ (ಭ್ರಷ್ಟಾಚಾರ) ಹಾಗೂ ಕ್ಯಾಪಿಟಲಿಸಂ (ಬಂಡವಾಳಶಾಹಿ) ಎಂದರ್ಥ. ಹೀಗಾಗಿಯೇ ಮೋದಿ ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಿಸಲು ಮುಂದಾಗಿದ್ದಾರೆ.

* 60 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್‌ ‘ರಾಜಕೀಯ’ ಮತ್ತು ‘ರಾಜಕಾರಣಿ’ ಶಬ್ದ ಕೇಳಿದರೆ ಹೇಸಿಗೆ ಬರುವಂತೆ ಮಾಡಿತ್ತು. ಆದರೆ, ಮೋದಿ ಈ ಎರಡು ಶಬ್ದಗಳಿಗೆ ಮತ್ತೆ ಗೌರವ ತಂದುಕೊಟ್ಟಿದ್ದಾರೆ.

* ಮೋದಿ ಆಡಳಿತದಲ್ಲಿ ಯಾವುದೇ ಸಚಿವರ, ಇಲಾಖೆಯ ಕಾರ್ಯದರ್ಶಿಗಳ ಮೇಲೆ ಭ್ರಷ್ಟಾಚಾರದ ಆರೋಪ ಬಂದಿಲ್ಲ. ಆರ್‌.ಟಿ.ಒ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟದಕ್ಕೂ ಭ್ರಷ್ಟಾಚಾರರಹಿತ ಆಡಳಿತ ಬರುವಂತಾಗಲು ಮೋದಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು.

* ಯುಪಿಎ ಸರ್ಕಾರದ ಅವಧಿಯಲ್ಲಿ 180 ಗಂಭೀರ ವಿಷಯಗಳಿಗೆ ನಿರ್ಣಯ ತೆಗೆದುಕೊಳ್ಳಲಾಗದೇ ಸಚಿವರ ಸಮಿತಿ ರಚಿಸಲಾಗಿತ್ತು. ಮನಮೋಹನ್‌ ಸಿಂಗ್‌ ಅವರಿಗೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಇರಲಿಲ್ಲ. ಆದರೆ, ಮೋದಿ ಅವರಿಗೆ ತಕ್ಷಣವೇ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಸ್ವಾತಂತ್ರ್ಯ ಎರಡೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT